ಸರ್ಕಾರ ಬದಲಾಗಿದೆ, ನಿಮಗೆ ಗೊತ್ತಿರಲಿ, ಮೊದಲು ಹೇಗಿದ್ದಿರೋ ಗೊತ್ತಿಲ್ಲ, ಅಧಿಕಾರಿಗಳೇ ಈಗ ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕಿದೆ. ಜನರ ಕೆಲಸ ಮಾಡಲು ಬಂದಿದ್ದೇವೆ ಗಮನಕೊಟ್ಟು ಕೆಲಸ ಮಾಡಿ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು. 

ಚಿಕ್ಕಮಗಳೂರು (ಜೂ.15): ಸರ್ಕಾರ ಬದಲಾಗಿದೆ, ನಿಮಗೆ ಗೊತ್ತಿರಲಿ, ಮೊದಲು ಹೇಗಿದ್ದಿರೋ ಗೊತ್ತಿಲ್ಲ, ಅಧಿಕಾರಿಗಳೇ ಈಗ ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕಿದೆ. ಜನರ ಕೆಲಸ ಮಾಡಲು ಬಂದಿದ್ದೇವೆ ಗಮನಕೊಟ್ಟು ಕೆಲಸ ಮಾಡಿ ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಚಿಕ್ಕಮಗಳೂರು ತಾಲೂಕಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೊಲೀಸ್‌ ಅಧಿಕಾರಿಗಳೇ, ಠಾಣೆಗೆ ಬರುವ ಜನರನ್ನು ಕೂರಿಸಿ ಅವರ ಸಮಸ್ಯೆಯನ್ನು ಸಾವಧಾನದಿಂದ ತಿಳಿದುಕೊಂಡು ಬಗೆಹರಿಸಲು ಪ್ರಯತ್ನಿಸಿ ಎಂದು ಕಿವಿ ಮಾತು ಹೇಳಿದರು.

ಅಭಿವೃದ್ಧಿಯ ಹರಿಕಾರರೆಂದು ಬಿಂಬಿಸಿಕೊಳ್ಳುತ್ತಿದ್ದ ಕೆಲವರ ಅವಧಿಯಲ್ಲಿ ಸಾಹಸ್ರಾರು ಕೋಟಿ ಅಭಿವೃದ್ಧಿ ಕೆಲಸಗಳಾಗಿವೆ. ಯಾವುದೇ ಗ್ರಾಮಕ್ಕೆ ಹೋಗಿ ಕಾಂಕ್ರಿಟ್‌ ರಸ್ತೆ, ಡಾಂಬರು ರಸ್ತೆಗಳಾಗಿವೆ ಎನ್ನುತ್ತಿದ್ದರು. ಗೆದ್ಲೆಹಳ್ಳಿ ಮತ್ತು 13 ಗೊಲ್ಲರಹಟ್ಟಿಯ ಸಂಪರ್ಕಿಸುವ ರಸ್ತೆಗಳು ಈಗಲೂ ಜಲ್ಲಿ ಮತ್ತು ಮಣ್ಣನ್ನು ಕಂಡಿಲ್ಲವೆಂದು ಟೀಕಿಸಿದರು ಎಂದರು. ಇದೇ ಸಂದರ್ಭದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಹಿರೇಬೈಲು ಶಾಲೆಯ ದುಸ್ಥಿತಿ ಕುರಿತು ಅಧಿಕಾರಿಗಳಿಗೆ ನಾವೇ ಮಾಹಿತಿ ನೀಡಬೇಕಿದೆ. ಕುದುರೆಮುಖ ಶಾಲೆ ಸೋರುತ್ತಿರುವ ವಿಷಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದಿದ್ದೇನೆ, ಸ್ಥಳಕ್ಕೆ ಏಕೆ ಭೇಟಿ ನೀಡಿಲ್ಲವೆಂದು ಪ್ರಶ್ನಿಸಿದರು. 

