ಪ್ರೇಮ ವೈಫಲ್ಯದಿಂದ ಮನನೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲೆಸೆದ 19 ವರ್ಷದ ಯುವಕನನ್ನು ಆಲುವಾ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತನ್ನ ಪ್ರೇಯಸಿ ಬಿಟ್ಟು ಹೋದ ಕೋಪದಲ್ಲಿ, ಆಕೆಯ ಮನೆಯ ಸಮೀಪ ಹಾದುಹೋಗುವ ರೈಲನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

ಆಲುವಾ (ಮಾ.19): ಪ್ರೇಮ ವೈಫಲ್ಯದಿಂದ ಮನನೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲೆಸೆದಿದ್ದ 19 ವರ್ಷದ ಯುವಕನನ್ನು ಆಲುವಾ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಅಂಕಮಾಲಿ ಪಾರಕ್ಕಡವು ನಿವಾಸಿ ಸುಜಿತ್ ಸುರೇಶ್ ಬಂಧಿತ ಆರೋಪಿ. ರೈಲಿನ ಹೊರಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಪೊಲೀಸರು ಈತನನ್ನು ಪತ್ತೆಹಚ್ಚಿದ್ದಾರೆ.

Add Asianetnews Kannada as a Preferred SourcegooglePreferred

ಈ ತಿಂಗಳ 7ರಂದು ಬೆಳಿಗ್ಗೆ 7:15ರ ಸುಮಾರಿಗೆ ನೆಡುಂಬಾಶೇರಿ ವಿಮಾನ ನಿಲ್ದಾಣದ ಸಮೀಪವಿರುವ ಅಕಪರಂಬು ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿತ್ತು. ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಮೂರು ಬಾರಿ ಕಲ್ಲು ತೂರಲಾಗಿತ್ತು. ಕಲ್ಲೇಟಿನಿಂದಾಗಿ ರೈಲಿನ ಕಿಟಕಿಯ ಗಾಜುಗಳು ಪುಡಿಯಾಗಿದ್ದವು.

ಲವರ್‌ ಬಿಟ್ಟು ಹೋದ ನೋವಿಗೆ ರೈಲೇ ಟಾರ್ಗೆಟ್!

ಪೊಲೀಸ್ ವಿಚಾರಣೆಯ ವೇಳೆ ಸುಜಿತ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನ್ನ ಪ್ರೇಯಸಿಯ ಮನೆಯು ರೈಲ್ವೆ ಹಳಿಗಳ ಸಮೀಪದಲ್ಲೇ ಇದ್ದು, ಆಕೆ ತನ್ನನ್ನು ಬಿಟ್ಟು ಹೋಗಿದ್ದಾಳೆಂಬ ಕೋಪ ಮತ್ತು ಪ್ರೇಮ ವೈಫಲ್ಯದ ಬೇಸರದಿಂದ ರೈಲಿನ ಮೇಲೆ ಕಲ್ಲೆಸೆದಿರುವುದಾಗಿ ತಿಳಿಸಿದ್ದಾನೆ. ಹಳಿಗಳ ಸಮೀಪ ಪದೇ ಪದೇ ಸುಳಿದಾಡುತ್ತಿದ್ದ ಈತನನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ರೈಲ್ವೆ ಪೊಲೀಸರು ಗುರುತಿಸಿದ್ದಾರೆ.

ಜೈಲು ಪಾಲು ಗ್ಯಾರಂಟಿ

ರೈಲ್ವೆ ಪೊಲೀಸರು ಈತನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆ 153ರ ಅಡಿಯಲ್ಲಿ (ಜಾಮಿನು ರಹಿತ ಸೆಕ್ಷನ್) ಪ್ರಕರಣ ದಾಖಲಿಸಿದ್ದಾರೆ. ವಂದೇ ಭಾರತ್ ರೈಲಿನ ಸುತ್ತಲೂ ಆರು ಸಿಸಿಟಿವಿ ಕ್ಯಾಮೆರಾಗಳಿದ್ದು, ಅವು ದಿನದ 24 ಗಂಟೆಯೂ ದೃಶ್ಯಗಳನ್ನು ಚಿತ್ರೀಕರಿಸುತ್ತಿರುತ್ತವೆ. ಹೀಗಾಗಿ ರೈಲ್ವೆ ಆಸ್ತಿಗೆ ಹಾನಿ ಮಾಡುವವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರೈಲ್ವೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.