ತಲೆಯ ಮೇಲೆ ಸೌದೆ ಹೊತ್ತು ಸಾಗುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ಟ್ರಾವೆಲ್ ವ್ಲಾಗರ್ ಹಂಚಿಕೊಂಡ ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಆತ್ಮವಿಶ್ವಾಸ ಮತ್ತು ಕೇರಳದ ಸಾಕ್ಷರತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ತಲೆಯ ಮೇಲೆ ಭಾರವಾದ ಸೌದೆ ಕಟ್ಟಿಗೆಯನ್ನು ಹೊತ್ತು ಸೇತುವೆ ಮೇಲೆ ನಡೆದು ಹೋಗುತ್ತಿದ್ದ ಕೇರಳದ ಸಾಮಾನ್ಯ ಮಹಿಳೆಯೊಬ್ಬರು, ಅಷ್ಟೇ ಆತ್ಮವಿಶ್ವಾಸದಿಂದ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಿದ್ದು ಸೋಷಿಯಲ್ ಮೀಡಿಯಾ ಬಳಕೆದಾರರನ್ನು ಬೆರಗುಗೊಳಿಸಿದೆ. 'ದೇವರ ನಾಡು' ಕೇರಳದಿಂದ ಟ್ರಾವೆಲ್ ವ್ಲಾಗರ್ ಒಬ್ಬರು ಹಂಚಿಕೊಂಡ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. 'ಇದು ನಿಜವಾದ ಕೇರಳ ಸ್ಟೋರಿ', 'ರಿಯಲ್ ಮಲಯಾಳಿ' ಎಂಬಂತಹ ಮೆಚ್ಚುಗೆಯ ಮಾತುಗಳು ವಿಡಿಯೋದ ಕಮೆಂಟ್ ಸೆಕ್ಷನ್‌ನಲ್ಲಿ ತುಂಬಿ ತುಳುಕುತ್ತಿವೆ.

Add Asianetnews Kannada as a Preferred SourcegooglePreferred

ಕೇರಳದಲ್ಲೇ ಬದುಕು, ಕೇರಳದಲ್ಲೇ ಸಾವು

ದೆಹಲಿ ಮೂಲದ ತನ್ನ ಸ್ನೇಹಿತೆಯೊಂದಿಗೆ ಸಿಂಗಾಪುರಕ್ಕೆ ಸೈಕಲ್ ಯಾತ್ರೆ ಹೊರಟಿದ್ದ ಮಲಯಾಳಿ ಯುವಕ, ತನ್ನ 'ಇಕೋ ಟ್ರಾವೆಲರ್' ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತಲೆ ಮೇಲೆ ಒಣಗಿದ ಸೌದೆಯ ದೊಡ್ಡ ಹೊರೆಯನ್ನು ಹೊತ್ತು ಸೇತುವೆ ಮೇಲೆ ಬರುತ್ತಿದ್ದ ಮಹಿಳೆ, ಇವರಿಬ್ಬರನ್ನು ನೋಡಿದ ತಕ್ಷಣ 'ನೀವು ಯೂಟ್ಯೂಬರ್‌ಗಳಾ?' ಎಂದು ಕೇಳುತ್ತಾರೆ. ಅಲ್ಲಿಂದ ಇವರ ನಡುವೆ ಸಂಭಾಷಣೆ ಶುರುವಾಗುತ್ತದೆ. ಇವರು ಕೇರಳದ ಹೊರಗಿನವರು ಎಂದು ಭಾವಿಸಿ, ಆ ಮಹಿಳೆ ಇಂಗ್ಲಿಷ್‌ನಲ್ಲೇ ಮಾತನಾಡಲು ಶುರು ಮಾಡುತ್ತಾರೆ. ಆದರೆ, ಒಬ್ಬ ಮಲಯಾಳಿ ಮತ್ತು ಇನ್ನೊಬ್ಬರು ದೆಹಲಿಯವರು ಎಂದು ತಿಳಿದ ಮೇಲೂ ಆಕೆ ಇಂಗ್ಲಿಷ್‌ನಲ್ಲೇ ಮಾತು ಮುಂದುವರಿಸುತ್ತಾರೆ.

View post on Instagram

ಯಾವ ರಾಜ್ಯದವರು ಎಂದು ಆಕೆ ಕೇಳುತ್ತಾರೆ. ಇಬ್ಬರೂ ಮುನ್ನಾರ್‌ಗೆ ಸೈಕಲ್‌ನಲ್ಲಿ ಹೋಗುತ್ತಿದ್ದೀರಾ ಎಂದು ಕೇಳಿದಾಗ, ಯುವಕ 'ಇಲ್ಲ, ನಾವು ಸಿಂಗಾಪುರಕ್ಕೆ ಹೋಗುತ್ತಿದ್ದೇವೆ' ಎಂದು ಉತ್ತರಿಸುತ್ತಾನೆ. ಆಗ ಆ ಮಹಿಳೆ ತಮಾಷೆಯಾಗಿ 'ನಾನೂ ನಿಮ್ಮ ಜೊತೆ ಬರಲೇ?' ಎಂದು ಕೇಳುತ್ತಾರೆ. ಈ ವೇಳೆ, 'ನೀವು ತುಂಬಾ ಬಲಶಾಲಿ ಮಹಿಳೆ' ಎಂದು ಇಕೋ ಟ್ರಾವೆಲರ್ ಹೇಳುತ್ತಾರೆ. ಅದಕ್ಕೆ ಆಕೆ, 'ನಾನೇನೂ ಅಷ್ಟು ಬಲಶಾಲಿಯಲ್ಲ, ಪ್ರತಿದಿನ ಕೆಲಸ ಮಾಡಿದರೆ ಶಕ್ತಿ ಬರುತ್ತದೆ' ಎಂದು ಉತ್ತರಿಸುತ್ತಾರೆ. ಕೊನೆಯಲ್ಲಿ, 'ನಾನು ಎಲ್ಲೂ ಹೋಗಿಲ್ಲ, ಕೇರಳದಲ್ಲೇ ಬದುಕಿ, ಕೇರಳದಲ್ಲೇ ಸಾಯುತ್ತೇನೆ' ಎಂದು ಹೇಳುತ್ತಾರೆ.

ಮೆಚ್ಚುಗೆಯ ಮಹಾಪೂರ

'ಕೇರಳದ ಸಾಕ್ಷರತೆ' ಎಂಬ ಅಡಿಬರಹದೊಂದಿಗೆ ಶೇರ್ ಆದ ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಸುಮಾರು 17 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋಗೆ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ಬಹುತೇಕರು ಆ ಮಹಿಳೆಯ ಇಂಗ್ಲಿಷ್ ಜ್ಞಾನವನ್ನು ಕೊಂಡಾಡಿದ್ದಾರೆ. ದಿನಗೂಲಿ ಕೆಲಸ ಮಾಡುವ ಕೇರಳದ ಸಾಮಾನ್ಯ ಮಹಿಳೆಯೊಬ್ಬರು ಇಷ್ಟು ಆತ್ಮವಿಶ್ವಾಸದಿಂದ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎಂದು ಅನೇಕರು ಬರೆದುಕೊಂಡಿದ್ದಾರೆ.