ಕಲಬುರಗಿ ಜಿಲ್ಲೆಯ ಚಿತ್ತಾಪುರ ಮೀಸಲು ಮತಕ್ಷೇತ್ರ ಜಿದ್ದಾಜಿದ್ದಿ ರಾಜಕೀಯದಿಂದಾಗಿ ರಾಜ್ಯದ ಗಮನ ಸೆಳೆಯುತ್ತಿದೆ. ಕ್ಷೇತ್ರದಿಂದ ಸತತ 2 ಬಾರಿ ಆಯ್ಕೆಯಾಗಿರುವ ಪ್ರಿಯಾಂಕ್‌ ಖರ್ಗೆ ಪುನರಾಯ್ಕೆ ಜೊತೆಗೆ ಹ್ಯಾಟ್ರಿಕ್‌ ಸಾಧನೆ ಉಮೇದಿನಲ್ಲಿದ್ದರೆ, ಬಿಜೆಪಿ ನಾಯಕರು ಪ್ರಿಯಾಂಕ್‌ ಖರ್ಗೆ ಓಟಕ್ಕೆ ಬ್ರೇಕ್‌ ಹಾಕಿ ಕಮಲ ಅರಳಿಸುವ ತವಕದಲ್ಲಿದ್ದಾರೆ. 

ಶೇಷಮೂರ್ತಿ ಅವಧಾನಿ

ಕಲಬುರಗಿ (ಫೆ.24): ಕಲಬುರಗಿ ಜಿಲ್ಲೆಯ ಚಿತ್ತಾಪುರ ಮೀಸಲು ಮತಕ್ಷೇತ್ರ ಜಿದ್ದಾಜಿದ್ದಿ ರಾಜಕೀಯದಿಂದಾಗಿ ರಾಜ್ಯದ ಗಮನ ಸೆಳೆಯುತ್ತಿದೆ. ಕ್ಷೇತ್ರದಿಂದ ಸತತ 2 ಬಾರಿ ಆಯ್ಕೆಯಾಗಿರುವ ಪ್ರಿಯಾಂಕ್‌ ಖರ್ಗೆ ಪುನರಾಯ್ಕೆ ಜೊತೆಗೆ ಹ್ಯಾಟ್ರಿಕ್‌ ಸಾಧನೆ ಉಮೇದಿನಲ್ಲಿದ್ದರೆ, ಬಿಜೆಪಿ ನಾಯಕರು ಪ್ರಿಯಾಂಕ್‌ ಖರ್ಗೆ ಓಟಕ್ಕೆ ಬ್ರೇಕ್‌ ಹಾಕಿ ಕಮಲ ಅರಳಿಸುವ ತವಕದಲ್ಲಿದ್ದಾರೆ. ಪ್ರಿಯಾಂಕ್‌ ಖರ್ಗೆ ಪಿಎಸ್‌ಐ ಹಗರಣ, ಬಿಟ್‌ಕಾಯಿನ್‌, ಸಮಾಜ ಕಲ್ಯಾಣ ಇಲಾಖೆ ಅಕ್ರಮ ಸೇರಿ ಹತ್ತು ಹಲವು ವಿಚಾರಗಳನ್ನಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮಾಡುತ್ತಿರುವ ಟೀಕಾ ಪ್ರಹಾರದಿಂದ ಬಿಜೆ​ಪಿ​ಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ, ಸಂಘ ಪರಿವಾರದ ವಿರುದ್ಧ ಪದೇ ಪದೆ ಗುಡುಗುವ ಮೂಲಕ ಕೇಸ​ರಿ​ಪಡೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಸೆಂಬ್ಲಿ ಚುನಾವಣೆಯಲ್ಲಿ ಪ್ರಿಯಾಂಕ್‌ಗೆ 3 ಬಾರಿ ಪೈಪೋಟಿ ನೀಡಿದ್ದ ಮಾಜಿ ಶಾಸಕ ವಾಲ್ಮೀಕಿ ನಾಯಕ ನಿಧನರಾಗಿದ್ದಾರೆ. ಬಿಜೆಪಿ ಇಲ್ಲಿರುವ ಒಬಿಸಿ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ಕಾಂಗ್ರೆಸ್‌ ಕೋಟೆ ವಶಕ್ಕೆ ರಣತಂತ್ರ ಹಣೆಯುತ್ತಿದೆಯಾದರೂ ಇಲ್ಲಿಂದ ಕಮಲ ಅಭ್ಯರ್ಥಿ ಯಾರೆಂಬುದೇ ರಹಸ್ಯ. ವಾಲ್ಮೀಕಿ ನಾಯಕ ಪುತ್ರ ವಿಠ್ಠಲ ನಾಯಕ್‌, ಮಣಿಕಂಠ ರಾಠೋಡ್‌, ಅರವಿಂದ ಚವ್ಹಾಣ್‌, ಸುರೇಶ್‌ ರಾಠೋಡ್‌, ಬಸವರಾಜ ಬೆಣ್ಣೂರಕರ್‌, ಧರ್ಮಣ್ಣ ಇಟಗಿ, ಸುನಿಲ್‌ ವಲ್ಯಾಪುರ, ಅಯ್ಯಪ್ಪ ರಾಮತೀರ್ಥ ಸೇರಿ 8ಕ್ಕೂ ಹೆಚ್ಚು ಮಂದಿ ಟಿಕೆಟ್‌ ಕೇಳಿದ್ದಾರೆ. ಕಲಬುರಗಿ ಹಾಲಿ ಸಂಸದ ಡಾ.ಉಮೇಶ್‌ ಜಾಧವ್‌, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌ ಕೂಡಾ ಚಿತ್ತಾಪುರದಿಂದ ಬಿಜೆಪಿ ಹುರಿಯಾಳಾಗುವ ಒಲವು ತೋರಿದ್ದಾರೆಂದು ಹೇಳಲಾಗುತ್ತಿದೆ. ಸಾಲು ಸಾಲು ಆಕಾಂಕ್ಷಿಗಳಿದ್ದರೂ ಹೈಕಮಾಂಡ್‌ ತನ್ನ ನಿರ್ಧಾರ ಬಹಿರಂಗಪಡಿಸಿಲ್ಲ.

