ಸುಮಲತಾ ವಿರುದ್ಧ ಕೆಂಡಾಮಂಡಲ: ಮಂಡ್ಯದಲ್ಲಿ ಸೋಲಿಸಲು ಎಚ್ಡಿಕೆ ಶಪಥ
- ಸಂಸದೆ ಸುಮಲತಾ ವಿರುದ್ಧ ಮತ್ತೊಮ್ಮೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ
- ಸುಮಲತಾಗೆ ನಾನೇಕೆ ಕ್ಷಮೆ ಕೇಳಬೇಕು ನಾನು ಯಾವ ಪದಗಳನ್ನು ಮಾತನಾಡಬೇಕಾಗಿತ್ತು ಎಂದು ಗರಂ
- ಮಂಡ್ಯದಲ್ಲೇ ಸುಮಲತಾರನ್ನು ಸೋಲಿಸುವ ಶಪಥ
ಬೆಂಗಳೂರು (ಜು.07): ಸಂಸದೆ ಸುಮಲತಾ ವಿರುದ್ಧ ಮತ್ತೊಮ್ಮೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಸುಮಲತಾಗೆ ನಾನೇಕೆ ಕ್ಷಮೆ ಕೇಳಬೇಕು.ನಾನು ಯಾವ ಪದಗಳನ್ನು ಮಾತನಾಡಬೇಕಾಗಿತ್ತು ಎಂದು ಗರಂ ಆಗಿದ್ದಾರೆ. ಅಲ್ಲದೇ ಮಂಡ್ಯದಲ್ಲೇ ಸುಮಲತಾರನ್ನು ಸೋಲಿಸುವ ಶಪಥವನ್ನು ಮಾಡಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ಎಚ್‌ಡಿಕೆ, ಕ್ಷಮೆ ಕೇಳಬೇಕಾದ ಪದ ಬಳಕೆ ಮಾಡಿಲ್ಲ , ಕನ್ನಡ ಪದ ಬಳಕೆ ಸಂಸ್ಕೃತಿ ಬಗ್ಗೆ ನನಗೆ ಗೊತ್ತಿದೆ ಅವರು ಹೇಳಿಕೊಡಬೇಕಾಗಿಲ್ಲ ಎಂದರು.
ಎಚ್‌ಡಿಕೆ ಆಡಿಯೋ, ವಿಡಿಯೋ ಬೆದರಿಕೆ: ಇವತ್ತೆ ರಿಲೀಸ್ ಮಾಡುವಂತೆ ಸುಮಲತಾ ಸವಾಲು .
ನಾನು ಅಕ್ರಮ ಗಣಿಗಾರಿಕೆ ಮಾಡಲು ಹೇಳಿದ್ದಿನಾ? ನನಗೆ ಸಂಬಂಧ ಇಲ್ಲದ ವಿಚಾರ. ನಾನು ಮುಖ್ಯಮಂತ್ರಿ ಇದ್ದಾಗ ಅಕ್ರಮ ಗಣಿಗಾರಿಕೆ ನಿಲ್ಲಬೇಕೆಂದು ಆದೇಶ ಮಾಡಿದ್ದೇನೆ. ಸಕ್ರಮ ಗಣಿಗಾರಿಕೆ ಮಾಡುತ್ತಿರುವವರ ಬಳಿ ಹೆದರಿಸಿ ದುಡ್ಡು ವಸೂಲಿ ಮಾಡುವ ಉದ್ದೇಶವಿದೆ. ದುಡ್ಡು ಮಾಡುವ ಉದ್ದೇಶದಿಂದ ಅಲ್ಲಿಗೆ ಹೋಗಿದ್ದಾರೆ ಎಂದರು.
ಕೆಆರ್‌ಎಸ್ ಬಿರುಕು ಬಿಟ್ಟಿದ್ದರೆ ಅಲ್ಲಿಗೆ ಮಾಧ್ಯಮದವರನ್ನು ಕರೆದುಕೊಂಡು ಹೋಗಿ ತೋರಿಸಬೇಕಾಗಿತ್ತು. ಅದರ ಬದಲಿಗೆ ಗಣಿಗಾರಿಕೆ ತೋರಿಸಲು ಹೋಗಿದ್ದಾರೆ. ಸಿನಿಮಾದಲ್ಲಿ ನಡೆಸುವ ರಾಜಕಾರಣವನ್ನು ಇಲ್ಲಿಯೂ ನಡೆಸುತ್ತೇನೆ ಅಂದುಕೊಂಡಿದ್ದಾರೆ ಎಂದು ಸುಮಲತಾ ವಿರುದ್ಧ ಅಸಮಾಧಾನ ಹೊರಹಾಕಿದರು.
