ಕೊಯಮತ್ತೂರು[ಮಾ.05]: ಪಾಕಿಸ್ತಾನವು ಅತ್ಯಾಧುನಿಕ ಎಫ್‌-16 ಯುದ್ಧ ವಿಮಾನಗಳನ್ನು ಬಳಸಿ ಭಾರತದ ಮೇಲೆ ದಾಳಿ ನಡೆಸಲು ಬರುತ್ತಿದ್ದಾಗ ಭಾರತವು ಹಳೆಯ ಮಿಗ್‌-21 ಯುದ್ಧ ವಿಮಾನಗಳನ್ನು ಬಳಸಿ ಪ್ರತಿದಾಳಿ ನಡೆಸಿದ್ದೇಕೆ ಎಂಬ ಕುತೂಹಲಕರ ಪ್ರಶ್ನೆಗೆ ಕೊನೆಗೂ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಬಿ.ಎಸ್‌.ಧನೋವಾ ಉತ್ತರ ನೀಡಿದ್ದಾರೆ. ‘ಮಿಗ್‌-21 ಬೈಸನ್‌ ಯುದ್ಧ ವಿಮಾನಗಳು ಆಗಸದಲ್ಲಿ ಎಂತಹುದೇ ಯುದ್ಧ ವಿಮಾನಗಳನ್ನೂ ಹೊಡೆಯುವ ಶಕ್ತಿ ಹೊಂದಿವೆ. ಏಕೆಂದರೆ ಅವುಗಳನ್ನು ನಾವು ಸಾಕಷ್ಟುಅಪ್‌ಗ್ರೇಡ್‌ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

‘ಮಿಗ್‌-21 ಬೈಸನ್‌ನಲ್ಲಿ ಉತ್ತಮ ರಾಡಾರ್‌, ಏರ್‌-ಟು-ಏರ್‌ ಮಿಸೈಲ್‌ ಉಡಾವಣೆ ವ್ಯವಸ್ಥೆ ಹಾಗೂ ಉತ್ತಮ ಶಸ್ತ್ರಾಸ್ತ್ರ ವ್ಯವಸ್ಥೆಯಿದೆ. ಈ ವಿಮಾನವನ್ನು ಸಾಕಷ್ಟುಅಪ್‌ಗ್ರೇಡ್‌ ಮಾಡಲಾಗಿದೆ’ ಎಂದು ಸೋಮವಾರ ಮಾಹಿತಿ ನೀಡಿದ್ದಾರೆ.

ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಪಾಕ್‌ನ ಎಫ್‌-16 ವಿಮಾನವನ್ನು ಮಿಗ್‌-21 ವಿಮಾನದಿಂದ ಹೊಡೆದುರುಳಿಸಿದ್ದಕ್ಕೆ ಜಗತ್ತಿನಾದ್ಯಂತ ಅಚ್ಚರಿ ವ್ಯಕ್ತವಾಗಿತ್ತು. ನಂತರ ಪಾಕ್‌ನ ಯುದ್ಧ ವಿಮಾನಗಳು ಅಭಿನಂದನ್‌ರ ಮಿಗ್‌ ವಿಮಾನವನ್ನು ಹೊಡೆದಿದ್ದರಿಂದ ಅವರು ಪಾಕಿಸ್ತಾನದೊಳಗೆ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ, ಭಾರತೀಯ ವಾಯುಪಡೆಯಲ್ಲಿರುವ ನಾಲ್ಕೈದು ದಶಕಗಳಷ್ಟು ಹಳೆಯ ರಷ್ಯಾ ನಿರ್ಮಿತ ಸಣ್ಣ ಮಿಗ್‌ ವಿಮಾನವನ್ನು ಏಕೆ ಅಮೆರಿಕದ ಅತ್ಯಾಧುನಿಕ ದೈತ್ಯ ಎಫ್‌-16 ವಿರುದ್ಧ ಬಳಸಲಾಗಿತ್ತು ಎಂದು ಪ್ರಶ್ನೆಗಳು ಕೇಳಿಬಂದಿದ್ದವು.

ಈ ಕುರಿತು ಇನ್ನಷ್ಟುಮಾಹಿತಿ ನೀಡಿರುವ ಧನೋವಾ, ‘ಮೊದಲೇ ಪ್ಲಾನ್‌ ಮಾಡಿಕೊಂಡು ನಡೆಸುವ ದಾಳಿಗಳಿಗೆ ನಿರ್ದಿಷ್ಟವಿಮಾನಗಳನ್ನು ಆಯ್ಕೆ ಮಾಡುತ್ತೇವೆ. ಆದರೆ, ದಿಢೀರ್‌ ಆಪತ್ತು ಎದುರಾದಾಗ ಯಾವ ವಿಮಾನ ಲಭ್ಯವಿದೆಯೋ ಅದನ್ನು ಶತ್ರುಗಳ ವಿರುದ್ಧ ಬಳಸುತ್ತೇವೆ. ಅದು ಯಾವ ವಿಮಾನ, ಅದರ ಸಾಮರ್ಥ್ಯವೇನು ಎಂಬುದನ್ನೆಲ್ಲ ನೋಡುವುದಿಲ್ಲ. ನಮ್ಮಲ್ಲಿರುವ ಎಲ್ಲ ವಿಮಾನಗಳೂ ಶತ್ರುಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿವೆ’ ಎಂದು ಹೇಳಿದರು.