ಎಚ್.ಡಿ.ಕುಮಾರಸ್ವಾಮಿಯವರು ಆರೋಗ್ಯ ಸರಿ ಮಾಡಿಕೊಂಡು ಜೆಡಿಎಸ್ ಕಟ್ಟಲು ಮುಂದಾಗಿದ್ದಾರೆ. ಸಿಎಂ ಆಗುವ ಕನಸಿನೊಂದಿಗೆ ಪಕ್ಷ ಕಟ್ಟಲು ಹೊರಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮೈಸೂರು (ನ.11): ಎಚ್.ಡಿ.ಕುಮಾರಸ್ವಾಮಿಯವರು ಆರೋಗ್ಯ ಸರಿ ಮಾಡಿಕೊಂಡು ಜೆಡಿಎಸ್ ಕಟ್ಟಲು ಮುಂದಾಗಿದ್ದಾರೆ. ಸಿಎಂ ಆಗುವ ಕನಸಿನೊಂದಿಗೆ ಪಕ್ಷ ಕಟ್ಟಲು ಹೊರಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ನನ್ನ ಕೈ ಬಿಟ್ಟಿದ್ದಕ್ಕೆ ಪ್ರತಿಕ್ರಿಯಿಸಿ, ವಿರೋಧ ಪಕ್ಷದ ನಾಯಕನನ್ನಾಗಿ ನನ್ನ ಮಾಡದೆ ಇದ್ದಾಗ ನನಗೆ ಬೇಸರವಾಯಿತು. ಅಂದು ಮನಸ್ಸಿಗೆ ನೋವಾಗಿ ಪಕ್ಷದ ಯಾವುದೇ ಸಭೆಗಳಲ್ಲಿ ಭಾಗವಹಿಸಿಲ್ಲ. ಕೋರ್ ಕಮಿಟಿ ಅಧ್ಯಕ್ಷನನ್ನಾಗಿ ಮಾಡಿದಾಗ ಇಡೀ ರಾಜ್ಯ ಸುತ್ತಿ ಸಭೆ ಮಾಡಿದ್ದೇನೆ. ಕೋರ್ ಕಮಿಟಿ ಅಧ್ಯಕ್ಷ ಸ್ಥಾನದಿಂದ ನನ್ನ ಕೈ ಬಿಟ್ಟಿದ್ದಕ್ಕೆ ನನಗೆ ಯಾವುದೇ ಬೇಸರ ಇಲ್ಲ ಎಂದರು.
ನಾನು, ಸಿದ್ದರಾಮಯ್ಯ 25 ವರ್ಷ ಜೆಡಿಎಸ್ ಪಕ್ಷವನ್ನು ಗಟ್ಟಿಯಾಗಿ ಕಟ್ಟಿದ್ದೇವೆ. ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಹೋದ ಮೇಲೆ ದೇವೇಗೌಡರ ಜೊತೆ ಪಕ್ಷ ಕಟ್ಟಿದ್ದೆ. ಆರ್ಥಿಕವಾಗಿ ಜಿ.ಟಿ.ದೇವೇಗೌಡ ಬಲಹೀನವಾಗಿರುವುದು ಕುಮಾರಸ್ವಾಮಿಗೆ ಗೊತ್ತಾಗಿದೆ. ಈಗ ಕುಮಾರಸ್ವಾಮಿ ಕೇಂದ್ರ ಸಚಿವರು, ಶಕ್ತಿವಂತರಾಗಿದ್ದಾರೆ. ಯಾರು ಇರದೆ ಇದ್ದರೂ ಪಕ್ಷ ಕಟ್ಟುತ್ತೇನೆ ಎಂಬ ವಿಶ್ವಾಸ ಅವರಿಗೆ ಬಂದಿದೆ ಎಂದು ಹೇಳಿದರು. ನಾನು ಈಗಲೂ ಜನತಾದಳದಲ್ಲೇ ಇದ್ದೀನಿ, ಇರ್ತಿನಿ. ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಹೋದಾಗ ಜಿ.ಟಿ.ದೇವೇಗೌಡನ ಸಂಘಟನೆ ಶಕ್ತಿ ಬೇಕಾಗಿತ್ತು. ಈಗ ಬೇಕಾಗಿಲ್ಲ ಅನ್ನಿಸುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪುರುಷ-ಮಹಿಳೆಯರು ಸಮಾನರು