KRS ಬಾಗಿಲಿಗೆ ಸುಮಲತಾರನ್ನು ಅಡ್ಡಡ್ಡ ಮಲಗಿಸ್ಬೇಕು: ಏನಿದು ಎಚ್‌ಡಿಕೆ ಮಾತಿನ ಅರ್ಥ? .
ಮುಂದಿನ ರಾಜಕಾರಣವನ್ನು ಮಂಡ್ಯದಲ್ಲಿ ತೋರಿಸುತ್ತೇನೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದೀರಾ ಅಲ್ಲಿಂದಲೇ ಪ್ರಾರಂಭ ಮಾಡುತ್ತೇನೆ. ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಅಂತ ಜನತೆಗೆ ಗೊತ್ತಿದೆ. ಇವತ್ತು ಮಂಡ್ಯ ಬಗ್ಗೆ ಮಾತನಾಡುತ್ತಾರೆ. ಅವತ್ತು ಅಂಬರೀಶ್ ಮೃತದೇಹವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದು ಬೇಡ ಅಂದಿದ್ದು ಅವರು. ಮಂಡ್ಯಕ್ಕೆ ತೆಗೆದುಕೊಂಡು ಹೋದ ಮೇಲೆ ಮಣ್ಣನ್ನು ಹಚ್ಚಿಕೊಂಡಿದ್ದರು ಎಂದು ಹರಿಹಾಯ್ದರು.
ಹೇಳಿಕೆ ತಿರುಚಿದ್ದಾರೆ : ಮಾಧ್ಯಮದವರು ನಾನು ಕೊಟ್ಟ ಹೇಳಿಕೆಯನ್ನು ತಿರುಚುವ ಕೆಲಸವನ್ನು ಮಾಡಿದ್ದಾರೆ. ಕಳೆದ 50 ವರ್ಷದಿಂದ ಮಾಧ್ಯಮ ಎಷ್ಟರಮಟ್ಟಿಗೆ ಸಹಕಾರ ಕೊಟ್ಟಿದ್ದಾರೆ ಎನ್ನುವುದು ಗೊತ್ತಿದೆ. ಮೈತ್ರಿ ಸರ್ಕಾರ ಇದ್ದಾಗ ಮಂಡ್ಯ ಲೋಕಸಭಾ ಚುನಾವಣೆ ಇದ್ದಾಗ ಏನೇನು ಮಾಡಿದ್ದೀರಿ ಎಂದೂ ಗೊತ್ತಿದೆ ಎಂದು ಮಾಧ್ಯಮಗಳ ವಿರುದ್ಧವೂ ಕುಮಾರಸ್ವಾಮಿ ಹರಿಹಾಯ್ದರು.
ಪ್ರಜ್ವಲ್ ನೋಡಿ ಕಲಿಯಲಿ ಎಂದಿದ್ದಕ್ಕೂ ತಿರುಗೇಟು: ಪ್ರಜ್ವಲ್ ರೇವಣ್ಣ ನನ್ನು ಕುಮಾರಸ್ವಾಮಿ ನೋಡಿ ಕಲಿಯಬೇಕು ಸುಮಲತ ಹೇಳಿಕೆಗೂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ ಅವರ ಸಂಸ್ಕೃತಿ ಏನು ಅಂತ ನನಗೆ ಗೊತ್ತಿದೆ. ನಮ್ಮ ಕುಟುಂಬವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬವನ್ನು ಒಡೆಯಲು ಬಂದವರು ಏನಾಗಿದ್ದಾರೆ ಎಂದು ತಿಳಿಯಲಿ ಎಂದು ವಾಕ್ ಪ್ರಹಾರ ನಡೆಸಿದರು.
ಸುಮಲತಾರನ್ನ ಸೋಲಿಸುವ ಶಪಥ : ಇನ್ನು ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸುಮಲತಾರನ್ನು ಮುಂದಿನ ಚುನಾವಣೆಯಲ್ಲಿ ಸುಮಲತಾರನ್ನು ಸೋಲಿಸುವ ಶಪಥ ಮಾಡಿದರು. ಮುಂದಿನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುತ್ತೇನೆ ಎಂದರು.