ಭ್ರಷ್ಟಾಚಾರವನ್ನು ಎಂದೆಂದಿಗೂ ಬಿಜೆಪಿ ಸಹಿಸುವುದಿಲ್ಲ: ಕೇಂದ್ರ ಸಚಿವ ರಾಜನಾಥ್ ಸಿಂಗ್
ಬಿಜೆಪಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಭ್ರಷ್ಟರನ್ನು ಬಿಡುವುದೂ ಇಲ್ಲ. ಸ್ವಚ್ಛ ಆಡಳಿತವೇ ನಮ್ಮ ಪಕ್ಷದ ಮುಖ್ಯ ಗುರಿ. ಭ್ರಷ್ಟರಿಗೆ ಬಿಜೆಪಿ ಸದಾ ಸಿಂಹಸ್ವಪ್ನವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಮಂಡ್ಯ (ಮೇ:01): ಬಿಜೆಪಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಭ್ರಷ್ಟರನ್ನು ಬಿಡುವುದೂ ಇಲ್ಲ. ಸ್ವಚ್ಛ ಆಡಳಿತವೇ ನಮ್ಮ ಪಕ್ಷದ ಮುಖ್ಯ ಗುರಿ. ಭ್ರಷ್ಟರಿಗೆ ಬಿಜೆಪಿ ಸದಾ ಸಿಂಹಸ್ವಪ್ನವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವುದೇ ಮಂತ್ರಿ ಭ್ರಷ್ಟಾಚಾರ ಮಾಡಲು ಬಿಡುವುದಿಲ್ಲ. ಭ್ರಷ್ಟಾಚಾರ ಮಾಡುವವರನ್ನು ಜೈಲಿಗೆ ಕಳುಹಿಸುತ್ತೇವೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಭ್ರಷ್ಟಾಚಾರ ಇತ್ತು. ಪ್ರಧಾನಿಯಾಗಿದ್ದ ರಾಜೀವ್‌ಗಾಂಧಿ ಅವರೇ ಭ್ರಷ್ಟಾಚಾರ ತಡೆಯಲು ಆಗದೆ ನಿಸ್ಸಹಾಯಕರಾಗಿದ್ದರು ಎಂದು ದೂರಿದರು.
ಮೋದಿ ಪ್ರಧಾನಿಯಾದ ಬಳಿಕ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 10 ಸಾವಿರ ರು. ಕೊಡುತ್ತಿದ್ದಾರೆ. ಇದರಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಹಣ ನೇರವಾಗಿ ರೈತರ ಖಾತೆ ಸೇರುತ್ತಿದೆ ಎಂದು ಹೇಳಿದರು. 2018ರಲ್ಲಿ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಅತಂತ್ರ ಸರ್ಕಾರ ಎದುರಾಗಿತ್ತು. ಈ ಬಾರಿ ಮತ್ತೆ ಅತಂತ್ರ ಸರ್ಕಾರ ಬರಬಾರದು ಎನ್ನುವುದು ನನ್ನ ಭಾವನೆ. ರಾಜ್ಯದ ಜನರು ಬಿಜೆಪಿಯನ್ನು ಬೆಂಬಲಿಸಿ ಬಹುಮತದಿಂದ ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರದಲ್ಲಿ ನಮಗೆ ಸ್ಥಾನ ಇಲ್ಲ, ರಾಜ್ಯದಲ್ಲೂ ಅಧಿಕಾರ ಸಿಗೋಲ್ಲ ಎನ್ನುವುದು ಕಾಂಗ್ರೆಸ್‌ನವರಿಗೆ ಈಗಾಗಲೇ ಅರಿವಾಗಿದೆ.
ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಬಂಧುಗಳಿಗೆ ಪತ್ರ ಬರೆದ ಚಿಕ್ಕಮಗಳೂರು ವಿಚಾರಣಾಧೀನ ಖೈದಿಗಳು!
ಹೀಗಾಗಿ ಧರ್ಮದ ಆಧಾರದಲ್ಲಿ ಜನರ ಮನಸ್ಸನ್ನು ಒಡೆಯುತ್ತಿದ್ದಾರೆ. ನಾವು ಜನರನ್ನ ಜೋಡಿಸುವ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ನವರು ಜನರನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ ಎಂದು ಮೂದಲಿಸಿದರು. ಮೋದಿ ಅವರ ಜನಪ್ರಿಯತೆಯನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ಆ ಹೊಟ್ಟೆಉರಿ, ಹತಾಶೆಗೆ ಈ ರೀತಿ ವರ್ತಿಸುತ್ತಿದ್ದಾರೆ. ಭಗವಂತ ಅವರಿಗೆ ಹೊಟ್ಟೆಉರಿ ತಡೆದುಕೊಳ್ಳುವ ಶಕ್ತಿ ಕೊಡು ಎಂದು ಕೇಳಿಕೊಳ್ಳುತ್ತೇನೆ ಎಂದು ಲೇವಡಿ ಮಾಡಿದರು.
