Assembly election: ಫೆ.3ರಿಂದ ಡಿಕೆಶಿ, ಸಿದ್ದು ಪ್ರತ್ಯೇಕ ಯಾತ್ರೆ
- ಫೆ.3ರಿಂದ ಡಿಕೆಶಿ, ಸಿದ್ದು ಪ್ರತ್ಯೇಕ ಯಾತ್ರೆ
- ದಕ್ಷಿಣ ಕರ್ನಾಟಕದಲ್ಲಿ ಡಿಕೆಶಿ, ಉತ್ತರ ಕರ್ನಾಟಕದಲ್ಲಿ ಸಿದ್ದು ತಂಡಗಳ ಸಂಚಾರ
- ಕುರುಡುಮಲೆಯಲ್ಲಿ ಡಿಕೆಶಿ, ಬಸವಕಲ್ಯಾಣದಲ್ಲಿ ಸಿದ್ದು ಬಸ್ ಯಾತ್ರೆಗೆ ಚಾಲನೆ
ಬೆಂಗಳೂರು (ಜ.30) : ರಾಜ್ಯ ಕಾಂಗ್ರೆಸ್ ನಾಯಕರು ಫೆ.3ರಿಂದ ಹಮ್ಮಿಕೊಳ್ಳಲಿರುವ ಎರಡನೇ ಹಂತದ ‘ಪ್ರಜಾಧ್ವನಿ’ ಬಸ್ ಯಾತ್ರೆಯ ವೇಳಾಪಟ್ಟಿಹಾಗೂ ಮಾರ್ಗ ನಕ್ಷೆ ಬಿಡುಗಡೆಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(KPCC President DK Shivakumar) ಅವರು ಫೆ.3ರಿಂದ 9ರವರೆಗೆ ದಕ್ಷಿಣ ಕರ್ನಾಟಕ(Dakshina karnataka) ಭಾಗದಲ್ಲಿ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಫೆ.3ರಿಂದ 12ರವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ಯಾತ್ರೆ ಕೈಗೊಳ್ಳಲಿದ್ದಾರೆ.
ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದು ಸ್ಪರ್ಧಿಸಲ್ಲ: ಬಿಎಸ್‌ವೈ ಹೊಸ ಬಾಂಬ್!
ಫೆ.3ರಂದು ಸಿದ್ದರಾಮಯ್ಯ ಅವರು ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಮ್ಮ ಬಸ್ ಯಾತ್ರೆಗೆ ಚಾಲನೆ ನೀಡಲಿದ್ದರೆ, ಅದೇ ದಿನ ಡಿ.ಕೆ.ಶಿವಕುಮಾರ್ ಅವರು ಕೋಲಾರದ ಮುಳಬಾಗಿಲಿನ ಕುರುಡುಮಲೆ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಯಾತ್ರೆ ಶುರು ಮಾಡಲಿದ್ದಾರೆ.
ಸಿದ್ದರಾಮಯ್ಯ ಯಾತ್ರೆಯ ವೇಳಾಪಟ್ಟಿ:
ಸಿದ್ದರಾಮಯ್ಯ ಅವರು ಫೆ.3ರ ಶುಕ್ರವಾರದಿಂದ ಬಸವ ಕಲ್ಯಾಣದ ಅನುಭವ ಮಂಟಪದ ಬಳಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ತಮ್ಮೊಂದಿಗೆ ಆ ಭಾಗದ ಪ್ರಮುಖ ನಾಯಕರನ್ನು ಕರೆದುಕೊಂಡು ಬಸ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಫೆ.4ರಂದು ಭಾಲ್ಕಿ, ಔರಾದ್, ಬೀದರ್, ಹುಮ್ನಾಬಾದ್, ಫೆ.5ರಂದು ಕಲಬುರಗಿ, ಹೂವಿನ ಹಡಗಲಿ, ಫೆ.5ರಂದು ಕಲಬುರಗಿ, ಕಮಲಾಪುರ (ಕಲಬುರಗಿ ಗ್ರಾಮೀಣ), ಚಿಂಚೋಳಿ, ಸೇಡಂ, ಫೆ.7ರಂದು