ಕೈ ಮುಗಿದು ಪ್ರಾರ್ಥಿಸುವೆ, ಬಾಲಕೃಷ್ಣರ ಸೋಲಿಸಬೇಡಿ: ಸಿದ್ದರಾಮಯ್ಯ
ಶಾಸಕರಾಗಿದ್ದವರು ಕೆಲಸ ಮಾಡದೆ ಸೋತರೆ ನೋವಾಗಲ್ಲ. ಕೆಲಸ ಮಾಡಿಯೂ ಜನರು ಕೈ ಹಿಡಿಯದಿದ್ದರೆ ನೋವಾಗುತ್ತದೆ. ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಜನ ಪರ ಕಾಳಜಿ ಇಟ್ಟುಕೊಂಡಿರುವ ಬಾಲಕೃಷ್ಣ ಅವರನ್ನು ಸೋಲಿಸುವ ತಪ್ಪನ್ನು ಮತ್ತೆ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ರಾಮನಗರ (ಜ.30): ಶಾಸಕರಾಗಿದ್ದವರು ಕೆಲಸ ಮಾಡದೆ ಸೋತರೆ ನೋವಾಗಲ್ಲ. ಕೆಲಸ ಮಾಡಿಯೂ ಜನರು ಕೈ ಹಿಡಿಯದಿದ್ದರೆ ನೋವಾಗುತ್ತದೆ. ನಿಮ್ಮಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಜನ ಪರ ಕಾಳಜಿ ಇಟ್ಟುಕೊಂಡಿರುವ ಬಾಲಕೃಷ್ಣ ಅವರನ್ನು ಸೋಲಿಸುವ ತಪ್ಪನ್ನು ಮತ್ತೆ ಮಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಮಾಗಡಿ ಪಟ್ಟಣದಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಾಯಿ ಶಾರದಮ್ಮ ಮತ್ತು ತಂದೆ ಮಾಜಿ ಸಚಿವ ದಿ.ಚನ್ನಪ್ಪರವರ ಸ್ಮರಣಾರ್ಥ ನಿರ್ಮಿಸಿರುವ ಎಚ್ಕೆಜಿಎನ್ ಶಾದಿ ಮಹಲ್ ಅನ್ನು ಲೋಕಾರ್ಪಣೆಗೊಳಿಸಿದ ನಂತರ ವೇದಿಕೆ ಸಮಾರಂಭದಲ್ಲಿ ಮಾತನಾಡಿದರು. ಸಾಮಾನ್ಯವಾಗಿ ಸೋತವರು ಮನೆ ಸೇರುತ್ತಾರೆ. ಕಳೆದ ಬಾರಿ ಬಾಲಕೃಷ್ಣ ವಿನಾ ಕಾರಣ ಸೋತರು. ಆದರೂ ಧೃತಿಗೆಡದೆ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ತಂದೆ ಚನ್ನಪ್ಪ ನಮ್ಮೊಂದಿಗೆ ಶಾಸಕರಾಗಿದ್ದರು. ಅವರು ರೈತರು, ಬಡವರ ಪರವಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಆ ಪರಂಪರೆಯನ್ನು ಬಾಲಕೃಷ್ಣ ಮುಂದುವರೆಸಿದ್ದಾರೆಂದರು.
ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದರಾಮಯ್ಯ
ಬಾಲಕೃಷ್ಣನ ಆಶೀರ್ವದಿಸಿ ನಮಗೆ ಶಕ್ತಿ ತುಂಬಿ: ಕ್ಷೇತ್ರದ ಅಭಿವೃದ್ಧಿಗಾಗಿ ಅವರ ಕುಟುಂಬ ಸಾಕಷ್ಟುಶ್ರಮ ವಹಿಸಿದೆ. ಅಂತಹ ಕುಟುಂಬದವರನ್ನು ಸೋಲಿಸಿದ್ದು ನ್ಯಾಯವೇ. ಜನಪರ ಹಾಗೂ ಎಲ್ಲಾ ಜಾತಿ ಧರ್ಮದವರ ಪರವಾಗಿರುವ ವ್ಯಕ್ತಿಗಳು ನಿಮ್ಮ ಪ್ರತಿನಿಧಿ ಆಗಿರಬೇಕು. ಆವಾಗ ಮಾತ್ರ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು. ನಿಮ್ಮ ಪರವಾಗಿ ಕೆಲಸ ಮಾಡುವ ಬಾಲಕೃಷ್ಣ ಅವರನ್ನು ಕೈಬಿಡಬೇಡಿ. ಜಾತಿ-ಹಣ ಜನರ ಕಷ್ಟಸುಖಗಳಿಗೆ ಬರುವುದಿಲ್ಲ. ಜಾತಿ ಇದ್ದರೆ ನಂಟಸ್ಥನ ಮಾಡೋಣ. ಮತ ಹಾಕುವಾಗ ಜಾತಿ ಅಡ್ಡಿ ಬರಬಾರದು.
