ಒಡೆಯುವುದು ಗೊತ್ತಿಲ್ಲ, ಒಗ್ಗೂಡಿಸುವುದಷ್ಟೇ ಗೊತ್ತು : ಪೂರ್ಣಿಮಾ ಶ್ರೀನಿವಾಸ್
ಸಮುದಾಯ ಒಡೆಯುವುದು ಗೊತ್ತಿಲ್ಲ. ಒಗ್ಗೂಡಿಸುವುದಷ್ಟೇ ಗೊತ್ತು ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾರ್ಮಿಕವಾಗಿ ನುಡಿದರು.
ತುಮಕೂರು : ಸಮುದಾಯ ಒಡೆಯುವುದು ಗೊತ್ತಿಲ್ಲ. ಒಗ್ಗೂಡಿಸುವುದಷ್ಟೇ ಗೊತ್ತು ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾರ್ಮಿಕವಾಗಿ ನುಡಿದರು.
ತುಮಕೂರಿನ ಕನ್ನಡಭವನದಲ್ಲಿ ಶ್ರೀಕೃಷ್ಣ ಗೆಳೆಯರ ಬಳಗ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮ ಮತ್ತು ಗೊಲ್ಲಗಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಗೊಲ್ಲ ಸಮುದಾಯದಲ್ಲಿ ಸಂಘಟನೆ ಎಂಬುದು ಕುಸಿತ ಕಾಣುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಗೊಲ್ಲ, ಕಾಡುಗೊಲ್ಲ ಎಂಬ ಗೊಂದಲ. ನಾನಾಗಲಿ, ನಮ್ಮ ಕುಟುಂಬದವರಾಗಲಿ ಎಂದಿಗೂ ಕಾಡುಗೊಲ್ಲರನ್ನು ಎಸ್ಟಿಜಾತಿ ಪಟ್ಟಿಗೆ ಸೇರಿಸಲು ವಿರೋಧ ಮಾಡಿಲ್ಲ. ಆದರೆ ಕೆಲವರು ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನನಗೆ ಸಮುದಾಯ ಒಡೆಯುವುದು ಗೊತ್ತಿಲ್ಲ. ಒಗ್ಗೂಡಿಸುವುದಷ್ಟೇ ಗೊತ್ತು. ಛಿದ್ರಗೊಂಡಿರುವ ಗೊಲ್ಲ ಸಮುದಾಯದ ಸಂಘಟನೆಗಳು ಒಂದೇ ವೇದಿಕೆಗೆ ಬಂದು ಹೋರಾಟ ರೂಪಿಸಿದಾಗ ಮಾತ್ರ ನಮ್ಮ ಬೇಡಿಕೆಗಳು ಈಡೇರಲು ಸಾಧ್ಯ ಎಂದು ಶಾಸಕಿ ಪೂರ್ಣೀಮ ನುಡಿದರು.
ಸಮುದಾಯ ಮೊದಲು:
ಪಕ್ಷವನ್ನು ಸಮರ್ಥಿಸಿಕೊಳ್ಳಲು ಬೇರೆ ವೇದಿಕೆಗಳಿವೆ. ಆದರೆ ಸಮುದಾಯದ ವಿಷಯ ಬಂದಾಗ ಜನಾಂಗ ಮೊದಲು, ನಂತರ ಪಕ್ಷ ಎಂದು ಹಿರಿಯೂರು ಶಾಸಕಿ ಪೂರ್ಣೀಮ ಶ್ರೀನಿವಾಸ್ ತಿಳಿಸಿದರು. ನಾನು ಇಂದು ಶಾಸಕಿಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಸಮುದಾಯ. ಹಾಗಾಗಿ ಸಮುದಾಯದ ವಿಷಯಕ್ಕೆ ಮೊದಲ ಆದ್ಯತೆ ನೀಡಲಾಗುವುದೆಂದರು. ಗೊಲ್ಲ ಸಮುದಾಯ ಶಿಕ್ಷಣ, ಸಂಘಟನೆ ಮತ್ತು ರಾಜಕಾರಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಕಡೆಗೆ ಸಮುದಾಯದ ಯುವಜನತೆ ಆಸಕ್ತಿ ತೋರುತ್ತಿದ್ದಾರೆ. ಆದರೆ ರಾಜಕೀಯದ ಕಡೆಗೆ ಅಷ್ಟು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಸುಮಾರು 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಮ್ಮ ಸಮುದಾಯದಲ್ಲಿ ಓರ್ವ ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರನ್ನು ಮಾತ್ರ ಹೊಂದಲು ಸಾಧ್ಯವಾಗಿದೆ. ಎಲ್ಲೆಲ್ಲಿ ಅವಕಾಶಗಳು ದೊರೆಯುತ್ತವೆಯೋ ಅಲ್ಲೆಲ್ಲಾ ಗೊಲ್ಲ ಸಮುದಾಯ ರಾಜಕೀಯವಾಗಿ ಬೆಳೆಯಲು ಅಗತ್ಯ ವೇದಿಕೆ ಸಿದ್ಧಪಡಿಸಿಕೊಳ್ಳಿ, ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂಬ ಭರವಸೆಯನ್ನು ಶಾಸಕಿ ಪೂರ್ಣೀಮ ಶ್ರೀನಿವಾಸ್ ನೀಡಿದರು.
