ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನ ಸಿಕ್ಕರೆ ರಾಜ್ಯ ಮತ್ತು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಬಹುದು ಎಂದು ಅವರು ಹೇಳಿದ್ದಾರೆ.

ದಾವಣಗೆರೆ (ಜೂ.01): ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಚರ್ಚೆಗಳು ಮುನ್ನೆಲೆಗೆ ಬರುತ್ತಿದ್ದಂತೆ, ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದೆ. ಈಗ ಈ ಪಟ್ಟಿಗೆ ದಾವಣಗೆರೆ ದಕ್ಷಿಣ ಕ್ಷೇತ್ರದ ಯುವ ಶಾಸಕ ಸಮರ್ಥ ಶಾಮನೂರು ಅವರ ಹೆಸರು ಹೊಸ ಸೇರ್ಪಡೆಯಾಗಿದೆ. ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವುದಾಗಿ ಹೇಳುವ ಮೂಲಕ ಅವರು ತಮ್ಮ ರಾಜಕೀಯ ಆಕಾಂಕ್ಷೆಯನ್ನು ಬಹಿರಂಗಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಧಿಕಾರ ಸಿಕ್ಕರೆ ಅಭಿವೃದ್ಧಿಗೆ ವೇಗ:

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮರ್ಥ ಶಾಮನೂರು, 'ಸಚಿವ ಸ್ಥಾನ ಸಿಕ್ಕರೆ ನಾನು ಖಂಡಿತವಾಗಿಯೂ ಹಿಂದೆ ಸರಿಯುವುದಿಲ್ಲ. ಸಚಿವ ಸ್ಥಾನ ಸಿಕ್ಕರೆ ರಾಜ್ಯದಿಂದ ಮತ್ತು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರ ಹಾಗೂ ಜಿಲ್ಲೆಯ ಕೆಲಸಗಳನ್ನು ಮಾಡುವುದಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ಅಧಿಕಾರವಿದ್ದರೆ ಜನರ ಕೆಲಸಗಳನ್ನು ಇನ್ನಷ್ಟು ವೇಗವಾಗಿ ಮಾಡಬಹುದು' ಎಂದು ತಿಳಿಸಿದರು.

ಹೈಕಮಾಂಡ್ ನಿರ್ಧಾರಕ್ಕೆ ಗೌರವ:

ಮೊದಲ ಬಾರಿ ಆಯ್ಕೆಯಾದ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, 'ಸಚಿವ ಸ್ಥಾನ ಕೊಡೋದು ಬಿಡೋದು ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟ ವಿಚಾರ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ, ಜವಾಬ್ದಾರಿ ನೀಡಿದರೆ ಅದನ್ನು ನಿಭಾಯಿಸಲು ನಾನು ಸಿದ್ಧ' ಎಂದರು.

ಯಾರು ತಾನೇ 'ಬೇಡ' ಅಂತಾರೆ?

ತಮ್ಮ ಆಸೆಯನ್ನು ಹಾಸ್ಯಮಯವಾಗಿ ಹಾಗೂ ನೇರವಾಗಿಯೇ ವ್ಯಕ್ತಪಡಿಸಿದ ಸಮರ್ಥ, 'ಸಚಿವ ಸ್ಥಾನ ಕೊಟ್ಟರೆ ಯಾರು ತಾನೇ ಚನ್ನಾಗಿಲ್ಲ ಅಂತ ಹೇಳ್ತಾರೆ ಹೇಳಿ? ರಾಜಕೀಯದಲ್ಲಿರುವ ಪ್ರತಿಯೊಬ್ಬರಿಗೂ ಜನಸೇವೆ ಮಾಡಲು ದೊಡ್ಡ ಜವಾಬ್ದಾರಿ ಬೇಕೆಂಬ ಆಸೆ ಇರುತ್ತದೆ. ನನಗೂ ಆ ಆಸೆಯಿದೆ. ಹೊಸಬರಿಗೆ ಅವಕಾಶ ನೀಡಿದರೆ ಹೊಸ ಹುರುಪಿನಿಂದ ಕೆಲಸ ಮಾಡಬಹುದು' ಎಂದು ಸಚಿವ ಸ್ಥಾನದ ಮೇಲಿನ ಒಲವನ್ನು ವ್ಯಕ್ತಪಡಿಸಿದರು.

ದಾವಣಗೆರೆಯ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದಿರುವ ಸಮರ್ಥ ಶಾಮನೂರು ಅವರು ಶಾಸಕರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಸಚಿವ ಸ್ಥಾನದ ಬಗ್ಗೆ ಇಷ್ಟೊಂದು ಸ್ಪಷ್ಟವಾಗಿ ಹೇಳಿಕೆ ನೀಡಿರುವುದು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯನವರ ಸಂಪುಟದಲ್ಲಿ ಯುವ ಮುಖಗಳಿಗೆ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.