Asianet Suvarna News Asianet Suvarna News

ವಿಡಿಯೋ, ಫೋಟೋ ತೆಗೆದಿಲ್ಲವೇಕೆ? ಬಾಲಾಕೋಟ್‌ ಏರ್‌ ಸ್ಟ್ರೈಕ್ ರೋಚಕ ರಹಸ್ಯ ಬಯಲು

ಬಾಲಾಕೋಟ್‌ ಏರ್‌ ಸ್ಟ್ರೈಕ್ ರಹಸ್ಯ ಬಯಲು| ವಾಯುಪಡೆ ಏಕೆ ಬಾಲಾಕೋಟ್‌ ದಾಳಿ ಫೋಟೋ ತೆಗೀಲಿಲ್ಲ?| ವಿಡಿಯೋ ಸೆರೆ ಹಿಡಿವ ಇಸ್ರೇಲ್‌ ಕ್ಷಿಪಣಿ ಒಯ್ದಿದ್ದರೂ ಬಳಸಲಿಲ್ಲವೇಕೆ?| ರೋಚಕ ಕಾರ್ಯಾಚರಣೆಯ ಕುರಿತು ಕುತೂಹಲಕರ ಮಾಹಿತಿ ಬೆಳಕಿಗೆ

Why Air Force Has Not Shown Video Proof Of Balakot Strike
Author
Bangalore, First Published Apr 26, 2019, 7:38 AM IST

ನವದೆಹಲಿ[ಏ.26]: ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಯುದ್ಧ ವಿಮಾನಗಳು ಫೆ.26ರಂದು ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ನೂರಾರು ಉಗ್ರರು ಸತ್ತಿದ್ದರೂ ಆ ದಾಳಿಯನ್ನು ಪಾಕ್‌ ಅಲ್ಲಗಳೆಯುತ್ತಿದೆ. ದೇಶದ ಕೆಲವು ರಾಜಕಾರಣಿಗಳು ಸಾಕ್ಷ್ಯವನ್ನೂ ಕೇಳಿದ್ದಾರೆ. ಇಂತಹ ಅಪರೂಪದ ದಾಳಿ ನಡೆಸಿದಾಗ ವಾಯುಪಡೆ ಏಕೆ ಫೋಟೋ ಅಥವಾ ವಿಡಿಯೋ ಸೆರೆ ಹಿಡಿಯಲಿಲ್ಲ? ಈ ಪ್ರಶ್ನೆಗೆ ಕೊನೆಗೂ ಉತ್ತರ ಲಭಿಸಿದೆ.

ದಾಳಿ ನಡೆದ 43 ದಿನ ಬಳಿಕ ಬಾಲಾಕೋಟ್‌ಗೆ ಪತ್ರಕರ್ತರ ಒಯ್ದ ಪಾಕ್‌

ಪಾಕಿಸ್ತಾನದ ಮೇಲಿನ ದಾಳಿಯ ಚಿತ್ರವನ್ನು ಸೆರೆ ಹಿಡಿಯಲೆಂದೇ ವಾಯುಪಡೆ ತನ್ನ ಯುದ್ಧ ವಿಮಾನಗಳಿಗೆ ‘ಕ್ರಿಸ್ಟಲ್‌ ಮೇಜ್‌’ ಎಂಬ ಆಗಸದಿಂದ ಭೂಮಿಗೆ ದಾಳಿ ನಡೆಸುವ ಇಸ್ರೇಲ್‌ ನಿರ್ಮಿತ ಕ್ಷಿಪಣಿಯನ್ನು ಅಳವಡಿಸಿತ್ತು. 5 ‘ಸ್ಪೈಸ್‌- 2000’ ಗ್ಲೈಡರ್‌ ಬಾಂಬ್‌ ಜತೆಗೂಡಿ ಈ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಕಾರ್ಯಯೋಜನೆ ಹಾಕಿಕೊಂಡಿತ್ತು. ಕ್ರಿಸ್ಟಲ್‌ ಮೇಜ್‌ ಕ್ಷಿಪಣಿಗಳನ್ನು ಬಳಸಿ ಕಟ್ಟಡಗಳ ಮೇಲ್ಮಹಡಿಗೆ ದಾಳಿ ಮಾಡುವುದು, ಸ್ಪೈಸ್‌ ಬಾಂಬ್‌ ಮೂಲಕ ನೆಲ ಅಂತಸ್ತು, ಮೊದಲ ಮಹಡಿಗೆ ಗುರಿ ಇಟ್ಟು ಇಡೀ ಕಟ್ಟಡವನ್ನೇ ಉರುಳಿಸುವ ಮೂಲಕ ಉಗ್ರರ ನೆಲೆಯನ್ನು ಸಂಪೂರ್ಣ ನಾಶಪಡಿಸುವ ಯೋಜನೆ ರೂಪಿಸಿತ್ತು.

