ವಿಧಾನಸಭೆಯ ಬಜೆಟ್ ಚರ್ಚೆಯಲ್ಲಿ, ಅಲ್ಪಸಂಖ್ಯಾತರ ಅನುದಾನದ ಕುರಿತು ಮಾತನಾಡಿದ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌, ಪ್ರಧಾನಿ ಮೋದಿ ತಾಲಿಬಾನ್‌ಗೆ ಅನುದಾನ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿದರು. ಈ ಹೇಳಿಕೆಯು ಬಿಜೆಪಿ ಸದಸ್ಯರನ್ನು ಕೆರಳಿಸಿ, ಸದನದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ವಿಧಾನಸಭೆ (ಮಾ.17): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಅನುದಾನ ನೀಡಿದರೆ ಬ್ರದರ್ಸ್‌ ಬಜೆಟ್‌ ಅಂತೀರಾ, ಪ್ರಧಾನಿ ಮೋದಿ ಅವರು ತಾಲಿಬಾನ್‌ಗೆ ಪ್ರತಿ ವರ್ಷ ಅನುದಾನ ಕೊಡುತ್ತಿದ್ದಾರೆ, ಶೇಕ್‌ಗಳನ್ನು ತಬ್ಬಿಕೊಂಡು ವ್ಯವಹಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಆಡಿದ ಮಾತು ವಿಧಾನಸಭೆಯಲ್ಲಿ ಪ್ರತಿಪಕ್ಷ ಸದಸ್ಯರನ್ನು ಕೆರಳಿಸಿ ವಾಗ್ವಾದಕ್ಕೆ ಕಾರಣವಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ರಿಜ್ವಾನ್‌ ಅರ್ಷದ್‌, ಶೇ.15ರಷ್ಟು ಸಂಖ್ಯೆಯಲ್ಲಿ ಇರುವ ಅಲ್ಪಸಂಖ್ಯಾತರಿಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಿಕ್ಕಿರುವುದು ಬಜೆಟ್‌ನ ಒಟ್ಟಾರೆ ಗಾತ್ರದ ಕೇವಲ ಶೇ.1ರಷ್ಟು ಅನುದಾನ ಮಾತ್ರ. ಮುಂದಿನ ಬಜೆಟ್‌ನಲ್ಲಾದರೂ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ, ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಆರಗ ಜ್ಞಾನೇಂದ್ರ ಮತ್ತಿತರರು ಅಲ್ಪಂಖ್ಯಾತರ ಮಕ್ಕಳ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರು 10 ಹೊಸ ವಸತಿ ಶಾಲೆ, ಲ್ಯಾಪ್‌ಟಾಪ್‌ ಯೋಜನೆ ಸೇರಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಏನೂ ಕೊಟ್ಟಿಲ್ಲ ಎಂದು ಹೇಳುತ್ತೀರಲ್ಲಾ ಎಂದು ಛೇಡಿಸಿದರು.

ಮೋದಿ ತಾಲಿಬಾನ್‌ಗೆ ಹಣ ಕೊಡ್ತಾರೆ:

ಇದಕ್ಕೆ ರಿಜ್ವಾನ್‌ ಅವರು, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನುದಾನ ಕೊಟ್ಟರೆ ನೀವು ಬ್ರದರ್ಸ್‌ ಬಜೆಟ್‌ ಅಂತೀರ. ಅಲ್ಪಸಂಖ್ಯಾತರು ಬ್ರದರ್ಸ್‌ ಅಲ್ವಾ? ಅದೇ ಪ್ರಧಾನಿ ಮೋದಿ ಅವರು ಪ್ರತಿ ವರ್ಷ ತಾಲಿಬಾನ್‌ಗೆ 200 ಕೋಟಿ ರು. ಅನುದಾನ ಕೊಡುತ್ತಿದ್ದಾರೆ. ಶೇಕ್‌ಗಳನ್ನು ತಬ್ಬಿಕೊಂಡು ವ್ಯವಹಾರ ಮಾಡುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಮೌನವೇಕೆ? ಭಾರತ ಮತ್ತು ಇರಾನ್ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಸ್ನೇಹಿತರು. ನಾವು ಎಂದಿಗೂ ಯುದ್ಧವನ್ನು ಬೆಂಬಲಿಸಿದವರಲ್ಲ. ಆದರೆ, ಕೇಂದ್ರ ಸರ್ಕಾರ ವಿದೇಶಾಂಗ ನೀತಿಯಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಛೇಡಿಸಿದರು.

ಇದಕ್ಕೆ ಬಿಜೆಪಿಯ ಚನ್ನಬಸಪ್ಪ, ಆರಗ ಜ್ಞಾನೇಂದ್ರ ಮತ್ತಿತರ ಸದಸ್ಯರು, ಈ ದೇಶದ ಅನ್ನ ತಿಂದು, ನೀರು ಕುಡಿದು, ಇಲ್ಲೇ ಬದುಕಿ ವಿಧಾನಸೌಧದ ಒಳಗೆ ಪಾಕಿಸ್ತಾನದ ಪರ ಘೋಷಣೆ ಕೂಗುವವರನ್ನು ಅಪ್ಪಿಕೊಳ್ಳುವ ನಿಮ್ಮ ಮನಸ್ಥಿತಿ ಎಂಥದ್ದು? ಭಾರತೀಯ ಯೋಧರು ಸತ್ತಾಗ ಕಣ್ಣೀರಿಡದವರು, ಇರಾನ್ ವ್ಯಕ್ತಿ ಸತ್ತಾಗ ಕಣ್ಣೀರಿಡುತ್ತೀರಿ ಎಂದು ಮುಗಿಬಿದ್ದರು. ಚರ್ಚೆ ತಾರಕಕ್ಕೆ ಏರುವ ಮುನ್ನ ಸ್ಪೀಕರ್‌ ಪೀಠದಲ್ಲಿದ್ದ ಅಪ್ಪಾಜಿ ನಾಡಗೌಡ ಮಧ್ಯಪ್ರವೇಶಿಸಿ, ಬಜೆಟ್‌ ಮೇಲೆ ಚರ್ಚೆ ಮಾಡಿ. ಇದನ್ನೆಲ್ಲಾ ಬಿಡಿ ಎಂದು ಚರ್ಚೆಯ ದಿಕ್ಕು ಬದಲಿಸಿದ ಬಳಿಕ ಬಜೆಟ್ ಮೇಲಿನ ಚರ್ಚೆ ಮುಂದುವರಿಯಿತು.