ಬಿಟ್ಟಿ ಯೋಜನೆಗೆ ಹಣಕಾಸನ್ನು ಹೇಗೆ ಹೊಂದಿಸ್ತೀರಿ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇದಕ್ಕೆ ಉತ್ತರಿಸಿದ ಡಿಡಿಪಿಐ ರಂಗನಾಥಸ್ವಾಮಿ, ಅಧಿಕಾರಿಗಳಿಗೆ ವಾಹನ ವ್ಯವಸ್ಥೆ ಇಲ್ಲ, ನಾನೇ ಭೇಟಿ ನೀಡಿತ್ತೇನೆಂದು ಹೇಳಿದರು. ಉರ್ದು ಶಾಲೆಗಳು ದನದ ಕೊಟ್ಟಿಗೆಗಳಿಗೂ ಕಡೆಯಾಗಿವೆ. ಕೆಟ್ಟಪರಿಸ್ಥಿತಿಯಲ್ಲಿ ಶಾಲೆಗಳು ನಡೆಯುತ್ತಿವೆ. ಇಷ್ಟುವರ್ಷಗಳ ಕಾಲ ಆ ಶಾಲೆಗಳು ಅಧಿಕಾರಿಗಳ ಕಣ್ಣಿಗೆ ಬೀಳಲಿಲ್ಲವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗನಾಥಸ್ವಾಮಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್‌ ಅವರನ್ನು ಪ್ರಶ್ನಿಸಿದರು. ಕೂಡಲೇ ಈ ಶಾಲೆಗಳನ್ನು ಸ್ಥಳಾಂತರಿಸಲು ಸೂಚಿಸಿದ ಶಾಸಕರು, ಹೊಸ ಶಾಲೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ತರಲಾಗುವುದು ಎಂದರು.

ಕಾರಣ ತಿಳಿಸದೆ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ಶೋಕಾಸ್‌ ನೊಟೀಸ್‌ ಜಾರಿಗೊಳಿಸಲು ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೆಗೌಡ ತಾಲೂಕು ಪಂಚಾಯಿತಿ ಅಲ್ಲಂಪುರದ ಶಾಲೆಗೆ 5 ಎಕರೆ ಭೂದಾನ ಜಮೀನಿದ್ದು, ಇದನ್ನು ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಪ್ರವಾಸೋದ್ಯಮ ಇಲಾಖೆಗೆ ನೀಡಿದ್ದು, ಇಲ್ಲಿ ಪ್ರವಾಸಿ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಈ ಜಮೀನನ್ನು ವಾಪಸ್‌ ಪಡೆದು ಶಾಲೆಗೆ ನೀಡಬೇಕು. ಕಾಂಪೌಂಡ್‌ ನಿರ್ಮಿಸಿ ಬೀಗ ಹಾಕಲು ನಿರ್ಣಯ ಕೈಗೊಳ್ಳಲಾಯಿತು.

ಚಾಮರಾಜನಗರ ಜಿಲ್ಲೆಗೆ ಅಗತ್ಯವಿರುವಷ್ಟು ನೆರವು ನೀಡಲು ನಮ್ಮ ಸರ್ಕಾರ ಬದ್ಧ: ಸಚಿವ ಮಹದೇವಪ್ಪ

ಅಲ್ಲಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಮರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 4 ಎಕರೆ ಜಾಗ ಮಂಜೂರಾಗಿದ್ದು, ಚಿಕ್ಕಮಗಳೂರು ತಹಸೀಲ್ದಾರ್‌, ಭೂ ಮಾಪನಾ ಇಲಾಖೆ ಸರ್ವೆಯರನ್ನು ನೇಮಿಸಿ ಸ್ಥಳ ಪರಿಶೀಲಿಸಿದಾಗ 2.20 ಎಕರೆ ಜಮೀನಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಭಾವಿ ವ್ಯಕ್ತಿಯೊಬ್ಬರು ಎರಡೂವರೆ ಎಕರೆ ಜಾಗ ಬಿಟ್ಟು ಕಾಂಪೌಂಡ್‌ ನಿರ್ಮಿಸಿದ್ದಾರೆ. ಮತ್ತೊಂದು ಬಾರಿ ಸರ್ವೆ ನಡೆಸಿ ವಾರದೊಳಗೆ ಒತ್ತುವರಿ ಜಾಗ ತೆರವುಗೊಳಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ್‌, ತಹಶೀಲ್ದಾರ್‌ ವಿನಾಯಕ್‌ ಸಾಗರ್‌ ಇದ್ದರು.