ಆದರೆ ದಾಳಿ ಮಾಡುವಾಗ ಕ್ರಿಸ್ಟಲ್‌ ಮೇಜ್‌ ಕ್ಷಿಪಣಿಯನ್ನು ಉಡಾಯಿಸಲು ಪೈಲಟ್‌ಗೆ ಸಾಧ್ಯವಾಗಲಿಲ್ಲ. ಸ್ಪೈಸ್‌ ಬಾಂಬ್‌ಗಳನ್ನಷ್ಟೇ ಪ್ರಯೋಗಿಸಲಾಯಿತು. ಆದರೆ, ಅದರಲ್ಲಿ ಲೈವ್‌ ವಿಡಿಯೋ ಸೆರೆ ಹಿಡಿಯುವ ಅವಕಾಶ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ವೈರಲ್ ಚೆಕ್| ಬಾಲಾಕೋಟ್ ದಾಳಿಗೆ 200 ಜನ ಬಲಿ: ಪಾಕ್‌ ಸೇನೆ ಒಪ್ಪಿಗೆ?

ಕ್ಷಿಪಣಿ ಪ್ರಯೋಗ ವಿಫಲವಾಗಿದ್ದೇಕೆ?:

ಕ್ರಿಸ್ಟಲ್‌ ಮೇಜ್‌ ಕ್ಷಿಪಣಿಯನ್ನು ಉಡಾವಣೆ ಮಾಡುವ ನಿಯಂತ್ರಣ ಪೈಲಟ್‌ ಬಳಿ ಇರುತ್ತದೆ. ಕಣ್ಣಾರೆ ನಿಗದಿತ ಗುರಿ ನೋಡಿ, ಅದನ್ನು ಕೇಂದ್ರೀಕರಿಸಿ ಈ ಕ್ಷಿಪಣಿಯನ್ನು ಉಡಾವಣೆ ಮಾಡಿದರೆ ಜಿಪಿಎಸ್‌ ಆಧಾರದಲ್ಲಿ ಗುರಿ ತಲುಪಿ, ಲೈವ್‌ ವಿಡಿಯೋ ರವಾನಿಸುತ್ತದೆ. ಆದರೆ ದಾಳಿ ನಡೆದ ದಿನ ದಟ್ಟಮೋಡವಿದ್ದ ಕಾರಣ ಗುರಿಯನ್ನು ಕೇಂದ್ರೀಕರಿಸಲು ಪೈಲಟ್‌ಗೆ ಸಾಧ್ಯವಾಗಿಲ್ಲ. ಹೀಗಾಗಿ ಕ್ರಿಸ್ಟಲ್‌ ಮೇಜ್‌ ಕ್ಷಿಪಣಿ ಪ್ರಯೋಗ ಆಗಿಲ್ಲ ಎಂದು ಮೂಲಗಳು ವಿವರಿಸಿವೆ.

ಭಾರತದ ಬಳಿ ದಾಳಿ ಚಿತ್ರವಿದೆ, ಆದರೆ ತೋರಿಸುವ ಹಾಗಿಲ್ಲ!

ಬಾಲಾಕೋಟ್‌ ದಾಳಿಯ ಫೋಟೋ, ವಿಡಿಯೋ ಸೆರೆ ಹಿಡಿಯಲು ಸಾಧ್ಯವಾಗದೇ ಇದ್ದರೂ ದಾಳಿಯಿಂದ ಆದ ಹಾನಿಯ ಕುರಿತ ಚಿತ್ರವನ್ನು ಗಳಿಸುವಲ್ಲಿ ಭಾರತ ಸಫಲವಾಗಿದೆ. ಮಿತ್ರ ದೇಶಗಳ ಉಪಗ್ರಹಗಳಿಂದ ಉತ್ಕೃಷ್ಟದರ್ಜೆಯ ಫೋಟೋವನ್ನು ಪಡೆದುಕೊಂಡಿದೆ. ಆದರೆ ಆ ದೇಶಗಳ ಜತೆ ಇರುವ ಒಪ್ಪಂದದಿಂದಾಗಿ ಈ ಚಿತ್ರಗಳನ್ನು ಬಹಿರಂಗಪಡಿಸಲು ಆಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಉಗ್ರರ ಶವ ಸುಟ್ಟು ನದಿಗೆ ಎಸೆದ ಪಾಕ್‌!: ಬಾಲಾಕೋಟ್‌ ದಾಳಿಗೆ ಮತ್ತೊಂದು ಸಾಕ್ಷ್ಯ

ಬಾಲಾಕೋಟ್‌ನ 5-6 ಕಡೆ ದಾಳಿ

ಫೆ.26ರಂದು ಬಾಲಾಕೋಟ್‌ನ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಶಿಬಿರದಲ್ಲಿನ 5-6 ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇದೇ ಮೊದಲ ಬಾರಿಗೆ ವಾಯುಪಡೆ ಬಹಿರಂಗಪಡಿಸಿದೆ. ಬಾಲಾಕೋಟ್‌ ದಾಳಿಯಿಂದ ಕಲಿತ ಪಾಠಗಳು ಎಂಬ ವಾಯುಪಡೆಯ ವರದಿಯಲ್ಲಿ ಈ ಅಂಶವಿದೆ ಎಂದು ಪತ್ರಿಕೆಯೊಂದು ತಿಳಿಸಿದೆ.