Karnataka Politics: ಮಾಜಿ ಸಿಎಂ ಸಿದ್ದರಾಮಯ್ಯಗಾಗಿ ಬಾದಾಮಿ ಟು ದೆಹಲಿ ಚಲೋ!

ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೋಲಿಸಿದಂತೆ ಚಿತ್ತಾಪುರದಲ್ಲಿ ಬೇರುಮಟ್ಟದಲ್ಲಿ ವ್ಯವಸ್ಥಿತವಾಗಿ ಕೆಲಸ ಮಾಡಿ ಜ್ಯೂನಿಯರ್‌ ಖರ್ಗೆ ಸೋಲಿಸುವ ಪಣ ತೊಟ್ಟಿರುವ ಕೇಸರಿ ಪಡೆ ಈಗಾಗಲೇ 6 ತಿಂಗಳಿಂದ ಕ್ಷೇತ್ರ​ದಲ್ಲಿ ಬೀಡು ಬಿಟ್ಟಿದೆ. ಮೊದಲ ಚುನಾ​ವ​ಣೆಯಲ್ಲಿ ಸೋತಿದ್ದ ಪ್ರಿಯಾಂಕ್‌ ಖರ್ಗೆ ಅವರು 2013, 2018ರ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕೋಲಿ, ಮುಸ್ಲಿಂ, ಒಬಿಸಿ ಮತಗಳು ಇಲ್ಲಿ ಕೈ ಹಿಡಿದಿದ್ದವು. ಬದಲಾದ ರಾಜಕೀಯದಲ್ಲಿ ಇಲ್ಲಿನ ನಿರ್ಣಾಯಕ ಕೋಲಿ, ಬಂಜಾರಾ ಮತಗಳನ್ನು ಒಗ್ಗೂಡಿಸುವ ಸವಾಲು ಕಾಂಗ್ರೆಸ್‌ಗೆ ಎದುರಾಗಿದೆ.

