ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ವಿವಾದ ಹೈಕಮಾಂಡ್ ತಲುಪುವ ಹಂತದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆಯಂತೆ ದೆಹಲಿ ಪ್ರವಾಸ ರದ್ದುಗೊಳಿಸಿರುವ ಜಮೀರ್, ಬೆಂಗಳೂರಿನಲ್ಲಿ ಮುಸ್ಲಿಂ ನಾಯಕರೊಂದಿಗೆ ರಹಸ್ಯ ಸಭೆ ನಡೆಸುತ್ತಿದ್ದಾರೆ.

ಬೆಂಗಳೂರು (ಜೂ.01): ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಪ್ರಕರಣ ಈಗ ಹೈಕಮಾಂಡ್ ಮಟ್ಟಕ್ಕೆ ತಲುಪುವ ಲಕ್ಷಣಗಳು ಕಾಣಿಸುತ್ತಿವೆ. ಈ ವಿವಾದದ ಬೆನ್ನಲ್ಲೇ ಜಮೀರ್ ಅಹಮದ್ ತೀವ್ರ ಆತಂಕಕ್ಕೆ ಒಳಗಾಗಿದ್ದು, ಬೆಂಗಳೂರಿನಲ್ಲಿ ಸಂಧಾನ ಮತ್ತು ತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ, ಜಮೀರ್ ಅವರ ದೆಹಲಿ ಪ್ರವಾಸಕ್ಕೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬ್ರೇಕ್ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿದ್ದರಾಮಯ್ಯ ನೀಡಿದ ಆ 'ಸೂಕ್ಷ್ಮ' ಸಂದೇಶವೇನು?

ಸೋಮವಾರ ಬೆಳಿಗ್ಗೆ ದೆಹಲಿಗೆ ಹೋಗುವ ಸಿದ್ಧತೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಮೀರ್ ಅಹಮದ್ ಖಾನ್ ಭೇಟಿ ಮಾಡಿದ್ದರು. ಈ ವೇಳೆ ವೈರಲ್ ಆಗಿರುವ ಆಡಿಯೋ ಕುರಿತು ಜಮೀರ್ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಈ ಸಮಯದಲ್ಲಿ ಜಮೀರ್ ದೆಹಲಿಗೆ ಬರುವುದು ಸೂಕ್ತವಲ್ಲ ಎಂಬ ಕಿವಿಮಾತು ಹೇಳಿದ್ದಾರೆ. "ಈಗಾಗಲೇ ವಿವಾದ ಸೃಷ್ಟಿಯಾಗಿದೆ, ಈ ಹೊತ್ತಿನಲ್ಲಿ ನೀವು ದೆಹಲಿಗೆ ಬಂದರೆ ಅದು ನೆಗೆಟಿವ್ ಆಗಿ ಬಿಂಬಿತವಾಗಬಹುದು. ಸದ್ಯಕ್ಕೆ ಬೆಂಗಳೂರಿನಲ್ಲೇ ಉಳಿದುಕೊಳ್ಳಿ" ಎಂದು ಸಿಎಂ ಸೂಕ್ಷ್ಮವಾಗಿ ಸಲಹೆ ನೀಡಿದ್ದಾರೆ. ಸಿಎಂ ಸಲಹೆಯ ಬೆನ್ನಲ್ಲೇ ಜಮೀರ್ ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ ಬೆಂಗಳೂರಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ಖಾಸಗಿ ಗೆಸ್ಟ್ ಹೌಸ್‌ನಲ್ಲಿ ರಹಸ್ಯ ಸಭೆ:

ದೆಹಲಿ ಪ್ರವಾಸ ರದ್ದಾದ ಬೆನ್ನಲ್ಲೇ ಜಮೀರ್ ಅಹಮದ್ ಆತಂಕದಿಂದ ಮುಸ್ಲಿಂ ನಾಯಕರ ಮೊರೆ ಹೋಗಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಇರುವ ಕಾಂಗ್ರೆಸ್ ನಾಯಕರೊಬ್ಬರಿಗೆ ಸೇರಿದ ಖಾಸಗಿ ಗೆಸ್ಟ್ ಹೌಸ್‌ನಲ್ಲಿ ಜಮೀರ್ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು ಹಾಗೂ ಎಂಎಲ್ಸಿ ನಸೀರ್ ಅಹ್ಮದ್ ಖಾನ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ. ಆಡಿಯೋ ವಿವಾದದಿಂದ ಆಗಬಹುದಾದ ರಾಜಕೀಯ ಹಾನಿಯನ್ನು ತಡೆಯುವುದು ಹೇಗೆ ಮತ್ತು ಹೈಕಮಾಂಡ್ ಮುಂದೆ ಯಾವ ರೀತಿ ಸ್ಪಷ್ಟನೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ.

ಹೆಚ್ಚಿದ ಆತಂಕ:

ವೈರಲ್ ಆಡಿಯೋದಲ್ಲಿ ಕಾಂಗ್ರೆಸ್ ವಿರೋಧಿ ಮಾತುಗಳು ಕೇಳಿಬಂದಿರುವುದು ಜಮೀರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದರಲ್ಲೂ ದಾವಣಗೆರೆಯ ಶಾಸಕ ಸಮರ್ಥ ಶಾಮನೂರು ಅವರು ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುವ ಎಚ್ಚರಿಕೆ ನೀಡಿರುವುದು ಜಮೀರ್ ಅವರ ನಿದ್ದೆಗೆಡಿಸಿದೆ. ಒಂದು ಕಡೆ ಇದು 'ನಕಲಿ ಆಡಿಯೋ' ಎಂದು ಜಮೀರ್ ವಾದಿಸುತ್ತಿದ್ದರೂ, ಪಕ್ಷದೊಳಗಿನ ಇತರ ನಾಯಕರು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಜಮೀರ್, ಈ ವಿವಾದದ ಹುತ್ತದಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.