ಪ್ರತ್ಯೇಕತೆ ಕಿಚ್ಚಿಗೆ ಮಣಿದರಾ ಸಿಎಂ ಕುಮಾರಸ್ವಾಮಿ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 10:11 PM IST
Uttara Karnataka Farmers Meet CM HD Kumaraswamy
Highlights

ಉತ್ತರ ಕರ್ನಾಟದ ರೈತ ನಿಯೋಗ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತ್ತು. ನಿಯೋಗಕ್ಕೆ ಅಭಿವೃದ್ಧಿಯ ಭರವಸೆ ನೀಡಿದ ಸಿಎಂ ನಾನು ತಾರತಮ್ಯ ಮಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಿದ್ದೆ ಇಷ್ಟಲ್ಲಾ ಅವಾಂತರಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ರೈತ ನಾಯಕರೊಂದಿಗೆ ಸಿಎಂ ಏನು ಮಾತನಾಡಿದರು?

ಬೆಂಗಳೂರು[ಜು.31]  ಕೆಲ ದಿನಗಳಲ್ಲಿ ನಾನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಬರುತ್ತೇನೆ. ಉತ್ತರ ಕರ್ನಾಟಕ‌ ಭಾಗದ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ ಎಂಬ ಭರವಸೆ ಕುಮಾರಸ್ವಾಮಿ ಅವರಿಂದ ಬಂದಿದೆ.

ಸಾಲ ಮನ್ನಾ ವಿಚಾರವಾಗಿ ಎರಡು ತಿಂಗಳಿಂದ ಬೆಂಗಳೂರಿನಲ್ಲೇ ಓಡಾಡುತ್ತಿದ್ದೇನೆ. ಇನ್ನು ಕೆಲ ದಿನಗಳಲ್ಲಿ ನಾನು ಉತ್ತರ ಕರ್ನಾಟಕದಲ್ಲೇ ಇರುತ್ತೇನೆ. ಎರಡು ದಿನ ಪ್ರತಿ ಜಿಲ್ಲೆಗಳಲ್ಲಿ ತಂಗುತ್ತೇನೆ. ಆದರೆ, ಎರಡು ತಿಂಗಳಲ್ಲಿ ಸಾಲ ಮನ್ನಾ ಮಾಡಿರುವುದನ್ನು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲೋಕಸಭೆ ಚುನಾವಣೆ ಗೆಲ್ಲಲು ಬಿಜೆಪಿಗರು ಸಲ್ಲದ  ವಿವಾದ ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಉತ್ತರ ಕರ್ನಾಟಕ ವಿಭಜಿಸಿ ಎಂದು ಹೇಳಿಲ್ಲ. ಪ್ರತ್ಯೇಕ ರಾಜ್ಯ ಮಾಡುವುದಾದರೆ ದುಡ್ಡು ಎಲ್ಲಿಂದ ತರುತ್ತೀರಿ ಎಂದಷ್ಟೇ ಕೇಳಿದ್ದೆ. ಅದನ್ನೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ನಾನು ಉಮೇಶ್ ಕತ್ತಿ, ಶ್ರೀರಾಮುಲು ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದೆ.  ಆದರೆ ಅದನ್ನು ಬಿಜೆಪಿ ನಾಯಕರು ತಿರುಚಿದರು ಎಂದು ಆರೋಪಿಸಿದರು.

ನಾನು ನಿಮ್ಮವನು. ಯಾರು ಬೇಕಾದರೂ ನೇರವಾಗಿ ನನ್ನ ಬಳಿ ಬಂದು ಮಾತನಾಡಿ. ಹಿಂದೆ 20 ತಿಂಗಳು ಸಿಎಂ ಆಗಿದ್ದಾಗ‌ ನಾನು ಉತ್ತರ ಕರ್ನಾಟಕಕ್ಕೆ ಸುಮಾರು 20 ಬಾರಿ ಭೇಟಿ ನೀಡಿದ್ದೆ. ನಾನು‌ ಪ್ರತಿ ಬಾರಿ ಬಂದಾಗಲೂ ನನಗೆ ಹೆಚ್ಚಿನ ಪ್ರೀತಿ ತೋರಿಸಿದ್ದೀರಿ ಎಂದು ಸ್ಮರಿಸಿದರು.