ನಾವು ಯಾವಾಗಲೂ ಪ್ರಾಮಾಣಿಕವಾಗಿ ನಡೆದುಕೊಂಡು ಬಂದ ಜನ. ಕಾಶ್ಮೀರವನ್ನು ಭಾರತದ ಭಾಗವಾಗಿಯೇ ಉಳಿಸಿದೆವು. ನಾವು ಹೇಳಿದಂತೆ ನಡೆದುಕೊಳ್ಳುವ ಪಕ್ಷ ನಮ್ಮದು. ಪಿಎಫ್‌ಐ ಸಂಘಟನೆ ದೇಶವಿರೋಧಿ ಚಟುವಟಿಕೆಗಳಿಂದ ಗೊಂದಲ ಸೃಷ್ಟಿಸುತ್ತಿತ್ತು. ಅದನ್ನ ಬ್ಯಾನ್ ಮಾಡುವುದಾಗಿ ಹೇಳಿದ್ದೆವು. ಅದನ್ನು ನಿಷೇಧಿಸಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದೆವು. ಈಗ ಅದನ್ನೂ ಮಾಡಿ ತೋರಿಸಿದ್ದೇವೆ. ನಮ್ಮ ಪ್ರಧಾನಿ ಆತ್ಮ ನಿರ್ಭರತೆ ಬಗ್ಗೆ ಹೇಳುತ್ತಿದ್ದರು. ಅದಕ್ಕೆ ಪೂರಕವಾದ ಎಲ್ಲ ಶಸ್ತ್ರಾಸ್ತ್ರವನ್ನೂ ನಮ್ಮಲ್ಲೇ ತಯಾರು ಮಾಡುತ್ತಿದ್ದೇವೆ ಎಂದು ಹೇಳಿದರು.
ಹಿಂದೆ ಭಾರತಕ್ಕೆ ಯಾರೂ ಗೌರವ ಕೊಡುತ್ತಿರಲಿಲ್ಲ. ಭಾರತೀಯರ ಮಾತನ್ನು ಯಾರೂ ಕೇಳುತ್ತಿರಲಿಲ್ಲ. ಇವತ್ತು ಭಾರತದ ಗೌರವ, ಘನತೆ ವಿಶ್ವ ಮಟ್ಟದಲ್ಲಿ ಹೆಚ್ಚಿದೆ. ಭಾರತಕ್ಕೆ ಗೌರವ ಕೂಡ ಸಿಗುತ್ತಿದೆ. ಭಾರತೀಯರು ಪ್ರಧಾನಿ ಮಾತಿಗಾಗಿ ಕಾಯುತ್ತಿದ್ದಾರೆ. ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ ವಿಶ್ವದಲ್ಲಿ ಗೌರವ ಇದೆ. ಇದೇ ಕಾರಣದಿಂದ ರಷ್ಯಾ-ಉಕ್ರೇನ್ ಕದನದಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಯಿತು. ಸುಡಾನ್‌ನಲ್ಲಿ ಸಿಲುಕಿದ್ದವರನ್ನು ಆಪರೇಷನ್ ಕಾವೇರಿ ಹೆಸರಲ್ಲಿ ರಕ್ಷಣೆ ಮಾಡಿದ್ದೇವೆ. ದೇಶರಕ್ಷಣೆ, ಸುರಕ್ಷತೆ, ಸ್ವಚ್ಛ ಆಡಳಿತಕ್ಕೆ ಬಿಜೆಪಿ ಗೆಲ್ಲಿಸುವಂತೆ ಮತದಾರರನ್ನು ಕೋರಿದರು.
ಬಿಜೆಪಿ ಅಭ್ಯರ್ಥಿ ಎಸ್. ಸಚ್ಚಿದಾನಂದ ಮಾತನಾಡಿ, ಕಳೆದ 9 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ವಿಶ್ವವೇ ಮೆಚ್ಚುವ ಆಡಳಿತ ನೀಡುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಒಬ್ಬ ಮಂತ್ರಿಯ ಮೇಲೂ ಭ್ರಷ್ಟಾಚಾರದ ಆರೋಪ ಕೇಳಿಬರಲಿಲ್ಲ. ಸ್ವಚ್ಛ ಆಡಳಿತವನ್ನು ಕೊಡುತ್ತಾ ಜನರ ಮನಸ್ಸನ್ನು ಗೆದ್ದಿದೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಉಡುಪಿ: ಮನೆಯಲ್ಲಿಯೇ ಮತದಾನ ಹಕ್ಕು ಚಲಾಯಿಸಿದ ಹಿರಿಯರು, ವಿಕಲಚೇತನರು
’ಮಸೀದಿ ಕೆಡವಿ, ದೇಗುಲ ನಿರ್ಮಿಸಿ’: ಶ್ರೀರಂಗಪಟ್ಟಣದಲ್ಲಿ ಮತಾಂಧ ಟಿಪ್ಪು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲವನ್ನು ಕೆಡವಿ ನಿರ್ಮಿಸಿರುವ ಮಸೀದಿಯನ್ನು ಕೆಡವಿ ಅಲ್ಲಿ ಮತ್ತೆ ದೇಗುಲ ನಿರ್ಮಾಣ ಮಾಡಬೇಕು ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸಚ್ಚಿದಾನಂದ ಹೇಳಿದರು. ದೇಗುಲ ಕೆಡವಿರುವುದರಿಂದ ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಜಾಮಿಯಾ ಮಸೀದಿಯ ಹೊರ ಮತ್ತು ಒಳಭಾಗದಲ್ಲಿ ಹಿಂದೂ ದೇಗುಲದ ಕುರುಹುಗಳಿರುವ ಚಿತ್ರಗಳಿವೆ. ಐತಿಹಾಸಿಕ ದಾಖಲೆಗಳೂ ಇವೆ. ಇದೆಲ್ಲವನ್ನೂ ಪರಾಮರ್ಶಿಸಿ ಮತ್ತೆ ಶ್ರೀ ಹನುಮ ದೇಗುಲ ನಿರ್ಮಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ವಿನಂತಿಸಿದರು.