ಸಮಾಜದಲ್ಲಿ ಪುರುಷರು- ಮಹಿಳೆಯರು ಎನ್ನುವ ತಾರತಮ್ಯವಿಲ್ಲದೆ ಸಮಾನರಾಗಿದ್ದಾರೆ. ಮಹಿಳೆ ಇಂದು ದೇಶದ ಆರ್ಥಿಕ ವ್ಯವಸ್ಥೆ ಚೆನ್ನಾಗಿರಲು ಮೂಲ ಕಾರಣರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡಿರುವುದರಿಂದ ಪುರುಷರಿಗಿಂತ ಮಹಿಳೆಯರು ಕಡಿಮೆಯೇನಿಲ್ಲ ಎಂದು ಹೇಳಿದರು. ಮಹಿಳೆಯರು ಮೊದಲೆಲ್ಲಾ ಕುಟುಂಬ ನಿರ್ವಹಣೆ ಹೊರುತ್ತಿದ್ದರು. ಮಳೆಗಾಲ, ಚಳಿಗಾಲ ಎನ್ನದೆ ತಾವೇ ಎಲ್ಲ ಕೆಲಸ ಮಾಡುತ್ತಿದ್ದರು. ನಲ್ಲಿ, ಬೋರ್ ವೆಲ್ ಗಳು ಇರಲಿಲ್ಲ. ದೂರದಲ್ಲಿ ಇದ್ದ ಬಾವಿಗಳಿಂದ ನೀರು ಹೊತ್ತು ತರುತ್ತಿದ್ದರು. ಮಳೆಗಾಲದಲ್ಲಿ ಬಿಡುವು ಇಲ್ಲದಿದ್ದಾಗ ತಾವೇ ಎಲ್ಲ ಕೆಲಸ ಮಾಡಿಕೊಳ್ಳುತ್ತಿದ್ದರು.
ಹಿಂದಿನ ಕಾಲದಲ್ಲಿ ಏಳೆಂಟು ಮಕ್ಕಳನ್ನು ಹೆಡೆದು ಸಾಕುತ್ತಿದ್ದರು. ಅಮೇಲೆ ಆರತಿಗೊಬ್ಬ- ಕೀರ್ತಿಗೊಬ್ಬ ಎನ್ನುವಂತೆ ಎರಡು ಮಕ್ಕಳಿಗೆ ಬಂದರು. ಈಗ ಒಂದು ಮಗುವಿಗೆ ಬಂದಿದ್ದಾರೆ ಎಂದು ಹೇಳಿದರು. ಹೈನುಗಾರಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ. ಎರಡು ಹಸುಗಳನ್ನು ಖರೀದಿಸಿ ಸಾಕಿದರೆ ಬದುಕು ಸಾಗಿಸಬಹುದು. ಮಹಿಳೆಯರು ತಾವು ಸಂಪಾದನೆ ಮಾಡಿದ್ದನ್ನು ಕೂಡಿಡಬೇಕು. ಯಶಸ್ವಿನಿ ಯೋಜನೆಯಡಿ ವಿಮೆ ಮಾಡಿಸಬೇಕು. ಕೆಲವರು ಆಸ್ಪತ್ರೆಗೆ ಸೇರಿಸಿದ ಮೇಲೆ ನಮ್ಮತ್ರ ಹಣವಿಲ್ಲ, ಆಸ್ಪತ್ರೆಗೆ ಹೇಳಬೇಕು, ಹಣ ಕಟ್ಟಲು ದುಡ್ಡಿಲ್ಲ ಎನ್ನುತ್ತಾರೆ. ಅದರ ಬದಲಿಗೆ ಒಂದು ವಿಮೆ ಮಾಡಿಸಿದರೆ ಕುಟುಂಬದ ಆರೋಗ್ಯ ವೆಚ್ಚವನ್ನು ಭರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
