ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರುವುದರ ಹಿಂದೆ ದೊಡ್ಡ ಚುನಾವಣಾ ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮತ ಪತ್ರಗಳಲ್ಲಿನ ತಿದ್ದುಪಡಿ ಮತ್ತು ಅಧಿಕಾರಿಗಳ ಮೇಲಿನ ಒತ್ತಡ ಉಲ್ಲೇಖಿಸಿ, ಕಾಂಗ್ರೆಸ್ ಕಾನೂನು ಹೋರಾಟ ಆರಂಭ.

ಬೆಂಗಳೂರು (ಮೇ 05): ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಮರು ಎಣಿಕೆ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿರುವುದರ ಹಿಂದೆ ದೊಡ್ಡ ಮಟ್ಟದ 'ಚುನಾವಣಾ ಅಕ್ರಮ' ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ವ್ಯವಸ್ಥಿತವಾಗಿ 'ವೋಟ್ ಚೋರಿ' ಮಾಡಿದೆ ಎಂದು ಕಿಡಿಕಾರಿದ್ದಾರೆ. ಶೃಂಗೇರಿಯಲ್ಲಿ ಅಂಚೆ ಮತಗಳ ಮರು ಎಣಿಕೆಯ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಪ್ರಕ್ರಿಯೆಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಬಳಸಿಕೊಂಡು ಅಕ್ರಮ ಎಸಗಲಾಗಿದೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡರು ಈಗಾಗಲೇ ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ ಮತ್ತು ಎಫ್‌ಐಆರ್ ಕೂಡ ದಾಖಲಾಗಿದೆ. ಮತ ಪತ್ರಗಳಲ್ಲಿ ಮಾಡಲಾಗಿರುವ ತಿದ್ದುಪಡಿಗಳಲ್ಲಿ ಇಂಕ್ ವ್ಯತ್ಯಾಸವಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ಅಧಿಕಾರಿಗಳ ಮೇಲೆ ಮೇಲಿನಿಂದ ಬಿದ್ದಿರುವ ಒತ್ತಡಕ್ಕೆ ಸಾಕ್ಷಿಯಾಗಿದೆ' ಎಂದು ಸಿದ್ದರಾಮಯ್ಯ ವಿವರಿಸಿದರು.

ವೀಕ್ಷಕರ ಪಾತ್ರ ಮತ್ತು ಅಧಿಕಾರಿಗಳ ವೈಫಲ್ಯ:

ಚುನಾವಣಾ ವೀಕ್ಷಕರು (Observers) ಎಲ್ಲಾ ಪ್ರಕ್ರಿಯೆ ಸರಿಯಾಗಿದೆ ಎಂದು ಪ್ರಮಾಣೀಕರಿಸುವ ಮುನ್ನವೇ ಫಲಿತಾಂಶ ಘೋಷಣೆ ಮಾಡಿದ್ದು ಹೇಗೆ? ಎಂದು ಸಿಎಂ ಪ್ರಶ್ನಿಸಿದ್ದಾರೆ. 'ನಮಗೆ ದೊರೆತಿರುವ ಮಾಹಿತಿ ಪ್ರಕಾರ, ವೀಕ್ಷಕರು ಕೂಡ ಈ ಗಂಭೀರ ಅಕ್ರಮದ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಅಂಚೆ ಮತಗಳಲ್ಲಿ ತಿದ್ದುಪಡಿ ಆಗಿರುವಾಗ ರಿಟರ್ನಿಂಗ್ ಆಫೀಸರ್ ಆ ಮಾಹಿತಿಯನ್ನು ಕೋರ್ಟ್‌ಗೆ ನೀಡಬೇಕಿತ್ತು. ಆದರೆ, ಕೇವಲ ರಾಜೇಗೌಡರಿಗೆ ಬಿದ್ದ ಮತಗಳನ್ನು ಮಾತ್ರ ಗುರಿಯಾಗಿಸಿ ತಿದ್ದಲಾಗಿದೆ' ಎಂದು ಆರೋಪಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ:

ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ ಮತ್ತು ಆರ್. ಅಶೋಕ್ ಅವರು ಈ ಅಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದಕ್ಕೆ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. 'ಮೊದಲ ಎಣಿಕೆಯ ನಂತರ ಕಾಂಗ್ರೆಸ್ ಏಜೆಂಟ್ ಸುಧೀರ್ ಕುಮಾರ್ ಸೇರಿದಂತೆ ಎಲ್ಲಾ ಪಕ್ಷಗಳ ಏಜೆಂಟ್‌ಗಳು ಸಹಿ ಮಾಡಿದ್ದರು. ಆಗ ಯಾರೂ ಆಕ್ಷೇಪ ಎತ್ತಿರಲಿಲ್ಲ. ಆದರೆ ಈಗ ಮರು ಎಣಿಕೆ ಹೆಸರಿನಲ್ಲಿ ಅಕ್ರಮ ನಡೆಸಲಾಗಿದೆ. ಹಿಂದೆ ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿ ತಿದ್ದಿದ್ದು ಮತ್ತು ಆಳಂದದಲ್ಲಿ ನಡೆದ ಘಟನೆಗಳೇ ಇದಕ್ಕೆ ಸಾಕ್ಷಿ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ' ಎಂದು ಸಿದ್ದರಾಮಯ್ಯ ಗುಡುಗಿದರು.

ಜನರೇ ಬುದ್ಧಿ ಕಲಿಸುತ್ತಾರೆ:

'ಅಧಿಕಾರಕ್ಕಾಗಿ ಇಂತಹ ಅಪರಾಧಗಳನ್ನು ಮಾಡಲು ಬಿಜೆಪಿ ಹಿಂದೆಮುಂದೆ ನೋಡಲ್ಲ. ಆದರೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಅವರೇ ಇವರಿಗೆ ತಕ್ಕ ಬುದ್ಧಿ ಕಲಿಸುತ್ತಾರೆ' ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಶೃಂಗೇರಿ ಚುನಾವಣಾ ಫಲಿತಾಂಶದ ಕಾನೂನು ಹೋರಾಟ ಮುಂದುವರಿಯಲಿದೆ ಎಂಬ ಸುಳಿವು ನೀಡಿದ್ದಾರೆ.