ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ನಡೆಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಸೂಚನೆ ನೀಡದ ಹಿನ್ನೆಲೆಯಲ್ಲಿ ನಾನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದರು.
ಕೆ.ಆರ್.ನಗರ (ಜೂ.27): ಎಂಸಿಡಿಸಿಸಿ ಬ್ಯಾಂಕ್ ಚುನಾವಣೆ ನಡೆಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಸೂಚನೆ ನೀಡದ ಹಿನ್ನೆಲೆಯಲ್ಲಿ ನಾನು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟನೆ ನೀಡಿದರು. ಸಾಲಿಗ್ರಾಮ ತಾಲೂಕು ಹರದನಹಳ್ಳಿ ನಡೆದ ಎಚ್.ಎನ್. ವಿಜಯ್ ಅವರ ಜನ್ಮ ದಿನಾಚರಣೆ ಪೂರ್ವಭಾವಿ ಸಭೆಯ ನಂತರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಹಕಾರದಲ್ಲಿ ರಾಜಕೀಯ ಬೆರೆತರೆ ಆ ಕ್ಷೇತ್ರ ಸರ್ವನಾಶವಾಗುತ್ತದೆ ಎಂದರು. ಕಳೆದ 50 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿರುವ ನನಗೆ ರಾಜಕೀಯ ಮಜಲು ಮತ್ತು ಸಹಕಾರದ ಬಗ್ಗೆ ತಿಳಿದಿದ್ದು ನನಗೆ ಆ ಕ್ಷೇತ್ರ ಸಾಕಷ್ಟು ಪಾಠ ತಿಳಿಸಿದೆ.
ಕಳೆದ ಅವಧಿಯಲ್ಲಿ ಬ್ಯಾಂಕ್ ಅಧ್ಯಕ್ಷನಾಗಿದ್ದಜಿ.ಡಿ. ಹರೀಶ್ ಗೌಡ ರೈತಪರ ಕೆಲಸ ಮಾಡಿ ನಾಡಿಗೆ ಮಾದರಿಯಾಗಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ಅವಧಿಗೆ ಆಯ್ಕೆಯಾಗುವವರು ರಾಜಕೀಯ ಮಾಡದೆ ಜನಸೇವೆ ಮಾಡಿ ಎಂದು ಸಲಹೆ ನೀಡಿದರು. ದಿ. ಮಾಜಿ ಪ್ರಧಾನಿ ಜವಹರಲಾಲ್ ನೆಹರು ಅವರ ಕಾಲದಿಂದಲ್ಲೂ ಸಹಕಾರ ಕ್ಷೇತ್ರ ರೈತರ ಧ್ವನಿಯಾಗಿದ್ದು ಭವಿಷ್ಯದ ನಾವೆಲ್ಲರೂ ಹಿರಿಯರ ಆಶಯ ಮತ್ತು ಸಹಕಾರಿಗಳ ಆಶಯ ಪಾಲಿಸಿ ಸುಂದರ ಜೀವನ ನಡೆಸುವುದರ ಮೂಲಕ ಸಮಾನತೆಯ ಬದುಕು ನಡೆಸಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದ್ದರು.
ಪೌರ ಕಾರ್ಮಿಕರ ಪಾತ್ರ ಅಪಾರ: ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅಪಾರವಾದುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ಜಿ.ಟಿ. ದೇವೇಗೌಡ ಶ್ಲಾಘಿಸಿದರು. ಕನ್ನಡಾಂಬೆ ರಕ್ಷಣಾ ವೇದಿಕೆಯು ಹೂಟಗಳ್ಳಿಯ ಸರಸ್ವತಿ ಸಮುದಾಯ ಭವನದಲ್ಲಿ ಬಸವ ಜಯಂತಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ ಹಾಗೂ ಅವರೊಂದಿಗೆ ಸಹಪಂಕ್ತಿ ಭೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸುತ್ತಮುತ್ತ ಸ್ವಚ್ಛತೆ ಇದ್ದರೆ ಪರಿಸರವೂ ಸ್ವಚ್ಛವಾಗಿರುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. ಪೌರ ಕಾರ್ಮಿಕರ ಶ್ರಮದಿಂದಲೇ ಮೈಸೂರು ನಗರಕ್ಕೆ ಹಲವು ಬಾರಿ ಸ್ವಚ್ಥತಾ ನಗರಿ ಪ್ರಶಸ್ತಿ ಲಭ್ಯವಾಗಿದೆ ಎಂದರು. ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ಕಾಯಕವೇ ಕೈಲಾಸ ಎಂಬ ತತ್ವ ನೀಡಿದ್ದಾರೆ. ಸೇವೆ ಮಾಡುವ ಎಲ್ಲರೂ ಇದನ್ನು ಅರಿತುಕೊಳ್ಳಬೇಕು. ಅದೇ ರೀತಿ ಮೈಸೂರನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನೀಡಿದವರು. ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದವರು ಎಂದರು.
ಬಸವ ಹಾಗೂ ನಾಲ್ವಡಿ ಅವರ ಜಯಂತಿ ಅಂಗವಾಗಿ ಪೌರ ಕಾರ್ಮಿಕರಿಗೆ ಉಚಿತವಾಗಿ ಬಟ್ಟೆ ವಿತರಿಸಿ, ಅವರೊಂದಿಗೆ ಸಹಪಂಕ್ತಿ ಭೋಜನೆ ಮಾಡುತ್ತಿರುವು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದರು. ಮುಖ್ಯ ಅತಿಥಿಯಾಗಿದ್ದ ಬಿಜೆಪಿ ಯುವ ಮುಖಂಡ ವಿ. ಕವೀಶ್ ಗೌಡ ಮಾತನಾಡಿ, ಪೌರ ಕಾರ್ಮಿಕರ ಸೇವೆಯ ಬಗ್ಗೆ ಅಪಾರವಾದ ಗೌರವವಿದೆ. ನೀವು ನಗರ, ಪಟ್ಟಣ ಪ್ರದೇಶಗಳ ಸ್ವಚ್ಛತೆಯ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಉನ್ನತ ಹುದ್ದೆಗಳಿಗೆ ಏರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
