ಹೊಂದಾಣಿಕೆ ರಾಜಕೀಯ, ಬಿಜೆಪಿ ಅವಧಿಯ ಭ್ರಷ್ಟಾಚಾರದ ಬಗ್ಗೆ ಮಾಡಿದ್ದ ಆರೋಪಗಳ ತನಿಖೆ ಕುರಿತಂತೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಮುಗಿಬಿದ್ದಿದೆ.
ಬೆಂಗಳೂರು (ಜೂ.15): ಹೊಂದಾಣಿಕೆ ರಾಜಕೀಯ, ಬಿಜೆಪಿ ಅವಧಿಯ ಭ್ರಷ್ಟಾಚಾರದ ಬಗ್ಗೆ ಮಾಡಿದ್ದ ಆರೋಪಗಳ ತನಿಖೆ ಕುರಿತಂತೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಮುಗಿಬಿದ್ದಿದೆ. ‘ಸಂಸದ ಪ್ರತಾಪ್ ಸಿಂಹ ರಾಜಕೀಯ ಪ್ರಬುದ್ಧತೆ ಇಲ್ಲದ ಎಳಸು ರಾಜಕಾರಣಿ. ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡ ಬಿಜೆಪಿ ನಾಯಕರ ಹೆಸರನ್ನು ಅವರು ಮೊದಲು ಬಹಿರಂಗಪಡಿಸಲಿ. ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಕಾಂಗ್ರೆಸ್‌ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಎಂದು ಪ್ರತಾಪ ಸಿಂಹ ಆರೋಪ ಮಾಡಿದ್ದಾರೆ. ಅವರು ಅಷ್ಟು ಪ್ರಬುದ್ಧರಾಗಿದ್ದರೆ ಹೊಂದಾಣಿಕೆ ಮಾಡಿಕೊಂಡ ಬಿಜೆಪಿ ನಾಯಕರು ಯಾರು ಎಂದು ಹೇಳಲಿ. ಬೆಂಗಳೂರು-ಮೈಸೂರು ಹೆದ್ದಾರಿ ತಾವೇ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಾರೆ. ಬೆಂಗಳೂರಿನಿಂದ ಮೈಸೂರಿನವರೆಗೆ ಬರುವ ಲೋಕಸಭಾ ಕ್ಷೇತ್ರಗಳಿಗೆ ಅವರೇ ಸಂಸದರೇ?’ ಎಂದು ಪ್ರಶ್ನಿಸಿದರು.
ಸರ್ಕಾರ ಬದಲಾಗಿದೆ, ಅಧಿಕಾರಿಗಳೇ ನಿಮ್ಮ ವರ್ತನೆ ಬದಲಾಯಿಸಿಕೊಳ್ಳಿ: ಶಾಸಕ ಎಚ್.ಡಿ.ತಮ್ಮಯ್ಯ
‘ನನ್ನ ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದವರೊಂದಿಗೆ ಎಂದಿಗೂ ಮಾತನಾಡಿಲ್ಲ. ಅಧಿಕಾರದಲ್ಲಿದ್ದಾಗ ಅವರ ಮನೆಗೂ ಹೋಗಿಲ್ಲ. ಅವರು ಬಂದರೆ ಸೌಜನ್ಯಕ್ಕಾಗಿ ಮಾತನಾಡುತ್ತೇನೆ’ ಎಂದು ತಿಳಿಸಿದರು. ‘ಪೇ ಸಿಎಂ, 40 ಪರ್ಸೆಂಟ್ ಕಮಿಷನ್‌ಗೆ ಸಂಬಂಧಿಸಿದಂತೆ ಯಾವಾಗ, ಯಾರ ಮೂಲಕ ತನಿಖೆ ನಡೆಸಬೇಕು ಎಂಬುದು ನಮಗೆ ತಿಳಿದಿದೆ. ಬಿಜೆಪಿ ಸರ್ಕಾರ ಇದ್ದಾಗ ಆರೋಪದ ಬಗ್ಗೆ ಮಾತನಾಡದ ಪ್ರತಾಪ್ ಸಿಂಹ, ಈಗ ನಮಗೆ ಬುದ್ಧಿ ಹೇಳಲು ಬರುತ್ತಿದ್ದಾರೆ. ಎಲ್ಲದರ ಬಗ್ಗೆಯೂ ಉತ್ತರ ನೀಡುತ್ತೇವೆ’ ಎಂದು ಹೇಳಿದರು.
ಬೊಮ್ಮಾಯಿ ಹೇಗೆ ಅಳಿಯನೋ ಸಿದ್ದೇಶ್ವರ ಸಹ ನನಗೆ ಅಳಿಯ, ಸಂಬಂಧಿ: ಶಾಮನೂರು ಶಿವಶಂಕರಪ್ಪ
ಕೆಪಿಸಿಸಿ ತಿರುಗೇಟು: ಪ್ರತಾಪ್ ಸಿಂಹ ಅವರಿಗೆ ಕೆಪಿಸಿಸಿ ತನ್ನ ಅಧಿಕೃತ ಟ್ವೀಟರ್ ಖಾತೆ ಮೂಲಕ ತಿರುಗೇಟು ನೀಡಿದ್ದು, ‘ಪ್ರತಾಪ್ ಸಿಂಹ ಅವರೇ ಬಿಜೆಪಿಯ ಎಲ್ಲಾ ಹಗರಣಗಳು, ಅಕ್ರಮಗಳು, ಲೂಟಿಗಳನ್ನು ತನಿಖೆಗೆ ವಹಿಸುತ್ತೇವೆ. ಯಾವುದೇ ಮುಲಾಜಿನ ಪ್ರಶ್ನೆಯಿಲ್ಲ. ಬಿಜೆಪಿಯ ಯಾರೊಬ್ಬರ ಅಂಜಿಕೆಯೂ ನಮಗಿಲ್ಲ. ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ. ತನಿಖೆಗೆ ತಾವೂ ದಾಖಲೆಗಳನ್ನು ನೀಡಬಹುದು. ನಿಮ್ಮ ನಾಯಕರ ಲೂಟಿ ಬಗ್ಗೆ ನಿಮಗೇ ಹೆಚ್ಚು ತಿಳಿದಿರುತ್ತದೆ’ ಎಂದು ಹೇಳಿದೆ.
