ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ನಾನು ಹಿಂದೂ ವಿರೋಧಿ ಅಲ್ಲ. ನನ್ನನ್ನು ಸುಮ್ಮನೆ ಹಿಂದೂ ವಿರೋಧಿ ಎಂಬಂತೆ ಬಿಂಬಿಸಿದ್ದಾರೆ. ಅವನ್ಯಾವನೋ ಸಿ.ಟಿ.ರವಿ ಅಂತ ಒಬ್ಬ ಇದ್ದಾನೆ, ಕೆಲಸಕ್ಕೆ ಬಾರದವನು. ಅವನು ನನ್ನ ಹೆಸರನ್ನು ಸಿದ್ರಾಮುಲ್ಲಾ ಖಾನ್ ಅಂತ ಕರೆಯುತ್ತಾನೆ.
ರಾಮನಗರ (ಜ.30): ನಾನು ಹಿಂದೂ ವಿರೋಧಿ ಅಲ್ಲ. ನನ್ನನ್ನು ಸುಮ್ಮನೆ ಹಿಂದೂ ವಿರೋಧಿ ಎಂಬಂತೆ ಬಿಂಬಿಸಿದ್ದಾರೆ. ಅವನ್ಯಾವನೋ ಸಿ.ಟಿ.ರವಿ ಅಂತ ಒಬ್ಬ ಇದ್ದಾನೆ, ಕೆಲಸಕ್ಕೆ ಬಾರದವನು. ಅವನು ನನ್ನ ಹೆಸರನ್ನು ಸಿದ್ರಾಮುಲ್ಲಾ ಖಾನ್ ಅಂತ ಕರೆಯುತ್ತಾನೆ. ನಮ್ಮ ಮನೆ ದೇವರು ಸಿದ್ದರಾಮೇಶ್ವರ, ನಮ್ಮ ಊರ ಹೆಸರು ಸಿದ್ದರಾಮನಹುಂಡಿ. ಅದಕ್ಕೆ ನಮ್ಮಪ್ಪ ಸಿದ್ದರಾಮಯ್ಯ ಅಂತ ಹೆಸರಿಟ್ಟಿದ್ದಾರೆ. ನಾನೂ ಅಪ್ಪಟ ಹಿಂದೂ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಹಾತ್ಮಗಾಂಧಿ ಕೂಡ ಅಪ್ಪಟ ಹಿಂದೂ ಆಗಿದ್ದವರು. ಹಿಂದೂ ಮುಸ್ಲಿಂರು ಭ್ರಾತೃತ್ವ, ಸಾಮರಸ್ಯದಿಂದ ಇರಬೇಕೆಂದು ಗಾಂಧೀಜಿ ಹೋರಾಟ ಮಾಡುತ್ತಿದ್ದರು. ಈ ಕಾರಣಕ್ಕಾಗಿ ಅವರನ್ನು ಕೊಂದು ಹಾಕಿದೀರಿ. ಆ ಮಹಾನ್ ವ್ಯಕ್ತಿಯನ್ನು ಕೊಲೆ ಮಾಡಿದ ಗೋಡ್ಸೆಯನ್ನು ಪೂಜಿಸುತ್ತೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಿಸುತ್ತಿದ್ದಾರೆ. ಆದರೆ, ಅವರು ಯಾರು ಮನುವಾದ ಹಾಗೂ ಪುರೋಹಿತ ಶಾಹಿ ಆಚರಣೆ ಮಾಡುತ್ತಾರೊ ಅದು ದೇಶಕ್ಕೆ ಶಾಪವೆಂದು ಹೇಳಿದ್ದರು. ಅವರ ಮಾತುಗಳಿಂದಲು ಬಿಜೆಪಿಯವರಿಗೆ ಜ್ಞಾನೋದಯ ಆಗಿಲ್ಲ.
