Karnataka Election Result 2023: ಬಾದಾಮಿ ಋಣ ತೀರಿಸಿ ಭೀಮಸೇನ ಚಿಮ್ಮನಕಟ್ಟಿ ಗೆಲ್ಲಿಸಿಕೊಟ್ಟ ಸಿದ್ದರಾಮಯ್ಯ
ಬಾದಾಮಿಯಲ್ಲಿ ಎಲ್ಲರನ್ನ ಒಗ್ಗೂಡಿಸಿ, ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕೆ ಪುನಃ ಕಾಂಗ್ರೆಸ್ ಗೆಲ್ಲಿಸಿ ಚಿಮ್ಮನಕಟ್ಟಿ ಕುಟುಂಬದ ಋಣ ತೀರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್,
ಬಾಗಲಕೋಟೆ (ಮೇ.14): ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಬಾದಾಮಿ. ಬಾದಾಮಿಗೆ ಸಿದ್ದರಾಮಯ್ಯ ಬಂದಾಗ ಅವರಿಗಾಗಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಕ್ಷೇತ್ರ ತ್ಯಾಗ ಮಾಡಿದ್ದರು, ಆದರೆ ಈಗ ಸ್ವತಃ ಸಿದ್ದರಾಮಯ್ಯನವರೇ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರನ್ನ ಒಗ್ಗೂಡಿಸಿ ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮನಕಟ್ಟಿ ಗೆಲ್ಲಿಸಿ ಅವರ ಋಣ ತೀರಿಸುವ ಕೆಲಸ ಮಾಡಿದ್ದಾರೆ.
2018ರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅತ್ತ ಚಾಮುಂಡೇಶ್ವರಿಯಲ್ಲಿ ಸ್ಫರ್ಧೆ ಮಾಡಿದ್ದರು, ಆಗಲೇ ಇತ್ತ ಕುರುಬ ಸಮುದಾಯದ ಮತಗಳೇ ನಿರ್ಣಾಯಕರಾಗಿರೋ ಬಾದಾಮಿಯಿಂದ ಸಿದ್ದರಾಮಯ್ಯನವರೇ ನಿಲ್ಲಬೇಕೆಂಬ ಕೂಗು ಕೇಳಿ ಬಂತು. ಜಿಲ್ಲೆಯ ಕೈ ನಾಯಕರ ಒತ್ತಡಕ್ಕೆ ಮಣಿದು ಅಂದು ಸಿದ್ದರಾಮಯ್ಯ ಚಾಮುಂಡೇಶ್ವರಿ ಜೊತೆ ಎರಡನೇ ಮತಕ್ಷೇತ್ರವಾಗಿ ಬಾದಾಮಿಯಿಂದಲೂ ಸ್ಫರ್ಧೆ ಮಾಡಿದರು. ಆದರೆ ವಿರೋಧಿಗಳ ತಂತ್ರದಿಂದ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತು ಹೋದರೆ, ಇತ್ತ ಬಾದಾಮಿಯಿಂದ ಒಂದೂವರೆ ಸಾವಿರ ಮತಗಳ ಅಂತರದಲ್ಲಿ ಗೆಲುವು ಕಂಡರು. ಕೊನೆಯ ಕ್ಷಣದಲ್ಲಿ ಬಾದಾಮಿಗೆ ಬಂದು ಪ್ರಚಾರ ಮಾಡಿ ಹೋಗಿದ್ದ ಸಿದ್ದರಾಮಯ್ಯನವರನ್ನ ಬಾದಾಮಿ ಕೈ ನಾಯಕರು ಬಿಜೆಪಿಯ ಶ್ರೀರಾಮುಲು ವಿರುದ್ಧ ಗೆಲ್ಲುವಂತೆ ನೋಡಿಕೊಂಡಿದ್ದರು. ಹೀಗಾಗಿ ಸ್ವತಃ ಸಿದ್ದರಾಮಯ್ಯನವರೇ ಹೇಳುವಂತೆ ಬಾದಾಮಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವಾಗಿತ್ತು.