ಯಾರು ಜನರ ಪರವಿದ್ದು, ಕೆಲಸ ಮಾಡುತ್ತಾರೊ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು. ಈಗ ಬಾಲಕೃಷ್ಣರವರು ಶಾಸಕರಲ್ಲ, ಅವರಿರುವ ಪಕ್ಷ ಅಧಿಕಾರದಲ್ಲೂ ಇಲ್ಲ. ಆದರೂ ಅಲ್ಪಸಂಖ್ಯಾತರ ಅನುಕೂಲಕ್ಕಾಗಿ ತಮ್ಮ ತಂದೆ ತಾಯಿ ಹೆಸರಿನಲ್ಲಿ 15 ಗುಂಟೆ ಜಮೀನು ಖರೀದಿಸಿ ಶಾದಿ ಮಹಲ್ ಕಟ್ಟಿಸಿದ್ದಾರೆ. ಜನ ಸೇವೆ ಮಾಡುವ ವ್ಯಕ್ತಿಗೆ ಜನರ ಕಷ್ಟಸುಖಗಳಲ್ಲಿ ಭಾಗಿಯಾಗುವುದು ಮುಖ್ಯವಾಗುತ್ತದೆ. ಆ ಕೆಲಸ ಮಾಡುತ್ತಿರುವ ಬಾಲಕೃಷ್ಣ ಅವರಿಗೆ ಆಶೀರ್ವಾದ ಮಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದರು.
ಕಾರ‍್ಯಕ್ರಮದಲ್ಲಿ ಚಾಮರಾಜಪೇಟೆ ಕ್ಷೇತ್ರ ಶಾಸಕ ಜಮೀರ್ ಅಹಮದ್ ಖಾನ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಎಸ್.ರವಿ, ಬಮೂಲ್ ಅಧ್ಯಕ್ಷ ನರಸಿಂಹಯ್ಯ, ಮಾಜಿ ಶಾಸಕ ಕೆ.ರಾಜು, ನಗರಸಭೆ ಸದಸ್ಯ ಕೆ.ಶೇಷಾದ್ರಿ (ಶಶಿ), ಜಿಪಂ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ನರಸಿಂಹಯ್ಯ, ವಾಸೀಂ ಆಲಿ ಖಾನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಮುನಿರಾಜು, ಮುಖಂಡರಾದ ದುಂತೂರು ವಿಶ್ವನಾಥ್, ಆಸಿಫ್ ಖಾನ್, ಫೈರೋಜ್ ಖಾನ್ ಉಪಸ್ಥಿತರಿದ್ದರು.
ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್: ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಬಿಜೆಪಿ ಸರ್ಕಾರ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ಜಾತಿ-ಧರ್ಮಗಳ ನಡುವೆ ಜನರನ್ನು ಇಬ್ಬಾಗ ಮಾಡುವ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮ ನೀಡಬೇಕೆಂದು ಆಲೋಚನೆ ಮಾಡುತ್ತಿದೆ. ಜನರೇ ಯಾವುದು ಬೇಕೆಂದು ತೀರ್ಮಾನ ಮಾಡಬೇಕು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ.
ಕಾಂಗ್ರೆಸ್ ಸರ್ಕಾರದಲ್ಲಿ ಘೋಷಣೆಯಾದ ಕಾರ್ಯಕ್ರಮಗಳಿಗೆ ಪೂಜೆ ಮಾಡಿದರೆ ಪ್ರಯೋಜನವಿಲ್ಲ. ಹೊಸ ಕಾರ್ಯಕ್ರಮಗಳನ್ನು ತಂದು ಕೆಲಸ ಮಾಡಿ ತೋರಿಸಬೇಕೆಂದು ಪರೋಕ್ಷವಾಗಿ ಶಾಸಕ ಎ.ಮಂಜುನಾಥ್ರನ್ನು ಟೀಕಿಸಿದರು. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಮಾಗಡಿ ಕ್ಷೇತ್ರಕ್ಕೆ ಅನ್ಯಾಯವಾಗುವುದು ಬೇಡ. ಆದ್ದರಿಂದ ಬಾಲಕೃಷ್ಣ ಅವರಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಶಕ್ತಿ ತುಂಬಿದಂತೆ: ಜಮೀರ್ ಅಹಮದ್
ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ನೋಟಿಫಿಕೇಷನ್ ಆದಾಗ ಬಾಲಕೃಷ್ಣರವರು ನಿಲ್ಲಿಸುವ ಕೆಲಸ ಮಾಡಿದ್ದರು. ಇದೀಗ ಮತ್ತೆ ಕೈಗಾರಿಕಾ ಉದ್ದೇಶಗಳಿಗೆ ರೈತರ ಜಮೀನು ಸ್ವಾಧೀನ ಮಾಡಬೇಡಿ ಅಂದರು ಕೇಳುತ್ತಿಲ್ಲ. ರೈತರ ಅಭಿಪ್ರಾಯ ಕೇಳದೆ ಸ್ವಾಧೀನ ಪಡಿಸಿಕೊಳ್ಳುವುದು ಸರಿಯಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ನೋೕಟಿಫಿಕೇಷನ್ ರದ್ದು ಮಾಡಿ ಡಿ ನೋಟಿಫೈ ಮಾಡುತ್ತೇವೆ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ರಾಜ್ಯಾದ್ಯಂತ ಶೀಘ್ರದಲ್ಲಿಯೇ ನಾನು ಪ್ರವಾಸ ಮಾಡುತ್ತೇನೆ. ಈಗಾಗಲೇ ಜನರು 2013ರಿಂದ 2018ರವರೆಗೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಜನರು ನೆನೆಯುತ್ತಿದ್ದಾರೆ. ಎಲ್ಲಾ ಸಮಾಜದವರಿಗೆ ಒಳ್ಳೆಯದಾಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೆಂದು ಜನರು ಬಯಸುತ್ತಿದ್ದಾರೆ.
-ಜಮೀರ್ ಅಹಮದ್ ಖಾನ್, ಶಾಸಕರು