ಪೂರ್ಣಿಮಾಗೆ ಸಚಿವ ಸ್ಥಾನ ತಪ್ಪಿಸಲಾಯಿತು:
ಅಭಿನಂದನೆ ಸ್ವೀಕರಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ, ಸಮುದಾಯದಲ್ಲಿ ಒಗ್ಗಟ್ಟಿನ ಕೊರತೆಯನ್ನು ಮುಂದಿಟ್ಟುಕೊಂಡು, ಸಚಿವರಾಗಿ ಆಯ್ಕೆಯಾಗಿದ್ದರೂ ಕೊನೆಯ ಕ್ಷಣದಲ್ಲಿ ಶಾಸಕಿ ಪೂರ್ಣೀಮ ಅವರಿಗೆ ಸಚಿವ ಸ್ಥಾನ ತಪ್ಪಿಸಲಾಯಿತು. ಕಾಂಗ್ರೆಸ್ ಪಕ್ಷ ಎ.ಕೃಷ್ಣಪ್ಪನವರಿಗೆ ಎಲ್ಲವನ್ನೂ ನೀಡಿತ್ತು. ಸಮಾಜ ಕಲ್ಯಾಣ ಸಚಿವರನ್ನಾಗಿ ಮಾಡಿತ್ತು. ಅವರ ಕುಡಿಯಾಗಿರುವ ನೀವು ಎಷ್ಟುದಿನ ಬಿಜೆಪಿಯಲ್ಲಿ ಈ ಅವಮಾನ ಸಹಿಸಿಕೊಂಡು ಇರುತ್ತೀರಿ. ಕಾಂಗ್ರೆಸ್ ಪಕ್ಷಕ್ಕೆ ಬನ್ನಿ, ನಿಮ್ಮನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದು ಆಹ್ವಾನಿಸಿದರು.
ನಾಲ್ಕು ಬಾರಿ ಪ್ರವಾಸ ಮಾಡಿದ್ದೇನೆ:
ರಾಜ್ಯ ಗೊಲ್ಲ(ಯಾದವ) ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ನಾನು ರಾಜ್ಯಾಧ್ಯಕ್ಷನಾದ ನಂತರ ಇಡೀ ರಾಜ್ಯವನ್ನು ನಾಲ್ಕು ಬಾರಿ ಪ್ರವಾಸ ಮಾಡಿದ್ದೇನೆ. ಹಲವಾರು ದಿನಗಳಿಂದ ಕಾಡುಗೊಲ್ಲರನ್ನು ಎಸ್ಟಿಸಮುದಾಯಕ್ಕೆ ಸೇರಿಸಬೇಕೆಂಬ ಫೈಲ್‌ನ ಹಿಂದೆ ಸುತ್ತುತಿದ್ದರೂ ನಮ್ಮ ಮೇಲಿನ ಆಪಾದನೆ ನಿಂತಿಲ್ಲ. ಕಾಡುಗೊಲ್ಲರನ್ನು ಪರಿಶಿಷ್ಟವರ್ಗಕ್ಕೆ ಸೇರಿಸಬೇಕೆಂಬ ಕಡತ ಅಂತಿಮ ಹಂತದಲ್ಲಿದೆ. ಕಾಡುಗೊಲ್ಲರು ಕಾಡುಗಳಲ್ಲಿ ಇದ್ದು, ಬೇಟೆಯಾಡುತ್ತಿದ್ದರು ಎಂಬುದಕ್ಕೆ ಪುರಾವೆ ಒದಗಿಸುವಂತೆ ಕೇಂದ್ರ ಸರ್ಕಾರ ಕೇಳಿದೆ. ಅದನ್ನು ಸಲ್ಲಿಸಿದ ತಕ್ಷಣವೇ ನಮ್ಮ ಕೆಲಸ ಆಗುತ್ತದೆ. ಇದರ ಜೊತೆಗೆ ಪ್ರವರ್ಗ ಒಂದರಲ್ಲಿ ಇರುವ ಇತರೆ ಗೊಲ್ಲ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂಬ ಹೋರಾಟವು ನಡೆಯುತ್ತಿದ್ದು, ಎಲ್ಲರೂ ಒಗ್ಗೂಡಿ ಪ್ರಯತ್ನಿಸಿದರೆ ಖಂಡಿತವಾಗಿ ಭವಿಷ್ಯದಲ್ಲಿ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.