ಸುವರ್ಣ ಸೌಧದಲ್ಲಿ ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಆ ಸಭೆಯಲ್ಲಿ ಆ ಭಾಗದ ರೈತರು, ಮಠಾಧೀಶರು, ನಾಯಕರು, ಜನಪ್ರತಿನಿಧಿಗಳನ್ನೂ ಆಹ್ವಾನಿಸುತ್ತೇನೆ. ಸಮಗ್ರವಾಗಿ ಚರ್ಚೆ ನಡೆಸೋಣ ಎಂದರು. ಕೆಲ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಶಿಫ್ಟ್ ಮಾಡಲು ಚಿಂತನೆ ನಡೆದಿದೆ. ಕೃಷ್ಣಾ ಭಾಗ್ಯ ಜಲ ನಿಗಮವನ್ನು ಅಲ್ಲಿಗೆ ಶಿಫ್ಟ್ ಮಾಡಲು ಚಿಂತನೆ ನಡೆಸಲಿದ್ದೇನೆ ಎಂದು ತಿಳಿಸಿದರು. 

ಇದಕ್ಕೂ‌ ಮುನ್ನ ಕೋನರೆಡ್ಡಿ ನೇತೃತ್ವದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರಾದ ಬಸವರಾಜ ದಿಣ್ಣೂರ್, ಸೋಮಶೇಖರ್ ಕೊತ್ತಂಬರಿ ಸೇರಿದಂತೆ ಹೋರಾಟಗಾರರು ಸಿಎಂರನ್ನು ಭೇಟಿಯಾಗಿ ಪ್ರತ್ಯೇಕ ರಾಜ್ಯದ ಕೂಗು ಈಗಿನ ಸರ್ಕಾರದ ವಿರುದ್ಧ ಅಲ್ಲ. 2000 ನೇ ಇಸವಿಯಿಂದ ಈಚೆಗೆ ನಡೆಯುತ್ತಿದೆ. ನಿಷ್ಕ್ರಿಯವಾಗಿರುವ ಸುವರ್ಣ ಸೌಧಕ್ಕೆ ಮರುಜೀವ ಕೊಡಿ ಎಂದು ಮನವಿ ಮಾಡಿದರು.

ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಸಭೆ ಕರೆದು ಉತ್ತರ ಕರ್ನಾಟಕ ಭಾಗದ ನಾಯಕರ ಜತೆ ಚರ್ಚೆ ನಡೆಸಿ, ನೀವು ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸಿಎಂ ಭೇಟಿ ನಂತರ ಉತ್ತರ ಕರ್ನಾಟಕದ ರೈತ ಮುಖಂಡರು ಬಂದ್ ನಡೆಸುವ ವಿಚಾರದ ಬಗ್ಗೆ ಬುಧವಾರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಪ್ರತ್ಯೇಕತೆ ಹೋರಾಟ ಮತ್ತಷ್ಟು ಸುದ್ದಿಗಳು
ಪ್ರತ್ಯೇಕತೆ ಹೋರಾಟ: ಆಗಸ್ಟ್ 2 ರಂದು ಬಂದ್ ಇದೇಯಾ? ಇಲ್ಲವಾ?

ಪ್ರತ್ಯೇಕತೆ ಕೂಗಿಗೆ ಇಲ್ಲಿದೆ ಉತ್ತರ.. ಇತಿಹಾಸದ ಕನ್ನಡಿಯಲ್ಲಿ ಕನ್ನಡನಾಡು

ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?

ಖಾದಿ-ಕಾವಿ ಅಪವಿತ್ರ ಮೈತ್ರಿ, ಸಮಾಜದ ಸ್ವಾಸ್ಥ್ಯಕ್ಕೆ ಕತ್ತರಿ

 

loader