ಭಾರತ- ಪಾಕ್‌ ವಿಮಾನಗಳ ನಡುವೆ 10 ನಿಮಿಷದ ಅಂತರ

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ತನ್ನ ಮೇಲೆ ದಾಳಿ ನಡೆಸಬಹುದು ಎಂಬ ನಿರೀಕ್ಷೆಯನ್ನು ಪಾಕಿಸ್ತಾನ ಹೊಂದಿತ್ತು. ಆದರೆ ವೈಮಾನಿಕ ದಾಳಿ ಆ ದೇಶವನ್ನು ಚಕಿತಗೊಳಿಸಿತ್ತು. ಆದಾಗ್ಯೂ ದಾಳಿ ನಡೆದಾಗ ಪಾಕಿಸ್ತಾನ ಕ್ಷಿಪ್ರಗತಿಯಲ್ಲಿ ತಿರುಗೇಟಿಗೆ ಮುಂದಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾಲಾಕೋಟ್‌ ಉಗ್ರ ಶಿಬಿರದ ಮೇಲೆ ವಾಯುಪಡೆಯ ಮಿರಾಜ್‌- 2000 ಎಸ್‌ ವಿಮಾನಗಳು ದಾಳಿ ನಡೆಸಿದ ವಿಷಯ ತಿಳಿದು ಪಾಕಿಸ್ತಾನದ 8 ವಾಯುನೆಲೆಗಳಿಂದ ಯುದ್ಧ ವಿಮಾನಗಳು ಟೇಕಾಫ್‌ ಆದವು. ಕೂಡಲೇ ಭಾರತದ ಮಿರಾಜ್‌ ವಿಮಾನ ತವರಿನತ್ತ ಮರಳಲು ಆರಂಭಿಸಿತು. ಆಗ ಭಾರತ ಹಾಗೂ ಪಾಕಿಸ್ತಾನದ ವಿಮಾನಗಳ ನಡುವೆ ಕೇವಲ 10 ನಿಮಿಷಗಳ ಅಂತರವಿತ್ತು ಎಂದು ವಿವರಿಸಿದ್ದಾರೆ.

ಭಾರತೀಯ ರಕ್ತ ಇರೋರು ಸಾಕ್ಷಿ ಕೇಳಲ್ಲ: ಪ್ರಧಾನಿ ಮೋದಿ!

ಕಾರ್ಯಾಚರಣೆಯಲ್ಲಿ 6000 ಮಂದಿ, ಭಾಗಿ, ಆದರೂ ರಹಸ್ಯ ಸೋರಿಕೆ ಇಲ್ಲ

ಬಾಲಾಕೋಟ್‌ ಮೇಲೆ ಭಾರತ ನಡೆಸಿದ ವಾಯು ದಾಳಿ ಕಾರ್ಯಾಚರಣೆಯಲ್ಲಿ ವಾಯುಪಡೆಯ ಬರೋಬ್ಬರಿ 6000 ಸಿಬ್ಬಂದಿ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಕಾರ್ಯಾಚರಣೆಗಾಗಿ ವಿವಿಧ ಸೇನಾ ನೆಲೆಗಳ ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು. ಇಷ್ಟುಬೃಹತ್‌ ಸಂಖ್ಯೆಯ ಸಿಬ್ಬಂದಿ ಭಾಗಿಯಾಗಿದ್ದರೂ ಎಲ್ಲೂ ಕಾರ್ಯಾಚರಣೆಯ ರಹಸ್ಯ ಸೋರಿಕೆಯಾಗಿರಲಿಲ್ಲ.

ಎಫ್‌-16 ಹೊಡೆಯಲು ಮಿಗ್‌ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!

ಪಾಕಿಸ್ತಾನವನ್ನು ಭಾರತ ಏಮಾರಿಸಿದ್ದು ಹೀಗೆ?

ಫೆ.26ರಂದು ಪಾಕಿಸ್ತಾನದ ಬಹಾವಲ್‌ಪುರದತ್ತ ವಾಯುಪಡೆಯ ರಷ್ಯಾ ನಿರ್ಮಿತ ಸುಖೋಯ್‌- 30 ಎಸ್‌ ವಿಮಾನಗಳು ಟೇಕಾಫ್‌ ಆದವು. ಜೈಷ್‌ ಎ ಮೊಹಮ್ಮದ್‌ ಕೇಂದ್ರ ನೆಲೆ ಅಲ್ಲೇ ಇದ್ದುದ್ದರಿಂದ ಪಾಕಿಸ್ತಾನ ವಾಯುಪಡೆ ತನ್ನ ಗಮನ ಹಾಗೂ ಸಾಮರ್ಥ್ಯ ಎಲ್ಲವನ್ನೂ ಅತ್ತ ಕೇಂದ್ರೀಕರಿಸಿತ್ತು. ಆದರೆ ಭಾರತ ಬಾಲಾಕೋಟ್‌ ಮೇಲೆ ಎರಗುವ ಮೂಲಕ ಪಾಕಿಸ್ತಾನವನ್ನು ಏಮಾರಿಸಿತು ಎನ್ನಲಾಗಿದೆ.

Follow Us:
Download App:
  • android
  • ios