ಕೈ ಮುಗಿದು ಪ್ರಾರ್ಥಿಸುವೆ, ಬಾಲಕೃಷ್ಣರ ಸೋಲಿಸಬೇಡಿ: ಸಿದ್ದರಾಮಯ್ಯ
ಮನುವಾದ ಪಾಲಿಸುವ ಹಾಗೂ ಗೋಡ್ಸೆಯನ್ನು ಆರಾಧಿಸುವ ಬಿಜೆಪಿಯೊಂದಿಗೆ ಸೇರಿ ಜೆಡಿಎಸ್ನವರು ಸರ್ಕಾರ ರಚನೆ ಮಾಡಲು ಹೋಗುತ್ತಾರೆ. ಅವರಿಗೆ ಸ್ವಲ್ಪವಾದರು ನಾಚಿಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು. ನಮ್ಮ ಸಂವಿಧಾನ ಮನುಷ್ಯ ಮನುಷ್ಯನನ್ನು ಪ್ರೀತಿಸುವ, ಸಹಿಷ್ಣುತೆ, ಸಹಬಾಳ್ವೆಯನ್ನು ಹೇಳುತ್ತದೆ. ಜಾತಿ - ಧರ್ಮ ವ್ಯವಸ್ಥೆ ದೇವರು ಮಾಡಿದ್ದಲ್ಲ, ಅದನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮಾಡಿಕೊಂಡಿದ್ದಾನೆ. ಒಂದು ಜಾತಿ ಧರ್ಮದಲ್ಲಿ ಹುಟ್ಟಿದ ಕಾರಣಕ್ಕೆ ಅದನ್ನು ಪಾಲನೆ ಮಾಡುತ್ತಿದ್ದೇವೆ. ಮನುಷ್ಯತ್ವ ದ್ವೇಷಿಸುವುದು ಅಮಾನವೀಯವಾದದ್ದು. ಯಾರನ್ನೂ ದ್ವೇಷಿಸಬಾರದು ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಅಲ್ಪಸಂಖ್ಯಾತರಿಗಾಗಿ 10 ಸಾವಿರ ಕೋಟಿ ಅನುದಾನ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ 10 ಸಾವಿರ ಕೋಟಿ ಅನುದಾನ ಮೀಸಲಿಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 3150 ಕೋಟಿ ರುಪಾಯಿ ಮೀಸಲಿಡಲಾಗಿತ್ತು. ಆನಂತರ ಬಿಜೆಪಿ ಸರ್ಕಾರ ಅನುದಾನವನ್ನು ಕಡಿತಗೊಳಿಸಿದೆ.
ರಾಜ್ಯದಲ್ಲಿ ಶೇಕಡ 14ರಷ್ಟು ಅಲ್ಪಸಂಖ್ಯಾತರಿದ್ದು, ಅವರಿಗಾಗಿ 10 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಹೇಳಿದರು. ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 400 ಕೋಟಿ ರು.ಗಳಿದ್ದ ಅನುದಾನ ಪ್ರಮಾಣವನ್ನು ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ 3150 ರು.ಗಳಿಗೆ ಹೆಚ್ಚಿಸಿದರು. ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿರವರು 1200 ಕೋಟಿ, ಆನಂತರ ಬಿಜೆಪಿ ಸರ್ಕಾರ 600 ಕೋಟಿ ರು.ಗಳಿಗೆ ಸೀಮಿತಗೊಳಿಸಿದೆ ಎಂದು ಗಮನ ಸೆಳೆದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ಅನುದಾನವನ್ನು 10 ಸಾವಿರ ಕೋಟಿ ರು.ಗಳಿಗೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದರು.
ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದರಾಮಯ್ಯ
ಈಗಾಗಲೇ ಕಾಂಗ್ರೆಸ್ ಪಕ್ಷ ಪ್ರತಿ ಕುಟುಂಬಕ್ಕೆ 200 ಯುನಿಟ್ ವಿದ್ಯುತ್, 10 ಕೆಜಿ ಅಕ್ಕಿ, ಮಹಿಳೆಯರಿಗೆ 2 ಸಾವಿರ ಹಾಗೂ ಲೀಟರ್ ಹಾಲಿಗೆ 6 ರುಪಾಯಿ ಪ್ರೋತ್ಸಾಹ ಧನ ನೀಡುವ ಭರವಸೆ ನೀಡಿದ್ದೇವೆ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ಸಮಿತಿ ರಚಿಸಿದ್ದು, ಇನ್ನೂ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಇದೆಲ್ಲವನ್ನು ಜನರ ತೆರಿಗೆ ಹಣದಿಂದಲೇ ನೀಡುತ್ತೇವೆ. ನಾವು ಜನರ ಕಲ್ಯಾಣಕ್ಕಾಗಿ ಅಧಿಕಾರಕ್ಕೆ ಬರುತ್ತೇವೆಯೇ ಹೊರತು ಮಜಾ ಮಾಡಲು ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.