ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ನೀವು ನೂರು ‘ಮನ್ ಕೀ ಬಾತ್’ ಕಾರ್ಯಕ್ರಮಗಳನ್ನು ಮುಗಿಸಿದ್ದಕ್ಕೆ ಅಭಿನಂದನೆಗಳು. ಈಗಲಾದರೂ ‘ಜನ್ ಕೀ ಬಾತ್’ ಕೇಳುತ್ತೀರಾ? ನಿಮ್ಮ ಪಕ್ಷದ ಸಚಿವರೇ ಕಮಿಷನ್ ಹಣ ತಿಂದು ಜೈಲಿಗೆ ಹೋಗುತ್ತಿರುವುದೇಕೆ?
ಬೆಂಗಳೂರು (ಮೇ.01): ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ನೀವು ನೂರು ‘ಮನ್ ಕೀ ಬಾತ್’ ಕಾರ್ಯಕ್ರಮಗಳನ್ನು ಮುಗಿಸಿದ್ದಕ್ಕೆ ಅಭಿನಂದನೆಗಳು. ಈಗಲಾದರೂ ‘ಜನ್ ಕೀ ಬಾತ್’ ಕೇಳುತ್ತೀರಾ? ನಿಮ್ಮ ಪಕ್ಷದ ಸಚಿವರೇ ಕಮಿಷನ್ ಹಣ ತಿಂದು ಜೈಲಿಗೆ ಹೋಗುತ್ತಿರುವುದೇಕೆ? 40 ಪರ್ಸೆಂಟ್ ಕಮಿಷನ್ ಬಗ್ಗೆ ಉತ್ತರಿಸುವ ಧೈರ್ಯ ತೋರಿಲ್ಲ ಯಾಕೆ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿರುವ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಪೆಟ್ರೋಲ್ ಬೆಲೆ ಹೆಚ್ಚಾಗಿರುವುದು ಯಾಕೆ? ‘ನಾ ಖಾವುಂಗಾ ನಾ ಖಾನೆ ದೂಂಗಾ’ ಎಂದು ನೀವು ಹೇಳಿದರೂ, ನಿಮ್ಮ ಪಕ್ಷದ ಸಚಿವರೇ ಕಮಿಷನ್ ಹಣ ತಿಂದು ಜೈಲಿಗೆ ಹೋಗುತ್ತಿರುವುದೇಕೆ? ರಾಜ್ಯದ ಸಚಿವರು ಸರ್ಕಾರಿ ಗುತ್ತಿಗೆಗಳಲ್ಲಿ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನಿಮಗೆ ಪತ್ರ ಬರೆದಿದ್ದರೂ ಅದಕ್ಕೆ ಉತ್ತರಿಸುವ ಧೈರ್ಯ ತೋರಿಲ್ಲ ಯಾಕೆ? ಎಂದು ಕೇಳಿದ್ದಾರೆ.
ಬಿಜೆಪಿ ಅಧಿಕಾರದಲ್ಲಿರುವವರೆಗೆ ಅಚ್ಛೇದಿನ್ ಬರುವುದಿಲ್ಲ: ಡಿ.ಕೆ.ಶಿವಕುಮಾರ್
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾಗಿರುವ ತೆರಿಗೆ ಹಂಚಿಕೆಯ ಪಾಲು ಶೇಕಡಾ 4.72ರಿಂದ ಶೇಕಡಾ 3.64ಕ್ಕೆ ಇಳಿದದ್ದು ಯಾಕೆ? ಪಿಎಸ್‌ಐ ನೇಮಕದಲ್ಲಿ ನೂರಾರು ಕೋಟಿ ರು. ಅವ್ಯವಹಾರ ಮಾಡಿ 54 ಸಾವಿರ ಅಭ್ಯರ್ಥಿಗಳ ಜೀವನ ಹಾಳು ಮಾಡಿದ್ದರ ವಿರುದ್ಧ ಮೌನವಾಗಿರುವುದು ಯಾಕೆ? ನೀವು ರೋಡ್ ಶೋ ನಡೆಸಿರುವ ಬೆಂಗಳೂರು ರಸ್ತೆಗಳಲ್ಲಿರುವ 25,000 ಗುಂಡಿಗಳನ್ನು ಮುಚ್ಚಲು 7200 ಕೋಟಿ ರು. ಅಂದರೆ ಒಂದು ಗುಂಡಿಗೆ ತಲಾ 9.20 ಲಕ್ಷ ರು. ಖರ್ಚು ಮಾಡಿದರೂ ಗುಂಡಿಗಳು ಉಳಿದುಕೊಂಡಿರುವುದು ಯಾಕೆ ಎಂಬುದು ಸೇರಿದಂತೆ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ಖಾರವಾಗಿ ಪ್ರಶ್ನಿಸಿದ್ದಾರೆ.
ಕೇಸರಿ ಪೇಟ ನಿರಾಕರಿಸಿದ ಸಿದ್ದು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ತುಮಕೂರು ಜಿಲ್ಲೆ ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ, ಅವರಿಗೆ ಕೇಸರಿ ಬಣ್ಣದ ಪೇಟ, ಕಾಂಗ್ರೆಸ್ ಪಕ್ಷದ ಶಾಲು ಮತ್ತು ಹಾರ ಹಾಕಲು ಅಭಿಮಾನಿಗಳು ಮುಂದಾದಾಗ, ‘ನನಗೆ ಕೇಸರಿ ಬಣ್ಣದ ಪೇಟ ಬೇಡ’ ಎಂದು ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದರು. ಪೇಟ ನಿರಾಕರಿಸಿ, ಕಾಂಗ್ರೆಸ್ ಪಕ್ಷದ ಶಾಲು ಮತ್ತು ಹಾರವನ್ನು ಮಾತ್ರ ಹಾಕಿಸಿಕೊಂಡರು. ಇದೇ ವೇಳೆ, ಶಿರಾದ ಗಡಾರಿ ಹನುಮಂತಪ್ಪ ಎಂಬುವರು ಸಿದ್ದುಗೆ ಟಗರನ್ನು ಉಡುಗೊರೆಯಾಗಿ ನೀಡಿದರು.
ಭ್ರಷ್ಟಾಚಾರವನ್ನು ಎಂದೆಂದಿಗೂ ಬಿಜೆಪಿ ಸಹಿಸುವುದಿಲ್ಲ: ಕೇಂದ್ರ ಸಚಿವ ರಾಜನಾಥ್ ಸಿಂಗ್
ಬಳಿಕ, ತಿಪಟೂರು ತಾಲೂಕು ಚಿಕ್ಕನಾಯಕನ ಹಳ್ಳಿಯಲ್ಲಿ ಕುರುಬರು ಕಂಬಳಿ ಹಾರ, ವೀರಶೈವ ಸಮುದಾಯದ ಮುಖಂಡರು ರುದ್ರಾಕ್ಷಿ ಹಾರ, ಯಾದವ ಸಮುದಾಯದ ಮುಖಂಡರು ಕುರಿಮರಿ, ದಲಿತ ಮುಖಂಡರು ಬುದ್ಧನ ವಿಗ್ರಹವನ್ನು ಉಡುಗೊರೆಯಾಗಿ ನೀಡಿ, ಸನ್ಮಾನಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