ಅಭಿವೃದ್ದಿಗಾಗಿ ಕೋಟಿ ಕೋಟಿ ಅನುದಾನ ತಂದಿದ್ದ ಸಿದ್ದರಾಮಯ್ಯ:
ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋತಂತೆ ಬಾದಾಮಿಯಲ್ಲೂ ಸೋತಿದ್ದರೆ ರಾಜಕೀಯ ಜೀವನ ಅತಂತ್ರವಾಗುತ್ತಿತ್ತು, ಆದರೆ ಚಾಮುಂಡೇಶ್ವರಿಯಲ್ಲಿ ಜನ ಕೈ ಬಿಟ್ಟರು, ಬಾದಾಮಿ ಜನ ಯಾವಾಗ ತಮ್ಮನ್ನು ಗೆಲ್ಲಿಸಿ ರಾಜಕೀಯ ಪುನರ್ಜನ್ಮ ನೀಡಿದರೂ ಅವರಿಗಾಗಿ ಸಿದ್ದರಾಮಯ್ಯ ಟೊಂಕ ಕಟ್ಟಿ ನಿಂತರು. ಕ್ಷೇತ್ರದ ಅಭಿವೃದ್ಧಿಗಾಗಿ ಬರೋಬ್ವರಿ 5 ವರ್ಷದಲ್ಲಿ ನಾಲ್ಕೂವರೆ ಸಾವಿರ ಕೋಟಿ ಅನುದಾನವನ್ನ ಬಾದಾಮಿಗೆ ತಂದಿದ್ದರು. ರಸ್ತೆ, ಕುಡಿಯುವ ನೀರು, ಆರೋಗ್ಯ ಹೀಗಾಗಿ ಮೂಲಭೂತ ಸೌಕರ್ಯಗಳ ಜೊತೆಗೆ ಅಭಿವೃದ್ಧಿಗೆ ಮುಂದಾದರು. ಹೀಗಾಗಿಯೇ ಜನ ಸಿದ್ದರಾಮಯ್ಯನವರೇ ಮತ್ತೊಮ್ಮೆ ಬಾದಾಮಿಯಿಂದ ಸ್ಫರ್ಧೆ ಮಾಡಬೇಕೆಂಬ ಆಶಯದೊಂದಿಗೆ ಬಹಳಷ್ಟು ಹೋರಾಟ ಮಾಡಿದರು.
ಬಾದಾಮಿ ದೂರವಾಗುತ್ತೆಂಬ ಕಾರಣ ಇರಿಸಿ ವರುಣಾಕ್ಕೆ ಮುಖ ಮಾಡಿದ ಸಿದ್ದರಾಮಯ್ಯ:
ಬಾದಾಮಿ ಮತಕ್ಷೇತ್ರದ ಶಾಸಕರಾಗಿ ಸಿದ್ದರಾಮಯ್ಯ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇ ತಡ ಜನ ಮತ್ತೊಮ್ಮೆ ಬಾದಾಮಿಗೆ ಸಿದ್ದರಾಮಯ್ಯ ಎಂಬ ಬ್ಯಾನರ್ ಹಿಡಿದು ಬಾದಾಮಿಯಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡರು, ಅದ್ಯಾವುದಕ್ಕೂ ಸಹ ಸಿದ್ದು ಒಪ್ಪಲಿಲ್ಲ. ಮೇಲಾಗಿ ಕಾಂಗ್ರೆಸ್ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಸಹ ಬಾದಾಮಿ ಕ್ಷೇತ್ರ ಬಿಟ್ಟು ಕೊಡುವಂತೆ ಆಗ್ರಹ ಮಾಡಿ ಅಸಮಾಧಾನ ಹೊರ ಹಾಕಿದ ಘಟನೆ ಸಹ ನಡೆದಿತ್ತು. ಇದೆಲ್ಲವನ್ನ ಅರಿತ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟು ಕೊಡಬೇಕು, ಮೇಲಾಗಿ ಮತ್ತೇ ಬಾದಾಮಿಯನ್ನ ಚಿಮ್ಮನಕಟ್ಟಿ ಕುಟುಂಬದ ಕೈಗೆ ಇರಿಸಿಬೇಕೆಂಬ ಆಲೋಚನೆ ತೊಟ್ಟರು.