ಕಲಬುರಗಿಯ ಆಳಂದ, ಅಫ್ಜಲಪುರ, ಯಡ್ರಾಮಿ, ಫೆ.8ರಂದು ಚಿತ್ತಾಪುರ, ಕಲಬುರಗಿ, ಫೆ.9ರಂದು ದಾವಣಗೆರೆ ರಾಜನಹಳ್ಳಿ, ಫೆ.10ರಂದು ಸುರಪುರ, ಶಹಾಪುರ, ಕಲಬುರಗಿ ಉತ್ತರ, ಫೆ.11ರಂದು ಸಿಂದಗಿ, ಇಂಡಿ, ನಾಗಠಾಣ, ಫೆ.12ರಂದು ವಿಜಯಪುರ, ಬಬಲೇಶ್ವರ, ದೇವರ ಹಿಪ್ಪರಗಿ, ಬಸವನ ಬಾಗೇವಾಡಿ, ಆಲಮಟ್ಟಿಗಳಲ್ಲಿ ಯಾತ್ರೆ ನಡೆಸಲಿದ್ದಾರೆ. ಬಳಿಕ ಫೆ.13ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಶಿವಕುಮಾರ್ ಬಸ್ ಯಾತ್ರೆಯ ವಿವರ:
ಡಿ.ಕೆ.ಶಿವಕುಮಾರ್ ಅವರು ಫೆ.3ರಂದು ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಸ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ ಮೊದಲ ದಿನ ಕೆಜಿಎಫ್ ಕ್ಷೇತ್ರದಲ್ಲಿ ಯಾತ್ರೆ ಮಾಡಲಿದ್ದಾರೆ. ಫೆ.4ರಂದು ಮಾಲೂರು, ದೇವನಹಳ್ಳಿ, ಫೆ.6ರಂದು ಚಿತ್ರದುರ್ಗದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು, ಫೆ.7ರಂದು ಚಿತ್ರದುರ್ಗದ ಹೊಳಲ್ಕೆರೆ, ಹೊಸದುರ್ಗ, ಶಿವಮೊಗ್ಗ, ಫೆ.8ರಂದು ಶಿಕಾರಿಪುರ, ಸೊರಬ, ಸಾಗರ, ಫೆ.9ರಂದು ತೀರ್ಥಹಳ್ಳಿ, ಭದ್ರಾವತಿಯಲ್ಲಿ ಎರಡನೇ ಹಂತದ ಕೊನೆಯ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ.
89 ಮಂದಿ ಸಮನ್ವಯ ಸದಸ್ಯರ ನೇಮಕ
ಸಿದ್ದರಾಮಯ್ಯ ಅವರ ಉತ್ತರ ಕರ್ನಾಟಕ ಯಾತ್ರೆಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಬಸವರಾಜ ರಾಯರೆಡ್ಡಿ, ಸಂಚಾಲಕರಾಗಿ ಪ್ರಕಾಶ್ ಕೆ. ರಾಥೋಡ್ ನೇಮಕಗೊಂಡಿದ್ದು, ಎಂ.ಬಿ.ಪಾಟೀಲ್ ಸೇರಿ 35 ಮಂದಿ ಸಮನ್ವಯ ಸಮಿತಿ ಸದಸ್ಯರು ನೇಮಕಗೊಂಡಿದ್ದಾರೆ.
ಒಡೆಯುವುದು ಗೊತ್ತಿಲ್ಲ, ಒಗ್ಗೂಡಿಸುವುದಷ್ಟೇ ಗೊತ್ತು : ಪೂರ್ಣಿಮಾ ಶ್ರೀನಿವಾಸ್
ಉಳಿದಂತೆ ಡಿ.ಕೆ.ಶಿವಕುಮಾರ್ ಅವರ ದಕ್ಷಿಣ ಕರ್ನಾಟಕ ಬಸ್ ಯಾತ್ರೆಯ ಸಮನ್ವಯ ಸಮಿತಿಗೆ ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಅಧ್ಯಕ್ಷರಾಗಿ ಹಾಗೂ ಎಸ್.ಹುಸೇನ್ ಸಂಚಾಲಕರಾಗಿ ನೇಮಕಗೊಂಡಿದ್ದು, ಸಮನ್ವಯ ಸಮಿತಿ ಸದಸ್ಯರಾಗಿ 54 ಮಂದಿಯನ್ನು ನೇಮಿಸಲಾಗಿದೆ.