ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ದಾಳಿಯಲ್ಲಿ 200 ಜನ ಮೃತಪಟ್ಟಿದ್ದಾಗಿ ಪಾಕ್ ಸೇನೆಯೇ ಒಪ್ಪಿಕೊಂಡಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿಡಿಯೋ ಹಿಂದಿನ ಅಸಲಿಯತ್ತು
ನವದೆಹಲಿ[ಮಾ.15]: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಸೇನೆ, ಪಾಕಿಸ್ತಾನದ ಬಾಲಾಕೋಟ್ ಮೇಲೆ ನಡೆಸಿದ್ದ ದಾಳಿಯಲ್ಲಿ 200 ಜನ ಮೃತಪಟ್ಟಿದ್ದಾಗಿ ಪಾಕ್ ಸೇನೆಯೇ ಒಪ್ಪಿಕೊಂಡಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಮೆರಿಕ ಮೂಲದ ಗಿಜಿಟ್ ಹೋರಾಟಗಾರ ಸೇಂಜ್ ಹಸ್ನಾನ್ ಸೇರಿಂಗ್ ವಿಡಿಯೋವೊಂದನ್ನು ಪೋಸ್ಟ್ ಮಾಡಿ,‘ಈ ವಿಡಿಯೋ ಎಷ್ಟುಅಧಿಕೃತ ಎಂಬುದು ಗೊತ್ತಿಲ್ಲ. ಆದರೆ ಪಾಕಿಸ್ತಾನ ಖಂಡಿತವಾಗಿಯೂ ಬಾಲಾಕೋಟ್‌ಗೆ ಬಗ್ಗೆ ಏನನ್ನೋ ಮುಚ್ಚಿಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

ಭಾರತದ ಅನೇಕ ಮಾಧ್ಯಮಗಳೂ ಇದನ್ನು ವರದಿ ಮಾಡಿವೆ. ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿಯೊಬ್ಬರು ಮಗುವೊಂದನ್ನು ತನ್ನ ಬಳಿ ಕೂರಿಸಿಕೊಂಡು, ‘ಕೆಲವೇ ಕೆಲವು ವಿಶೇಷ ವ್ಯಕ್ತಿಗಳು ದೇವರ ಬಳಿ ಹೋಗುತ್ತಾರೆ. ನಿನಗೆ ಗೊತ್ತಾ 200 ಜನ ಮೇಲಕ್ಕೆ ಹೋಗಿದ್ದಾರೆ. ನಾವೂ ಪ್ರತಿದಿನ ಹೋರಾಡಿ ವಾಪಸ್ ಬರುತ್ತೇವೆ. ನಿಮ್ಮ ತಂದೆ ಸತ್ತಿಲ್ಲ ಸದಾ ಬದುಕಿರುತ್ತಾರೆ’ ಎಂದು ಹೇಳುತ್ತಾರೆ.
ಆದರೆ ಆಲ್ಟ್ ನ್ಯೂಸ್ ಸುದ್ದಿ ಸಂಸ್ಥೆ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದೇ ರೀತಿಯ ಹಲವು ಚಿತ್ರಗಳು ಪತ್ತೆಯಾಗಿವೆ. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಪಾಕ್ ಸೇನೆ ಅಧಿಕಾರಿ ಹೆಸರು ಕೂಡ ಆ ಎಲ್ಲಾ ಪೋಟೋಗಳಲ್ಲಿ ಒಂದೇ ರೀತಿ ಇದೆ. ಹಾಗಾಗಿ ವ್ಯಕ್ತಿಯೊಬ್ಬ ಮೃತಪಟ್ಟಸಂದರ್ಭದಲ್ಲಿ ಪಾಕ್ ಸೇನಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ ದೃಶ್ಯ ಅದು. ಇಲ್ಲಿ 200 ಹೆಣಗಳೂ ಇಲ್ಲ. ಇದು ಬಾಲಾಕೋಟ್ ಸಂಬಂಧಿತ ವಿಡಿಯೋವೂ ಅಲ್ಲ ಎಂಬುದು ಬಯಲಾಗಿದೆ.