ಬಾದಾಮಿಯಲ್ಲಿ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ನ 3 ಗುಂಪುನ್ನ ಒಂದುಗೂಡಿಸಿದ ಸಿದ್ದು:
ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧೆ ಮಾಡೋದಿಲ್ಲ ಎಂದು ಗೊತ್ತಾದಾಗಲೇ ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಣಗಳಾಗಿದ್ದವು. ಒಂದು ಚಿಮ್ಮನಕಟ್ಟಿ ಪರವಾದ ಬಣ, ಮತ್ತೊಂದು ಸಿದ್ದರಾಮಯ್ಯ ಪರ ಬಣ ಮತ್ತೊಂದು ಟಿಕೆಟ್ ಆಕಾಂಕ್ಷಿಯಾಗಿದ್ದ ಮಹೇಶ ಹೊಸಗೌಡರ ಬಣ. ಹೀಗೆ ಈ ಮೂರು ಬಣಗಳನ್ನ ಒಗ್ಗೂಡಿಸದೇ ಕಾಂಗ್ರೆಸ್ ಗೆಲುವು ಬಾದಾಮಿಯಲ್ಲಿ ಅಸಾಧ್ಯವಾಗಿತ್ತು. ಒಂದೊಮ್ಮೆ ಚಿಮ್ಮನಕಟ್ಟಿ ಗೆಲ್ಲದೆ ಹೋದರೆ ಋಣಭಾರ ಸಿದ್ದರಾಮಯ್ಯನವರ ಮೇಲೆ ಹಾಗೆ ಉಳಿಯುತ್ತಿತ್ತು. ಇದನ್ನು ಅರಿತ ಸಿದ್ದರಾಮಯ್ಯ ಈ ಬಾರಿಯ ಬಾದಾಮಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಚಿಮ್ಮನಕಟ್ಟಿ ಪುತ್ರ ಭೀಮಸೇನ ಚಿಮ್ಮನಕಟ್ಟಿಗೆ ನೀಡಿದರು. ಅಲ್ಲದೆ ಮೂರು ಗುಂಪಿನವರನ್ನ ನೇರವಾಗಿ ಬೆಂಗಳೂರಿಗೆ ಕರೆಯಿಸಿಕೊಂಡ ಸಿದ್ದರಾಮಯ್ಯ ಒಗ್ಗೂಡಿ ಚುನಾವಣೆ ಮಾಡುವಂತೆ ಉಪದೇಶ ಮಾಡಿದರು.
ಈ ಬಾರಿ ಕಾಂಗ್ರೆಸ್ ಅಲೆ ಇರೋದ್ರಿಂದ ಸರ್ಕಾರ ಬರುತ್ತೇ, ನೀವೆಲ್ಲಾ ಒಗ್ಗಟ್ಟಾಗಿ ಭೀಮಸೇನ ಚಿಮ್ಮನಕಟ್ಟಿ ಗೆಲ್ಲಿಸಿ ನನ್ನ ಮುಂದೆ ಕರೆತರಬೇಕು. ಆಗ ಬಾದಾಮಿ ಕ್ಷೇತ್ರಕ್ಕೆ ಇನ್ನಷ್ಟು ಅನುದಾನ ನೀಡಿ ಅಭಿವೃದ್ಧಿ ಮಾಡೋಣ, ನೀವೆಲ್ಲರೂ ನನ್ನನ್ನೇ ಗೆಲ್ಲಿಸಿದಂತಾಗುತ್ತೇ ಅಂತ ಆಶಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೆ ಮೂರು ಬಣ ಒಗ್ಗಟ್ಟಾಗಿ ಕಾಂಗ್ರೆಸ್ ನ ಭೀಮಸೇನ ಚಿಮ್ಮನಕಟ್ಟಿ ಗೆಲುವಿಗೆ ಕಾರಣರಾದರು. ಆ ಮೂಲಕ ಕ್ಷೇತ್ರ ಬಿಟ್ಟು ಕೊಟ್ಟ ಚಿಮ್ಮನಕಟ್ಟಿ ಕುಟುಂಬಕ್ಕೆ ಮತ್ತೇ ಶಾಸಕ ಸ್ಥಾನ ಕಲ್ಪಿಸಿ ಮಾಜಿ ಸಿದ್ದರಾಮಯ್ಯ ಋಣ ತೀರಿಸುವ ಕೆಲಸ ಮಾಡಿದರು.
