ನನಗೆ ಇರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲಿ, ಕೆಲ ಹಿರಿಯ ಸಚಿವರಾಗಲಿ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ, ಸಿಎಂ ಪುತ್ರ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು (ನ.28): ‘ನನಗೆ ಇರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲಿ, ಕೆಲ ಹಿರಿಯ ಸಚಿವರಾಗಲಿ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ ಎಂದರ್ಥ ತಾನೇ?’ ಎಂದು ವಿಧಾನಪರಿಷತ್ ಸದಸ್ಯ, ಸಿಎಂ ಪುತ್ರ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಯಾವ ಕಾರಣಗಳೂ ಇಲ್ಲ.
ಸಿದ್ದರಾಮಯ್ಯ ಅವರ ಮೇಲೆ ಯಾವ ಆರೋಪವೂ ಇಲ್ಲ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಬರಬಾರದಿತ್ತು. ಆದರೂ, ಯಾರೋ ಕೆಲವರು ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಹೈಕಮಾಂಡ್ ಎಲ್ಲೂ ಕೂಡ ಬದಲಾವಣೆ ಮಾಡುತ್ತೇವೆ ಎಂದು ಹೇಳಿಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ನನಗೆ ವಿಶ್ವಾಸ ಇದೆ, ಇನ್ನೂ ಎರಡೂವರೆ ವರ್ಷ ನಮ್ಮ ತಂದೆಯೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಅವರು ತಿಳಿಸಿದರು.
ಚುಂಚನಗಿರಿ ಮಠದ ಸ್ವಾಮೀಜಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಯತೀಂದ್ರ ಸಿದ್ದರಾಮಯ್ಯ, ಯಾರನ್ನು ಸಿಎಂ ಮಾಡಬೇಕು, ಯಾರನ್ನು ಮಾಡಬಾರದು ಎಂಬುದು ನಮ್ಮ ಪಕ್ಷದ ಆಂತರಿಕ ವಿಚಾರ. ಅದು ನಮ್ಮ ಶಾಸಕರಿಗೆ ಮತ್ತು ನಮ್ಮ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಅದರ ಬಗ್ಗೆ ಬೇರೆಯವರ ಅಭಿಪ್ರಾಯ ಅನಗತ್ಯ ಎಂದು ತಿರುಗೇಟು ನೀಡಿದರು. ಶಾಸಕರ ಬೆಂಬಲ ಕುರಿತ ಪ್ರಶ್ನೆಗೆ, ಯಾರಿಗೆ ಎಷ್ಟು ಶಾಸಕರ ಬೆಂಬಲ ಇದೆ ಎನ್ನುವಂತಹ ಚರ್ಚೆ ಮಾಡುವುದು ಬೇಡ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಮತ್ತೆ, ಮತ್ತೆ ಆ ಅಂಕಿ ಸಂಖ್ಯೆ ಕೇಳಬೇಡಿ. ಎಲ್ಲಾ ಶಾಸಕರ ಬೆಂಬಲ ನಮ್ಮ ತಂದೆಗೆ ಇದೆ ಎಂದರು.
ಬಿಜೆಪಿ ಬೆಂಬಲದಿಂದ ಡಿಕೆಶಿ ಸಿಎಂ: ಕರ್ಮದಲ್ಲಿ ರವಿ ಮತ್ತು ಮಂಗಳ ಇರುವುದು ಹಾಗೂ ಭಾಗ್ಯದಲ್ಲಿ ಶುಕ್ರನಿರುವುದರಿಂದ ತಮ್ಮವರು (ಕಾಂಗ್ರೆಸ್) ಹಾಗೂ ಹೊರಗಿನ ಮಿತ್ರರ (ಬಿಜೆಪಿ- ಜೆಡಿಎಸ್) ಸಹಕಾರದಿಂದ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಒಂದು ತಿಂಗಳೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ಏರುತ್ತಾರೆ ಎಂದು ಕುಂದಗೋಳ ಪಟ್ಟಣದ ಹಿರೇಮಠದ ಶಿತಿಕಂಠೇಶ್ವರ ಶ್ರೀ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಜ.15, 1961ರಂದು ಜನಿಸಿದ ಡಿಕೆಶಿಗೆ ಪ್ರಸ್ತುತ ಶನಿ ಮಹಾದಶಾ ಮತ್ತು ಶುಕ್ರ ಭುಕ್ತಿ ನಡೆಯುತ್ತಿದೆ. ಕುಂಡಲಿಯ ಪ್ರಕಾರ ಕರ್ಮದಲ್ಲಿ ಶನಿ ಇದ್ದು, ಶುಕ್ರ ತೃತಿಯಾಧಿಪತಿ ಉಚ್ಛರಾಶಿಯಲ್ಲಿ ಇರುವುದು ಹಾಗೂ ಭಾಗ್ಯದಲ್ಲಿ ಬುಧ ಮತ್ತು ಶುಕ್ರ ಕರ್ಮಸ್ಥಾನದಲ್ಲಿ ಇರುವುದು ಸಹಕಾರಿಯಾಗಲಿದೆ. ಸೂರ್ಯ ಮಂಗಳಕರ ಆಗಿರುವುದರಿಂದ ಅವರು ಮುಖ್ಯಮಂತ್ರಿಯಾಗುತ್ತಾರೆ. ಆದರೆ, ಅವರ ಕುಂಡಲಿಯಲ್ಲಿ ಗುರು ಕರ್ಕ ರಾಶಿಯಲ್ಲಿ ಶತ್ರು ಸ್ಥಾನದಲ್ಲಿ ಇರುವುದರಿಂದ ತಮ್ಮವರೇ ಇವರಿಗೆ ಶತ್ರುಗಳಾಗಿದ್ದಾರೆ ಎಂದು ವಿಶ್ಲೇಷಿಸಿದರು.
ಡಿಕೆ ಸಿಎಂ ಆಗಲಿ ಎಂದು ದೇವರಿಗೆ 1001 ಈಡುಗಾಯಿ ಒಡೆದು ಪೂಜೆ
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಅವರ ಅಭಿಮಾನಿಗಳು ದೇವರ ಮೊರೆ ಹೋಗುತ್ತಿದ್ದು, ಮಂಡ್ಯ ಜಿಲ್ಲೆಯ ಡಿಕೆಶಿ ಅಭಿಮಾನಿಗಳು ಗುರುವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನೂರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಬೇಡಿಕೊಂಡು 1,001 ಈಡುಗಾಯಿ ಒಡೆದರು. ಡಿಕೆಶಿ ಪರವಾಗಿ ಘೋಷಣೆ ಕೂಗಿದರು. ಇದೇ ವೇಳೆ, ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ಹಾಡು ಹಾಡಿ, ಡಿಕೆಶಿಗೆ ಸಿಎಂ ಹುದ್ದೆ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ಡಿಕೆಶಿಗೆ ಸಿಎಂ ಹುದ್ದೆ ಬಿಟ್ಟು ಕೊಟ್ಟು ಮಾನವೀಯತೆ ಮೆರೆಯುವಂತೆ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು. ‘ಮಾನವನಾಗುವೆಯಾ, ಇಲ್ಲಾ ದಾನವನಾಗುವೆಯಾ, ಮಾನವ ಕುಲಕೆ ನೀ ಮುಳ್ಳಾಗುವೆಯಾ?, ಹೇಳಿ, ಸಿದ್ದರಾಮಯ್ಯ, ಹೇಳಿ’ ಎಂದು ಹಾಡು ಹಾಡಿದರು.


