ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಬಳಿ ಕೃಷ್ಣ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

ಬೆಂಗಳೂರು (ಫೆ.20):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ವಿರುದ್ಧ ಸತತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ವಿರುದ್ಧ ದೂರು ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ನಗರದ ಸಿಟಿ ಸಿವಿಲ್ ಕೋರ್ಟ್ ಬಳಿ ಕೃಷ್ಣ ಅವರನ್ನು ಪೊಲೀಸರು ನಾಟಕೀಯವಾಗಿ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬಂಧನದ ಹಿನ್ನೆಲೆ ಏನು?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ನೀಡಿದ ದೂರಿನ ಮೇರೆಗೆ ಸಿಸಿಬಿ ಈ ಕ್ರಮ ಕೈಗೊಂಡಿದೆ. ಡಿ.ಬಿ. ನಟೇಶ್ ಅವರು ತಮಗೆ ಮುಂಬಡ್ತಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸುಮಾರು 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಸಾರ್ವಜನಿಕವಾಗಿ ಆರೋಪಿಸಿದ್ದರು. ಈ ಕುರಿತು ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರಲಾಗುತ್ತಿದೆ ಎಂದು ನಟೇಶ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. 'ನಾನು ಯಾವುದೇ ಹಣ ನೀಡಿಲ್ಲ, ಕೃಷ್ಣ ಅವರು ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ' ಎಂದು ನಟೇಶ್ ದೂರಿನಲ್ಲಿ ತಿಳಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು.

ಕೋರ್ಟ್ ಆವರಣದಲ್ಲೇ ವಶಕ್ಕೆ:

ಸ್ನೇಹಮಯಿ ಕೃಷ್ಣ ಅವರು ಶುಕ್ರವಾರ ಕೆಲಸದ ನಿಮಿತ್ತ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ಗೆ ಆಗಮಿಸಿದ್ದರು. ಈ ಬಗ್ಗೆ ಮುನ್ಸೂಚನೆ ಪಡೆದಿದ್ದ ಸಿಸಿಬಿ ಪೊಲೀಸರು, ಕೋರ್ಟ್ ಆವರಣದ ಬಳಿಯೇ ಅವರನ್ನು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಹಠಾತ್ ನಡೆದ ಈ ಬೆಳವಣಿಗೆಯಿಂದ ಕೋರ್ಟ್ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಹಲವು ಘಟಾನುಘಟಿಗಳ ವಿರುದ್ಧ ದೂರು:

ಸ್ನೇಹಮಯಿ ಕೃಷ್ಣ ಅವರು ಕೇವಲ ಡಿ.ಬಿ. ನಟೇಶ್ ವಿರುದ್ಧ ಮಾತ್ರವಲ್ಲದೆ, ರಾಜ್ಯದ ಅತಿ ಪ್ರಭಾವಿ ನಾಯಕರ ವಿರುದ್ಧವೂ ದೂರು ನೀಡಿ ಸುದ್ದಿಯಾಗಿದ್ದರು. ಮೈಸೂರಿನ ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಿರುವುದು ಇದೇ ಸ್ನೇಹಮಯಿ ಕೃಷ್ಣ. ಅಲ್ಲದೆ, ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧವೂ ಕೆಲವು ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು.

ಸದ್ಯ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಕಚೇರಿಗೆ ಕರೆದೊಯ್ಯಲಾಗಿದ್ದು, ಸುಳ್ಳು ಆರೋಪ ಹಾಗೂ ವ್ಯಕ್ತಿತ್ವ ಹರಣದ ದೂರಿನ ಕುರಿತು ಹೆಚ್ಚಿನ ವಿಚಾರಣೆ ಮುಂದುವರೆದಿದೆ.