Karnataka Election Results 2023 ಎಲ್ಲಾ ನೋವುಂಡ ಡಿಕೆಶಿಗೆ ನಮ್ಮ ಬೆಂಬಲ: ನಂಜಾವಧೂತ
ಬಾದಾಮಿಗೆ ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದರೂ ಗೆಲ್ಲಲಾಗದ ಬಿಜೆಪಿ:
ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಲ್ಲಿ ಕಾಂಗ್ರೆಸ್ ಕಟ್ಟಿ ಹಾಕಬೇಕೆಂಬ ಉದ್ದೇಶದಿಂದಲೇ ಸ್ವತಃ ದೇಶದ ಪ್ರಧಾನಿ ನರೇಂದ್ರ ಮೋದಿ ಬಾದಾಮಿಗೆ ಆಗಮಿಸಿ ಬೃಹತ್ ಬಿಜೆಪಿ ಸಮಾವೇಶ ಮಾಡಿ ಬಿಜೆಪಿ ಪರವಾಗಿ ಪ್ರಚಾರ ಭಾಷಣ ಮಾಡಿದ್ದರು. ಆದರೂ ಯಾವುದೇ ವ್ಯತ್ಯಾಸ ಕಾಣದೇ ಬಾದಾಮಿಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿತು. ಈ ಮಧ್ಯೆ ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಬಾದಾಮಿಗೆ ಮೋದಿ ಅವರು ಬಂದು ಹೋಗಿದ್ದೇ ನನಗೆ ವರದಾನವಾಯ್ತು, ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೂಡಿ ನನ್ನ ಗೆಲುವಿಗೆ ಕಾರಣರಾದರು ಎಂದರು. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಸಹ ಬಾದಾಮಿ ಈ ಬಾರಿ ಜೆಡಿಎಸ್ ತೆಕ್ಕೆಗೆ ಬೀಳುತ್ತೇ ಅಂದುಕೊಂಡಿದ್ದರು, ಆಗಾಗ ಬಾದಾಮಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದರೂ ಜೆಡಿಎಸ್ ಗೆಲುವು ಅಸಾಧ್ಯವಾಯಿತು.
Mysuru: ಪ್ರಧಾನಿ ಮೋದಿ ಹೆಜ್ಜೆ ಇಟ್ಟಲೆಲ್ಲ ಗಂಜಲ ಹಾಕಿ ಶುದ್ಧಿ!
ಒಟ್ಟಿನಲ್ಲಿ ಎಲ್ಲದರ ಮಧ್ಯೆ ಬಾದಾಮಿಯಿಂದ ಆಯ್ಕೆಯಾಗಿ 5 ವರ್ಷ ಅಭಿವೃದ್ಧಿ ಮಾಡಿ ಜನರ ಋಣ ತೀರಿಸಿದ ಸಿದ್ದರಾಮಯ್ಯ, ಇತ್ತ ಮರಳಿ ಚಿಮ್ಮನಕಟ್ಟಿ ಕುಟುಂಬಕ್ಕೆ ಶಾಸಕ ಸ್ಥಾನ ನೀಡಿ ಚಿಮ್ಮನಕಟ್ಟಿ ಕುಟುಂಬದ ಋಣವನ್ನೂ ಸಹ ತೀರಿಸಿದ್ದಾರೆ.