ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವವರೆಗೂ ಜನರಿಗೆ ಅಚ್ಛೇದಿನ್‌ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದರು. 

ಮಂಡ್ಯ (ಮೇ:01): ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವವರೆಗೂ ಜನರಿಗೆ ಅಚ್ಛೇದಿನ್‌ ಬರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟೀಕಿಸಿದರು. ಪಟ್ಟಣದ ಭಕ್ತ ಕನಕದಾಸ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಅಚ್ಛೇದಿನ್‌ ಆಯೇಗಾ, ಅಚ್ಛೇ ದಿನ್‌ ಆಯೇಗಾ ಎಂದು ಹೇಳುತ್ತಲೇ ಬಂದ ಬಿಜೆಪಿ ದಿನಬಳಕೆ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿತು. ಅಡುಗೆ ಸಿಲಿಂಡರ್‌, ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಸಿ, ಜಿಎಸ್‌ಟಿ ಹೊರೆ ಹಾಕಿ ಜನಸಾಮಾನ್ಯರ ಬದುಕನ್ನು ದುರ್ಬರಗೊಳಿಸಿತು ಎಂದು ಆರೋಪಿಸಿದರು.

ಮಂಡ್ಯದಲ್ಲಿ ಕಳೆದ ಬಾರಿ ಒಂದು ಸೀಟು ಗೆಲ್ಲುವುದಕೆ ಆಗಲಿಲ್ಲ, ಈ ಬಾರಿ ಆಶೀರ್ವಾದ ಮಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಮಳವಳ್ಳಿ ಜನರು ಬೆಂಬಲಿಸಬೇಕು. ಕಾಂಗ್ರೆಸ್‌ ಇತಿಹಾಸ ಈ ದೇಶದ ಇತಿಹಾಸವಾಗಿದೆ. ಕಳೆದ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟು ಕುಮಾರಸ್ವಾಮಿಗೆ ದರ್ಬಾರ್‌ ಮಾಡು ಎಂದು ಅಧಿಕಾರ ಕೊಟ್ಟೆವು. ಆದರೆ, ಅವರು ಉಳಿಸಿಕೊಳ್ಳಲಿಲ್ಲ. ನಂತರ ಬಿಜೆಪಿ ಸರ್ಕಾರ ಜನ ವಿರೋಧಿ ನೀತಿಯಿಂದ ಜನಸಾಮಾನ್ಯರು ನೆಮ್ಮದಿ ಕಳೆದುಕೊಂಡಿದ್ದಾರೆ ಎಂದರು. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ ಇಬ್ಬರು ಎಂಎಲ್‌ಸಿಗಳು ಗೆದ್ದಿದ್ದಾರೆ. ಬದಲಾವಣೆಗಾಗಿ ಜನರು ಬಯಸುತ್ತಿದ್ದಾರೆ ಎನ್ನುವುದು ಇದರಿಂದ ಸಾಬೀತಾಗಿದೆ. 

ಮೇ.2ರಂದು ಚಿತ್ರದುರ್ಗಕ್ಕೆ ಪ್ರಧಾನಿ ಮೋದಿ ಭೇಟಿ: ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಅಡ್ಡದಾರಿಯಲ್ಲಿ ಅಧಿಕಾರ ಹಿಡಿದು ದುಷ್ಟ ಆಡಳಿತ ನಡೆಸಿದ್ದರು. ರಾಜ್ಯದಲ್ಲಿ ಹಲವಾರು ನಾಯಕರು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷವನ್ನು ಬಿಟ್ಟು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್‌ ಪಕ್ಷದ ಉತ್ತಮ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿಯನ್ನು ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿಯೇ ಜಾರಿಗೆ ತರುತ್ತೇವೆ, ಇವೆಲ್ಲಾ ಘೋಷಣೆಗಳನ್ನು ಜಾರಿ ಮಾಡದಿದ್ದರೆ ಮತ್ತೆ ಓಟ್‌ ಕೇಳೋಕೆ ಬರಲ್ಲ. ಇದು ಕಾಂಗ್ರೆಸ್‌ ಪಕ್ಷದ ಶಪಥ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಕುಸುಮಾ ಪರ ಡಿ.ಕೆ.ಶಿವಕುಮಾರ್‌ ಪ್ರಚಾರ: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌. ಕುಸುಮಾ ಗೆಲುವು ಸಾಧಿಸಿದರೆ ಕ್ಷೇತ್ರದಲ್ಲಿನ ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು. ಮತ್ತಿಕೆರೆಯಲ್ಲಿ ಆಯೋಜಿಸಲಾಗಿದ್ದ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌. ಕುಸುಮಾ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರದಿಂದ ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಸೇರಿ ದಿನ ಬಳಕೆ ವಸ್ತುಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಬರಬೇಕೆಂದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕಿದೆ. 

ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಬಂಧುಗಳಿಗೆ ಪತ್ರ ಬರೆದ ಚಿಕ್ಕಮಗಳೂರು ವಿಚಾರಣಾಧೀನ ಖೈದಿಗಳು!

ಕ್ಷೇತ್ರದ ಮಹಿಳೆಯರು ಮೇ 10ರಂದು ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಪೂಜೆ ಮಾಡಿ ನಂತರ ಪ್ರಜಾಪ್ರಭುತ್ವ ಸಂವಿಧಾನ ರಕ್ಷಣೆ ಮಾಡಲು ಮತ ಚಲಾಯಿಸಬೇಕು. ಜನ ವಿರೋಧಿ, ಜಾತಿವಾದಿ ಬಿಜೆಪಿಯನ್ನು ಸೋಲಿಸಬೇಕು ಎಂದು ಹೇಳಿದರು. ಎಚ್‌. ಕುಸುಮಾ ಗೆಲುವು ಸಾಧಿಸಿದರೆ ಕ್ಷೇತ್ರದಲ್ಲಿ ಅಕ್ರಮವಿಲ್ಲದ, ಕಾಮಗಾರಿಗಳಿಗೆ ಕಮಿಷನ್‌ ಪಡೆಯದೆ ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ. ಜನರ ಸಮಸ್ಯೆಗಳನ್ನು ಆಲಿಸಿ ಕೂಡಲೆ ಪರಿಹಾರ ನೀಡಲಾಗುತ್ತದೆ ಎಂದರು. ಸಂಸದ ಡಿ.ಕೆ. ಸುರೇಶ್‌, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ. ರಾಜಕುಮಾರ್‌, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಬಿ.ಆರ್‌. ನಂಜುಂಡಪ್ಪ, ನಗರಸಭೆ ಮಾಜಿ ಅಧ್ಯಕ್ಷ ಹನುಂತರಾಯಪ್ಪ ಮೊದಲಾದವರು ಇದ್ದರು.