ನವದೆಹಲಿ[ಮಾ.12]: ಇತ್ತೀಚೆಗೆ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕರ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಯಾರೂ ಸತ್ತಿಲ್ಲ ಎಂದು ಆ ದೇಶ ಹೇಳಿಕೊಂಡಿದ್ದು ಹಸಿಸುಳ್ಳು ಎಂಬುದಕ್ಕೆ ಪ್ರಮುಖ ಸಾಕ್ಷ್ಯವೊಂದು ಲಭ್ಯವಾಗಿದೆ. ಭಾರತದ ದಾಳಿಯ ನಂತರ ಪಾಕ್‌ ಸೇನೆಯು ತರಾತುರಿಯಲ್ಲಿ ಮೃತ ಭಯೋತ್ಪಾದಕರ ಶವಗಳನ್ನು ಸುಟ್ಟುಹಾಕಿದೆ ಮತ್ತು ಕೆಲ ಶವಗಳನ್ನು ನದಿಗೆ ಎಸೆದಿದೆ ಎಂದು ಪ್ರತ್ಯಕ್ಷ ದರ್ಶಿಯೊಬ್ಬ ತಿಳಿಸಿದ್ದಾನೆ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಫೆ.26ರಂದು ಭಾರತದ ವಾಯುಪಡೆ ಪಾಕಿಸ್ತಾನದೊಳಕ್ಕೆ ರಾತ್ರೋರಾತ್ರಿ ನುಗ್ಗಿ ವಾಯುದಾಳಿ ನಡೆಸಿತ್ತು. ಆ ದಾಳಿಯಲ್ಲಿ ಜೈಷ್‌-ಎ-ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ತರಬೇತಿ ಕೇಂದ್ರದಲ್ಲಿದ್ದ ನೂರಾರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪಾಕಿಸ್ತಾನ ಯಾರೂ ಸತ್ತಿಲ್ಲ ಎಂದು ಹೇಳಿಕೊಂಡಿತ್ತು. ಆದರೆ, ಬಾಲಾಕೋಟ್‌ನ ಸ್ಥಳೀಯ ನಿವಾಸಿಯಾಗಿರುವ ಪ್ರತ್ಯಕ್ಷದರ್ಶಿಯೊಬ್ಬ ಮಾತನಾಡಿದ ಮೂರು ನಿಮಿಷದ ಆಡಿಯೋ ಟೇಪ್‌ವೊಂದು ರಿಪಬ್ಲಿಕ್‌ ಟೀವಿಗೆ ಲಭ್ಯವಾಗಿದ್ದು, ಅದರಲ್ಲಿ ದಾಳಿಯ ನಂತರದ ಸಮಗ್ರ ಚಿತ್ರಣವಿದೆ.

ಆಡಿಯೋದಲ್ಲಿ ಪ್ರತ್ಯಕ್ಷದರ್ಶಿ ಹೇಳಿದ್ದು:

- ಎಷ್ಟುಉಗ್ರರು ಸತ್ತಿದ್ದಾರೆ ಎಂದು ನಾನು ಹೇಳಲು ಸಾಧ್ಯವಿಲ್ಲ. ಆದರೆ, ದಾಳಿಯ ನಂತರ ಪಾಕಿಸ್ತಾನದ ಸೇನಾಪಡೆ ಬಾಲಾಕೋಟ್‌ನ ಪ್ರದೇಶವನ್ನು ತನ್ನ ವಶಕ್ಕೆ ಪಡೆದುಕೊಂಡು, ಬಲವಂತವಾಗಿ ಸ್ಥಳೀಯರ ಬಾಯಿಮುಚ್ಚಿಸಿ, ಅವರ ಮೊಬೈಲ್‌ ಫೋನ್‌ಗಳನ್ನು ಕಿತ್ತುಕೊಂಡಿತು.

- ಬಾಲಾಕೋಟ್‌ ಪ್ರದೇಶದಿಂದ ಫೋಟೋಗಳು ಹಾಗೂ ವಿಡಿಯೋಗಳು ಹೊರಹೋಗದಂತೆ ಇಂಟರ್ನೆಟ್‌ ಸ್ಥಗಿತಗೊಳಿಸಲಾಗಿತ್ತು. ಆದರೂ ಕೆಲ ಫೋಟೋಗಳು ಹೊರಹೋದವು.

- ಯಾವುದೇ ವೈದ್ಯರು ಗಾಯಗೊಂಡ ಭಯೋತ್ಪಾದಕರಿಗೆ ಚಿಕಿತ್ಸೆ ನೀಡದಂತೆ ಪಾಕ್‌ ಸೇನೆ ನಿರ್ಬಂಧ ವಿಧಿಸಿತ್ತು.

- ಕಾರುಗಳಿಂದ ಪೆಟ್ರೋಲ್‌ ತೆಗೆದು ದೊಡ್ಡ ಸಂಖ್ಯೆಯಲ್ಲಿ ಮೃತ ದೇಹಗಳನ್ನು ಸುಡಲಾಯಿತು.

- ಸಾಕ್ಷ್ಯ ಸಿಗದಂತೆ ಮಾಡಲು ಕೆಲ ಮೃತ ದೇಹಗಳನ್ನು ಸಮೀಪದ ಕುನ್ಹಾರ್‌ ನದಿಗೆ ಎಸೆದರು.

- ಮೃತಪಟ್ಟವರಲ್ಲಿ ಹೆಚ್ಚಿನವರು ಜೈಷ್‌-ಎ-ಮೊಹಮ್ಮದ್‌ ಉಗ್ರರು.

- ಭಾರತೀಯ ವಾಯುಪಡೆಯ ದಾಳಿಯಲ್ಲಿ ಬದುಕುಳಿದ ಉಗ್ರರನ್ನು ವಜೀರಿಸ್ತಾನ-ಅಷ್ಘಾನಿಸ್ತಾನ ಗಡಿಗೆ ಕಳುಹಿಸಲಾಗಿದೆ.

ಆಡಿಯೋದಲ್ಲಿ ಮಾತನಾಡಿರುವ ವ್ಯಕ್ತಿಯು ದಾಳಿಯಲ್ಲಿ ಮೃತಪಟ್ಟಭಯೋತ್ಪಾದಕರ ಹೆಸರುಗಳನ್ನು ಮತ್ತು ಅವರು ಭಯೋತ್ಪಾದಕ ಸಂಘಟನೆಯಲ್ಲಿ ನಿರ್ವಹಿಸುತ್ತಿದ್ದ ಪಾತ್ರವನ್ನು ಕೂಡ ಹೇಳುತ್ತಾನೆ. ಅಲ್ಲದೆ ಭಾರತದ ದಾಳಿಯ ನಂತರ ಐಎಸ್‌ಐ ಹಾಗೂ ಜೈಷ್‌ ಸಂಘಟನೆಗೆ ನಡುಕ ಹುಟ್ಟಿದೆ ಎಂದೂ ಹೇಳುತ್ತಾನೆ.