ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿರುವ ‘ದ್ವೇಷ ಭಾಷಣಕ್ಕೆ ಹತ್ತು ವರ್ಷಗಳ ಜೈಲು ಸಜೆ’ ಶಾಸನ ಕಾಂಗ್ರೆಸ್ ಪಕ್ಷದ ಕ್ರೂರ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ.
ನವದೆಹಲಿ (ಡಿ.13): ಕರ್ನಾಟಕ ಕಾಂಗ್ರೆಸ್ ಸರ್ಕಾರ ರಚಿಸಿರುವ ‘ದ್ವೇಷ ಭಾಷಣಕ್ಕೆ ಹತ್ತು ವರ್ಷಗಳ ಜೈಲು ಸಜೆ’ ಶಾಸನ ಕಾಂಗ್ರೆಸ್ ಪಕ್ಷದ ಕ್ರೂರ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ. ಈ ಶಾಸನ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವುದಾಗಿದೆ ಮತ್ತು ರಾಜಕೀಯ ನಿಯಂತ್ರಣದ ದುರುದ್ದೇಶಕ್ಕಾಗಿ ಜಾರಿಗೆ ತಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಸಚಿವರು ಹರಿ ಹಾಯ್ದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಮೂಲಕ ಸರ್ವರ ವಾಕ್ ಸ್ವತಂತ್ರ ಕಿತ್ತುಕೊಳ್ಳುತ್ತಿದೆ.
ಇದು ಕಾಂಗ್ರೆಸ್ ಪಕ್ಷದ ಕ್ರೂರ ಸಂಪ್ರದಾಯವನ್ನು ಪ್ರದರ್ಶಿಸುತ್ತಿದ್ದು, ಸರ್ಕಾರದ ದುರಾಡಳಿತಕ್ಕೆ ಕೈಗನ್ನಡಿಯಾಗಿದೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ ಶಾಸನ ದ್ವೇಷ ಭಾಷಣವನ್ನು ನಿಯಂತ್ರಿಸುವ ಉದ್ದೇಶವೋ ಅಥವಾ ವಾಕ್ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಹುನ್ನಾರವೋ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಇದು ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ರಚಿಸಿದಂತೆ ಕಾಣುತ್ತಿಲ್ಲ. ಬದಲಾಗಿ ಸರ್ಕಾರದ ದುರಾಡಳಿತ ಪ್ರಶ್ನಿಸುವವರ ಧ್ವನಿ ಅಡಗಿಸುವ ದುರುದ್ದೇಶಪುರಕದಂತೆ ಇದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ದುರಾಡಳಿತ ವಿರುದ್ಧದ ಧ್ವನಿ ಅಡಗಿಸಲು ಹಾಗೂ ಸಾರ್ವಜನಿಕ ಅಭಿಪ್ರಾಯಗಳಿಗೆ ಕಡಿವಾಣ ಹಾಕಲು ಹೀಗೆ ‘ದ್ವೇಷ ಭಾಷಣ’ಕ್ಕೆ 10 ವರ್ಷಗಳ ಜೈಲು ಶಿಕ್ಷೆ?’ ಎಂಬ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ’ ಶಾಸನ ರಚನೆ ಮಾಡಿದೆ ಎಂದು ಖಂಡಿಸಿದ್ದಾರೆ. ರಾಜ್ಯ ಸರ್ಕಾರದ ಈ ವಿಧೇಯಕ ವಿಮರ್ಶಕರನ್ನು ವಿಮರ್ಶೆಯಿಂದಲೇ ದೂರವಿಡುವ ಹಾಗೂ ಸರ್ಕಾರದ ದುರಾಡಳಿತ ಹೊರಬಾರದಂತೆ ಹತ್ತಿಕ್ಕುವ ದುರಾಲೋಚನೆಯಿಂದ ಕೂಡಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಶುದ್ಧೀಕರಣವೇ ಎಸ್‌ಐಆರ್ ಪ್ರಕ್ರಿಯೆ
ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ದೇಶದ ಮತದಾರರ ಶುದ್ಧೀಕರಣವಾಗಿದೆ. ಅರ್ಹರು ಬಿಟ್ಟುಹೋಗದಂತೆ ಅನರ್ಹರು ಸೇರ್ಪಡೆಯಾಗಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಮತಗಳ್ಳತನವಾಗಿದೆ ಎಂದು ಆರೋಪ ಮಾಡಿ ಹೋರಾಟ ನಡೆಸಿದ್ದರು. ಆದರೆ, ಅದನ್ನು ಸಾಬೀತು ಪಡಿಸದೇ ಆರೋಪ ಮಾಡುತ್ತ ಸುಳ್ಳನ್ನೇ ಸತ್ಯವನ್ನಾಗಿಸಲು ಹೊರಟರು. ಒಂದು ಸುಳ್ಳನ್ನು ಪದೇ ಪದೇ ಹೇಳಿ ಸತ್ಯವೆಂದು ಜನರಲ್ಲಿ ಗೊಂದಲ ಸೃಷ್ಟಿಸಿದರು ಎಂದು ಆರೋಪಿಸಿದರು.
ಇಂದಿಗೂ ಹಲವರಲ್ಲಿ ಇದೇ ಗೊಂದಲ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈ ಎಸ್‌ಐಆರ್ ಮೂಲಕ ಅರ್ಹ ಮತದಾರರನ್ನು ಸೇರ್ಪಡೆ ಮಾಡುವುದು, ಇರುವ ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕಲು ಈ ನಿರ್ಣಯ ಕೈಗೊಂಡಿದೆಯೇ ಹೊರತು ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಮಾಡಿದ ತಂತ್ರವಲ್ಲ ಎಂಬುದನ್ನು ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.


