ಕರ್ನಾಟಕದಲ್ಲಿನ ನಾಯಕತ್ವ ಮತ್ತು ಅಧಿಕಾರ ಹಂಚಿಕೆ ಚರ್ಚೆಗಳ ನಡುವೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆರು ಹಿರಿಯ ಸಚಿವರು ದೆಹಲಿಗೆ ತೆರಳಲಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸಲಹೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ನಡೆಯುತ್ತಿರುವ ನಾಯಕತ್ವ ಹಾಗೂ ಅಧಿಕಾರ ಹಂಚಿಕೆ ಚರ್ಚೆಗಳ ನಡುವೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸಕ್ಕೆ ಈಗ ಆರು ಮಂದಿ ಹಿರಿಯ ಸಚಿವರು ಸಹ ಜೊತೆಯಾಗಲಿದ್ದಾರೆ ಎಂಬುದು ದೃಢಪಟ್ಟಿದೆ. ಈ ಬಗ್ಗೆ ಇಬ್ಬರು ನಾಯಕರು ಸಹ ಒಪ್ಪಿಗೆ ಸೂಚಿಸಿರುವುದು ರಾಜಕೀಯ ವಲಯದಲ್ಲಿ ಹೊಸ ಕುತೂಹಲ ಮೂಡಿಸಿದೆ.
ಆರು ಸದಸ್ಯರ ಸಚಿವರ ತಂಡಕ್ಕೆ ಸಿಎಂ–ಡಿಸಿಎಂ ಒಪ್ಪಿಗೆ
ದೆಹಲಿಯಲ್ಲಿ ನಡೆಯಲಿರುವ ಸಭೆಗಳಲ್ಲಿ, ಶಾಸಕಾಂಗ ಹಾಗೂ ಸರ್ಕಾರದಲ್ಲಿ ಉಂಟಾದ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ, ಆರು ಮಂದಿ ಪ್ರಮುಖ ಸಚಿವರು ಸಿಎಂ ಮತ್ತು ಡಿಸಿಎಂ ಜೊತೆ ದೆಹಲಿಗೆ ತೆರಳಲಿದ್ದಾರೆ. ಇವರ ಹೆಸರುಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದ್ದು, ಇದು ರಾಜ್ಯ ಕಾಂಗ್ರೆಸ್‌ನ ಒಳರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ದೆಹಲಿಗೆ ತೆರಳುವ ಸಚಿವರ ಪಟ್ಟಿ
ಸಿಎಂ ಮತ್ತು ಡಿಸಿಎಂ ಜೊತೆ ರಾಜಕೀಯ ಚರ್ಚೆಗೆ ದೆಹಲಿಗೆ ತೆರಳಲಿರುವ ಸಚಿವರೆಂದರೆ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್, ಡಾ. ಹೆಚ್.ಸಿ. ಮಹದೇವಪ್ಪ, ಜೊತೆಗೆ ಇನ್ನಿಬ್ಬರು ಸಚಿವರು ಅಂತಿಮ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಈ ಸಚಿವರು ರಾಜ್ಯದ ಒಳರಾಜಕೀಯ, ಸಮುದಾಯ ಆಧಾರಿತ ಒತ್ತಡಗಳು, ಶಾಸಕರ ಅಭಿಪ್ರಾಯಗಳು, ಹಾಗೂ ಸಿಎಂ–ಡಿಸಿಎಂ ಅಧಿಕಾರ ಹಂಚಿಕೆ ಸಂಬಂಧಿತ ವಿಷಯಗಳನ್ನು ಹೈಕಮಾಂಡ್ ಮುಂದೆ ಮಂಡಿಸಲಿದ್ದಾರೆಂದು ಅಂದಾಜಿಸಲಾಗಿದೆ.