ಶ್ರೀಕೃಷ್ಣ ಗೆಳೆಯರ ಬಳಗದ ಗೌರವಾಧ್ಯಕ್ಷ ಹಾಗೂ ಸುದ್ದಿಬಿಂಬ ಪತ್ರಿಕೆ ಸಂಪಾದಕ ಡಿ.ಎಂ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಜಿ.ಜೆ.ರಾಜಣ್ಣ, ಧರ್ಮದರ್ಶಿ ಪಾಪಣ್ಣ, ಮುರಳೀ ಕೃಷ್ಣಪ್ಪ, ಸೌಭಾಗ್ಯಮ್ಮ, ಮಾಚೇನಹಳ್ಳಿ ಕರಿಯಪ್ಪ ಅವರಿಗೆ ಗೊಲ್ಲಗಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್, ಜಿಪಂ ಮಾಜಿ ಅಧ್ಯಕ್ಷೆ ಪ್ರೇಮ ಮಹಾಲಿಂಗಪ್ಪ, ಪಾವಗಡದ ಬಲರಾಮ ರೆಡ್ಡಿ, ಪಾಲಿಕೆ ಸದಸ್ಯೆ ಚಂದ್ರಕಲಾ ಪುಟ್ಟರಾಜು, ಚಲನಚಿತ್ರ ನಿರ್ದೇಶಕ ಕೀರ್ತಿ, ಗಾಯಕ ಮೋಹನ್, ಶ್ರೀಕೃಷ್ಣ ಗೆಳೆಯರ ಬಳಗದ ಅಧ್ಯಕ್ಷರಾದ ಕುಣಿಹಳ್ಳಿ ಆರ್.ಮಂಜುನಾಥ್, ಗಂಗಾಧರ್.ಕೆ, ಸತೀಶ್, ಲಿಂಗಾರೆಡ್ಡಿ, ಬಿ.ಎಸ್.ಜಯಪ್ರಕಾಶ್ ಇತರರಿದ್ದರು.
ಭಿನ್ನಾಭಿಪ್ರಾಯ ಮರೆತು ಒಗ್ಗಾಟ್ಟಾಗೋಣ: ನಾಗರಾಜ್‌ಯಾದವ್
ವಿಧಾನ ಪರಿಷತ್ ಸದಸ್ಯ ನಾಗರಾಜ್‌ಯಾದವ್ ಮಾತನಾಡಿ, ನಮ್ಮದೇ ಸಮುದಾಯದ ಉಪಪಂಗಡವಾಗಿರುವ ಕಾಡುಗೊಲ್ಲ ಸಮುದಾಯವನ್ನು ಬದಿಗಿಟ್ಟು ಸಮುದಾಯ ಸಂಘಟನೆ ತರವಲ್ಲ. ಅವರ ಎಸ್ಟಿಮೀಸಲಾತಿ ಹೋರಾಟಕ್ಕೆ ನಾವೆಲ್ಲರೂ ಕೈಜೋಡಿಬೇಕಿದೆ. ಎ.ಕೃಷ್ಣಪ್ಪ ನಂತರ ಕಾಡುಗೊಲ್ಲ ಸಮುದಾಯದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ನಾಯಕತ್ವದ ಕೊರತೆ ಎದುರಿಸುತ್ತಿದ್ದೇವೆ. ಇದರ ಜೊತೆಗೆ 2-3ನೇ ಹಂತದ ನಾಯಕರ ಕೊರತೆಯನ್ನು ಎದುರಿಸುತ್ತಿದ್ದೇವೆ. ಇವುಗಳು ನಿವಾರಣೆಯಾಗಬೇಕಾದರೆ ಎಲ್ಲರೂ ನಮ್ಮ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಹೋರಾಟ ರೂಪಿಸಬೇಕಿದೆ. ಪ್ರಬಲ ಸಮುದಾಯಗಳು ಮೀಸಲಾತಿ ಕೇಳಿದರೆ ತಕ್ಷಣವೇ ಒಪ್ಪುವ ಬಿಜೆಪಿ ಡಬಲ್ ಎಂಜಿನ್ ಸರ್ಕಾರ, ಕಾಡುಗೊಲ್ಲರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದು ಏಕೆ ಎಂಬುದನ್ನು ಪ್ರಶ್ನಿಸಬೇಕಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದ್ದರೆ ನಮ್ಮಗಳ ನಡುವಿನ ಯಾದವಿ ಕಲಹ ಕೊನೆಗೊಳ್ಳಬೇಕು ಎಂದು ಸಲಹೆ ನೀಡಿದರು.