ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟವನ್ನು ಖಂಡಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ, ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕೃತ್ಯದ ಹಿಂದೆ ಪಾಕಿಸ್ತಾನದ ನಂಟಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಫೆ.20): ಬಾಗಲಕೋಟೆಯಲ್ಲಿ ನಿನ್ನೆ ರಾತ್ರಿ ನಡೆಯುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಂ ಮತಾಂಧರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು. ಇವರಿಗೆ ಪಾಕಿಸ್ತಾನದ ನಂಟಿದೆಯೇ ಎಂಬುದನ್ನು ತನಿಖೆ ಮಾಡಬೇಕು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಹಾಗೂ ಕಟೌಟ್‌ ಮೇಲೆ ಮುಸ್ಲಿಂ ಮತಾಂಧರು ಕಲ್ಲು ತೂರಾಟ ಮಾಡಿ ಅಪಮಾನ ಮಾಡಿದ್ದಾರೆ. ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕಾಗಿ ಹೋರಾಟ ಮಾಡಿದ್ದರು. ಇವೆಲ್ಲವೂ ಪೂರ್ವ ನಿಯೋಜಿತ ಕೃತ್ಯವಾಗಿದೆ. ಈ ಹಿಂದೆ ಮಂಡ್ಯದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ, ಶ್ರೀರಾಮನ ಫ್ಲೆಕ್ಸ್‌ ಹರಿದುಹಾಕಿರುವುದು ಹೀಗೆ ಮೊದಲಾದ ರೀತಿಯಲ್ಲಿ ಮುಸ್ಲಿಮ್‌ ಮೂಲಭೂತವಾದಿಗಳು ದಾಳಿ ಮಾಡಿದ್ದರು. ಇಂತಹ ಮತಾಂಧರನ್ನು ಬಂಧಿಸಬಾರದು ಎಂದು ಕಾಂಗ್ರೆಸ್‌ ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದೆ ಎಂದರು.

ಕುಕ್ಕರ್‌ ಬಾಂಬ್‌ ಸ್ಫೋಟ ಮಾಡುವವರು ನಮ್ಮ ಬ್ರದರ್‌ಗಳು, ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಎನ್ನುವವರು ನಮ್ಮ ಬಂಧುಗಳು ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಕಾರಣದಿಂದಲೇ ಇಂತಹ ಘಟನೆಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿವೆ. ಶಿವಾಜಿ ಮಹಾರಾಜರ ಕುಟುಂಬದವರೇ ಬೆಂಗಳೂರಿನಲ್ಲಿ ದೇವಸ್ಥಾನ ಕಟ್ಟಿಸಿದ್ದರು. ಇಂತಹ ಮಹಾನ್‌ ವ್ಯಕ್ತಿಗೆ ಅಪಮಾನ ಮಾಡಿರುವ ಘಟನೆಗೆ ಕಾಂಗ್ರೆಸ್‌ ಸರ್ಕಾರವೇ ಕಾರಣ. ಗೃಹಸಚಿವ ಡಾ.ಜಿ.ಪರಮೇಶ್ವರ್‌ ಬುರುಡೆ ಬಿಡುತ್ತಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಈ ಹಿಂದಿನ ಪ್ರಕರಣಗಳಲ್ಲಿ ಕೇಸುಗಳನ್ನು ವಾಪಸ್‌ ಪಡೆಯಲಾಗಿದೆ. ಇದು ಗೊತ್ತಿರುವುದರಿಂದಲೇ ಮುಸ್ಲಿಮರು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪಾಕಿಸ್ತಾನ ನಂಟಿನ ಬಗ್ಗೆ ತನಿಖೆ ಮಾಡಿ

