ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬವನ್ನು ಈ ಬಾರಿ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, 'ಗೌರವ ಸಮರ್ಪಣಾ' ಸಮಾರಂಭ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ 84ನೇ ವರ್ಷಕ್ಕೆ ಕಾಲಿಡಲಿದ್ದು, ಇದರಂಗವಾಗಿ ಅವರ ಹುಟ್ಟುಹಬ್ಬವನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಅದ್ದೂರಿಯಾಗಿ ಆಚರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ಅವರ ಅದ್ದೂರಿ ಹುಟ್ಟುಹಬ್ಬದ ಆಚರಣೆಗೆ ಶಿಕಾರಿಪುರ ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಡಿಯೂರಪ್ಪನವರು ಪ್ರತಿವರ್ಷ ಬೆಂಗಳೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಶಿಕಾರಿಪುರದಲ್ಲಿ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಈ ಬಾರಿ ಕುಟುಂಬದಿಂದ ದೊಡ್ಡಮಟ್ಟದಲ್ಲಿ ಹುಟ್ಟು ಹಬ್ಬದ ಆಚರಣೆ ನಡೆಯಲಿದೆ. ಹುಟ್ಟುಹಬ್ಬದ ನಿಮಿತ್ತ ಬೆಳಗ್ಗೆ ಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4 ಗಂಟೆಗೆ ಯಡಿಯೂರಪ್ಪನವರ ಅಭಿಮಾನಿ ಬಳಗದಿಂದ ಶಿಕಾರಿಪುರದ ಎಸ್‌.ಎಸ್‌. ರಸ್ತೆಯಲ್ಲಿರುವ ಕುಮದ್ವತಿ ಕಾಲೇಜು ಆವರಣದ ಏಕಲವ್ಯ ಕ್ರೀಡಾಂಗಣದಲ್ಲಿ ಸಮಾಜದ ‘ಗೌರವ ಸಮರ್ಪಣಾ’ ಸಮಾರಂಭ ಆಯೋಜಿಸಲಾಗಿದೆ. ಈ ವೇಳೆ, ಯಡಿಯೂರಪ್ಪನವರು ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಶಕ್ತಿಯಾಗಿ ರೂಪುಗೊಳ್ಳಲು ಕಾರಣಕರ್ತರಾದ ಕ್ಷೇತ್ರದ ಎಲ್ಲ ವರ್ಗದ ಜನತೆ, ಮುಖಂಡರನ್ನು ವೇದಿಕೆಯಲ್ಲಿ ಗೌರವಿಸುವ ಅತ್ಯಂತ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಭಿನಂದನಾ ಭಾಷಣ ಮಾಡಲಿರುವ ಪ್ರಹ್ಲಾದ್ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿಯವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಆನಂದಪುರದ ಶ್ರೀ ಮನಿಪ್ರ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ, ತಾಲೂಕಿನ ಎಲ್ಲಾ ಮಠಾಧೀಶರು ಸಾನಿಧ್ಯ ವಹಿಸಲಿದ್ದಾರೆ.

ಅರ್ಜುನ್ ಜನ್ಯಾ ತಂಡದಿಂದ ನಡೆಯಲಿರುವ ‘ಸಂಗೀತ ಹಬ್ಬ’

ಬಳಿಕ, ಸಂಜೆ, ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ತಂಡದಿಂದ ನಡೆಯಲಿರುವ ‘ಸಂಗೀತ ಹಬ್ಬ’ದಲ್ಲಿ ಅರ್ಜುನ್‌ ಜನ್ಯಾ, ಪ್ರಸಿದ್ದ ನಿರೂಪಕಿ ಅನುಶ್ರೀ, ಖ್ಯಾತ ಗಾಯಕಿ ಮಂಗ್ಲಿ, ಪೃಥ್ವಿಭಟ್, ವ್ಯಾಸರಾಜ್, ಐಶ್ವರ್ಯ, ಬಿಗ್‌ಬಾಸ್ ವಿಜೇತ ಗಿಲ್ಲಿ ನಟರಾಜ್, ಕಾವ್ಯ ಸಹಿತ ಹಲವು ಖ್ಯಾತನಾಮ ಕಲಾವಿದರಿಂದ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮಕ್ಕಾಗಿ ಏಕಲವ್ಯ ಕ್ರೀಡಾಂಗಣದಲ್ಲಿ ವಿಶಾಲ ವೇದಿಕೆ ನಿರ್ಮಿಸಲಾಗಿದ್ದು, ಒಂದು ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ. ಇಡೀ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಪಟ್ಟಣದ ಪ್ರಮುಖ ಬೀದಿ, ವೃತ್ತಗಳಲ್ಲಿ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್‌ಗಳು, ಬಿಜೆಪಿ ಬ್ಯಾನರ್‌ಗಳು ರಾರಾಜಿಸುತ್ತಿವೆ. ಇಡೀ ಶಿಕಾರಿಪುರ ಪಟ್ಟಣ ಯಡಿಯೂರಪ್ಪಮಯವಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.