ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ಮುಂದಿನ ದಿನಗಳಲ್ಲಿ ಶೇ.99 ಕನ್ನಡಿಗರಿಗೇ ಆದ್ಯತೆ ನೀಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮೈಸೂರು (ಮೇ.26): ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ಮುಂದಿನ ದಿನಗಳಲ್ಲಿ ಶೇ.99 ಕನ್ನಡಿಗರಿಗೇ ಆದ್ಯತೆ ನೀಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೈಸೂರು ಸ್ಯಾಂಡಲ್ ಸೋಪ್‌ಗೆ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡಿಗರಿಗೂ ಆದ್ಯತೆ ಕೊಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಶೇ.99 ಕನ್ನಡಿಗರಿಗೇ ಆದ್ಯತೆ ನೀಡುತ್ತೇವೆ ಎಂದರು.
ಬಹಳಷ್ಟು ಜನರ ಪರ-ವಿರೋಧ ಇದ್ದೇ ಇರುತ್ತದೆ. ಕೆಲವರು ಕನ್ನಡಿಗರನ್ನು ನೇಮಕ ಮಾಡಬೇಕು ಅಂತಾರೆ, ಕೆಲವರು ಬೇಡ ಅಂತಾರೆ. ಸರ್ಕಾರ ಒಳ್ಳೆಯ ಉದ್ದೇಶಕ್ಕೆ ನಿರ್ಧಾರ ಕೈಗೊಂಡಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮನ್ನಣೆ ಗಳಿಸಿದೆ. ಇದರ ಉತ್ಪಾದನೆ ಎಲ್ಲರಿಗೂ ಮುಟ್ಟಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಅನಧಿಕೃತ ರೆಸಾರ್ಟ್‌ಗಳ ಮೇಲೆ ಕ್ರಮ: ಅನಧಿಕೃತ ರೆಸಾರ್ಟ್‌ಗಳು, ನಿಯಮ ಪಾಲನೆ ಮಾಡದ ರೆಸಾರ್ಟ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಅರಣ್ಯ ಪ್ರದೇಶದಲ್ಲಿ ಯಾವುದೇ ಅನಧಿಕೃತ ರೆಸಾರ್ಟ್‌ಗಳು ಇಲ್ಲ. ಅರಣ್ಯ ಪ್ರದೇಶದ ಸುತ್ತಮುತ್ತ ಇವೆ. ಅರಣ್ಯದ ಒಳಗೆ ಯಾವುದೇ ರೆಸಾರ್ಟ್‌ಗಳು ಅತಿಕ್ರಮವಾಗಿ ತಲೆ ಎತ್ತುತ್ತಿವೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಮಾನವ-ಪ್ರಾಣಿಗಳ ನಡುವಿನ ಸಂಘರ್ಷ ಇವತ್ತಿನದಲ್ಲ. ಅನಾದಿ ಕಾಲದಿಂದಲೂ ಇದೆ. ಮಾನವ-ಪ್ರಾಣಿಗಳ ನಡುವಿನ ಸಂಘರ್ಷ ತಡೆಗಟ್ಟಬೇಕಿದೆ. ಹೀಗಾಗಿ, ಆನೆಗಣತಿ ಆರಂಭ ಆಗಿದೆ. ಕೆಲ ಪುಂಡಾನೆಗಳಿಂದ ಮನುಷ್ಯರ ಮೇಲೆ ದಾಳಿ ಆಗುತ್ತಿದೆ. ಕಾಡಾನೆಗಳು ನಾಡಿನತ್ತ ಆಗಮಿಸುತ್ತಿವೆ. ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತಡೆಯಲಿಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.