ಕಾಂಗ್ರೆಸ್‌ ಸರ್ಕಾರ ಹಿಂದೂಗಳ ವಿರೋಧಿಯಾಗಿದೆ. ಸರ್ಕಾರ ಇಂತಹ ದುಷ್ಕರ್ಮಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗ ಮಾಡಿ ಜೈಲಿಗೆ ಹಾಕಬೇಕು. ಇಲ್ಲವಾದರೆ ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಹಾಗೂ ಮತಕ್ಕಾಗಿ ಓಲೈಕೆ ಮಾಡುತ್ತಿದೆ ಎಂದು ಅಂದುಕೊಳ್ಳಬೇಕಾಗುತ್ತದೆ. ಈ ಮತಾಂಧರಿಗೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ನಂಟು ಇದೆಯೇ ಎಂದು ಪರಿಶೀಲಿಸಬೇಕು. ಈ ಹಿಂದೆ ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ನಡೆದ ನಂತರ ಪಾಕಿಸ್ತಾನದವರು ಟ್ವೀಟ್‌ ಮಾಡಿ ಖಂಡಿಸಿದ್ದರು. ಆದ್ದರಿಂದ ಈ ಘಟನೆಯಲ್ಲೂ ಯಾವ ಲಿಂಕ್‌ ಇದೆ ಎಂದು ಪರೀಕ್ಷೆ ಮಾಡಬೇಕಿದೆ ಎಂದರು.

ಪ್ರಜಾಪ್ರಭುತ್ವದ ಕಗ್ಗೊಲೆ

ಮುಡಾ ಹಗರಣ ಬಯಲಾಗಿರುವುದರಿಂದ ಸಾವಿರಾರು ಕೋಟಿ ರೂ. ವಾಪಸ್‌ ಬಂದಿದೆ. ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸುವ ಮೂಲಕ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ. ಸರ್ಕಾರದ ಅಕ್ರಮಗಳನ್ನು ಬಯಲುಗೊಳಿಸುವ ಸಾಮಾಜಿಕ ಹೋರಾಟಗಾರರನ್ನು ಹತ್ತಿಕ್ಕಲು ಯತ್ನಿಸಿರುವುದು ಸರಿಯಲ್ಲ ಎಂದರು.

ತಾರತಮ್ಯ ನಿವಾರಿಸಲು ಬಜೆಟ್ ನಲ್ಲಿ 15 ಸಾವಿರ ಕೋಟಿ ಕೊಡಿ

ಪ್ರೊ.ಗೋವಿಂದರಾವ್‌ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಈ ವರದಿಯಲ್ಲಿ ಹಿಂದಿನ ನಂಜುಂಡಪ್ಪ ಆಯೋಗದ ವರದಿಯಲ್ಲಿದ್ದ ತಾಲ್ಲೂಕುಗಳಿಗಿಂತ ಹೆಚ್ಚು ಪ್ರದೇಶಗಳನ್ನು ಹಿಂದುಳಿದವು ಎಂದು ಗುರುತಿಸಲಾಗಿದೆ. ಈ ತಾರತಮ್ಯ ನಿವಾರಣೆಗೆ ಒಟ್ಟು 45,000 ಕೋಟಿ ರೂ. ಅನುದಾನ ನೀಡಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಠ 15,000 ಕೋಟಿ ಅನುದಾನವನ್ನು ನಿಗದಿ ಮಾಡಬೇಕೆಂದು ನಾನು ಆಗ್ರಹಿಸುತ್ತೇನೆ. ಈ ಕುರಿತು ಪತ್ರ ಕೂಡ ಬರೆದಿದ್ದೇನೆ. ಮೊಸಳೆ ಕಣ್ಣೀರು ಸುರಿಸುವುದರಿಂದ ಏನೂ ಉಪಯೋಗವಿಲ್ಲ. ವರದಿಯ ಶಿಫಾರಸು ಪ್ರಕಾರ ಅನುದಾನ ಮೀಸಲಿಡಬೇಕು. ಇಲ್ಲವಾದರೆ ಕಾಂಗ್ರೆಸ್‌ ಸರ್ಕಾರ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ವಿರೋಧಿ ಎಂದು ಜನರು ತೀರ್ಮಾನಿಸುತ್ತಾರೆ ಎಂದರು.