ಸಂಪುಟ ಸಭೆಯಲ್ಲಿ ಪರಮೇಶ್ವರ್ ಪ್ರಮುಖ ಪ್ರಸ್ತಾಪ
ಸಂಪುಟ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ರಾಜ್ಯದಲ್ಲಿ ಗೊಂದಲ ಹೆಚ್ಚುತ್ತಿದೆ. ಹೀಗಾಗಿ ಹಿರಿಯ ಸಚಿವರು ಕೂಡಾ ಒಂದಾಗಿ ದೆಹಲಿಗೆ ಹೋಗುವುದು ಸೂಕ್ತ. ಮಲ್ಲಿಕಾರ್ಜುನ ಖರ್ಗೆ ಅವರೂ ನನಗೆ ಕರೆ ಮಾಡಿ, ಹಿರಿಯ ಸಚಿವರ ಜೊತೆ ಬನ್ನಿ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಪರಮೇಶ್ವರರ ಈ ಸಲಹೆಗೆ ಸಿಎಂ ಸಿದ್ದರಾಮಯ್ಯ ಕೂಡಾ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಹೀಗಾದರೆ ಹಿರಿಯ ಸಚಿವರೊಂದಿಗೆ ದೆಹಲಿಗೆ ಹೋಗೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಇದರ ಜೊತೆಗೆ ಶಾಸಕರು ದೆಹಲಿಗೆ ಹೋಗಿದ್ದಕ್ಕೆ ಗೃಹ ಸಚಿವ ಪರಮೇಶ್ವರ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಗೆ ಶಾಸಕರ ಗುಂಪು ಹೋಗುತ್ತೆ, ಮತ್ತೊಂದು ಕಡೆ ಶಾಸಕರ ಗುಂಪು ಮೀಟಿಂಗ್ ಮಾಡುತ್ತೆ. ಹೀಗೆ ಆದ್ರೆ ಹೇಗೆ ಎಂದು ಪರಮೇಶ್ವರ್ ಅಸಮಧಾನ ತೋರಿದ್ದಾರೆ. ಈ ವೇಳೆ ಸಿಎಂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಗೊಂದಲವಾಗುತ್ತಿದೆ ಹಿರಿಯ ಸಚಿವರ ಜೊತೆಗೆ ದೆಹಲಿಗೆ ಹೋಗೋಣ. ಮಲ್ಲಿಕಾರ್ಜುನ ಖರ್ಗೆ ಕೂಡ ನನಗೆ ಕರೆ ಮಾಡಿದ್ರು, ಹಿರಿಯ ಸಚಿವರ ಜೊತೆಗೆ ಬನ್ನಿ ಅಂದಿದ್ದಾರೆ. ಹೀಗಾಗಿ ಹಿರಿಯ ಸಚಿವರ ಜೊತೆಗೆ ಹೋಗೋಣ ಎಂದು ಸಭೆಯಲ್ಲಿ ಗೃಹಸಚಿವರು ಹೇಳಿದ್ದಾರೆ. ಹೀಗಾಗಿ ಹಿರಿಯ ಸಚಿವರ ಜೊತೆಗೆ ಹೋಗೋಣ ಎಂದು ಸಿಎಂ ಕೂಡ ಹೇಳಿದ್ದು ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಗೆ ಸೂಚಿಸಿದ್ದಾರೆನ್ನಲಾಗಿದೆ.
ಅಧಿಕಾರ ಹಂಚಿಕೆ ಚರ್ಚೆಗೆ ಸಕಲ ಸಿದ್ಧತೆ
ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ, ಹಾಗೂ ಅಹಿಂದ ಒಕ್ಕಲಿಗ ಸಮುದಾಯಗಳ ಒತ್ತಡದ ನಡುವೆ, ಈ ದೆಹಲಿ ಭೇಟಿ ಅತ್ಯಂತ ಮಹತ್ತರವಾಗಲಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಹೈಕಮಾಂಡ್ ಮುಂದೆ ಸರ್ಕಾರದ ವರ್ತಮಾನ ಪರಿಸ್ಥಿತಿ, ಪಕ್ಷದ ಒಳ ಒತ್ತಡ, ಹಾಗೂ ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.