ಜೆಡಿಎಸ್‌ನಿಂದ ಸುಭಾಶ್ಚಂದ್ರ ರಾಠೋಡ್‌?: ಚಿತ್ತಾಪುರದಲ್ಲಿ ಜೆಡಿ​ಎಸ್‌ ನೆಲೆ ಕಳೆದುಕೊಂಡಿದೆ. 2004ರಲ್ಲಿ ಜೆಡಿಎಸ್‌ನಿಂದಲೇ ವಿಶ್ವನಾಥ ಹೆಬ್ಬಾಳ 40 ಸಾವಿರ ಮತ ಪಡೆದು ಗೆದ್ದಿದ್ದರೂ ಜೆಡಿಎಸ್‌ಗೆ ಇಲ್ಲಿ ಸಂಘನಾತ್ಮಕವಾಗಿ ಇಲ್ಲವೇ ಇಲ್ಲ. ಆದರೂ ನ್ಯಾಯಾಧೀಶರಾಗಿದ್ದ ಸುಭಾಶ್ಚಂದ್ರ ರಾಠೋಡ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಎಸ್‌ ಸೇರಿದ್ದು, ಅವರೇ ಚಿತ್ತಾಪುರದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳು ಸಾಗಿವೆ. ಆಮ್‌ ಆದ್ಮಿ ಪಕ್ಷದಿಂದ ಜಗದೀಶ ಸಾಗರ್‌ ಆಕಾಂಕ್ಷಿಯಾಗಿದ್ದಾರೆ.

ಕ್ಷೇತ್ರದ ಹಿನ್ನೆ​ಲೆ: ಚಿತ್ತಾಪುರ ಕಾಂಗ್ರೆಸ್‌ ಪ್ರಾಬಲ್ಯದ ಕ್ಷೇತ್ರ. ಒಂದು ಉಪ ಚುನಾವಣೆ ಸೇರಿ ಕ್ಷೇತ್ರ​ದಲ್ಲಿ ಈವ​ರೆ​ಗೆ ನಡೆದ 13 ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್‌ ಗೆದ್ದಿ​ದೆ. 1983, 1985ರಲ್ಲಿ ಜನತಾ ಪಕ್ಷ, 2004ರಲ್ಲಿ ಜೆಡಿಎಸ್‌ನಿಂದ ವಿಶ್ವನಾಥ ಪಾಟೀಲ್‌ ಹೆಬ್ಬಾಳ್‌ ಗೆದ್ದಿದ್ದರು. 2008ರಲ್ಲಿ ಚಿತ್ತಾಪುರ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಾಗ ಗುರುಮಠಕಲ್‌ನಿಂದ ಬಂದ ಡಾ.ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿ​ಸಿ​ದ್ದರು. 2009ರಲ್ಲಿ ಡಾ.ಖರ್ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕ​ಸ​ಭೆಗೆ ಸ್ಪರ್ಧಿಸಿ ಸಂಸ​ದ​ರಾದಾಗ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ವಾಲ್ಮೀಕಿ ನಾಯಕರನ್ನು ಕಣಕ್ಕಿಳಿಸಿ ಗೆಲ್ಲಿ​ಸಿತ್ತು. ಪ್ರಿಯಾಂಕ್‌ ಮೊದಲ ಚುನಾವಣೆಯಲ್ಲೇ ಸೋಲುಂಡಿದ್ದರು. ನಂತರ ನಡೆದ 2013, 2018ರ ಚುನಾವಣೆಯಲ್ಲಿ ಬಿಜೆಪಿಯ ವಾಲ್ಮೀಕಿಯವರನ್ನು ಪರಾಭವಗೊಳಿಸಿದ್ದ ಪ್ರಿಯಾಂಕ್‌ ಖರ್ಗೆ ಚಿತ್ತಾಪುರಲ್ಲಿ ‘ಕೈ’ ಪ್ರಾಬಲ್ಯ ಪುನರ್‌ ಸ್ಥಾಪಿಸಿದ್ದಾರೆ.

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವೆ: ಬಿ.ಎಸ್‌.ಯಡಿಯೂರಪ್ಪ

ಜಾತಿ​ವಾ​ರು ಲೆಕ್ಕಾ​ಚಾ​ರ: ಚಿತ್ತಾಪುರ ಮೀಸಲು ಕ್ಷೇತ್ರದಲ್ಲಿ ಒಟ್ಟು 2.31 ಲಕ್ಷ ಮತ​ದಾ​ರ​ರಿದ್ದು, ಇದ​ರಲ್ಲಿ ಲಿಂಗಾಯತ 40 ಸಾವಿರ, ಬಂಜಾರ 30 ಸಾವಿರ, ಪರಿಶಿ​ಷ್ಟಜಾತಿ 30 ಸಾವಿರ ಮತ್ತು ಕೋಲಿ ಸಮಾಜದ 40 ಸಾವಿರದಷ್ಟುಮತಗಳಿದ್ದು ಕೋಲಿ, ಬಂಜಾರಾ ಸಮು​ದಾ​ಯ​ಗಳೇ ನಿರ್ಣಾಯಕವಾಗಿ​ವೆ.