ಮದುವೆ ಆದರೆ ಪರಿಚಿತರನ್ನೇ ಮದುವೆ ಆಗಬೇಕು ಅಪರಿಚಿತರನ್ನು ಮದುವೆ ಆಗಬಾರದು ಎಂದು ಅನೇಕರು ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ಬರೋಬ್ಬರಿ 9 ವರ್ಷಗಳ ಕಾಲ ಪ್ರೀತಿಸಿ ಇತ್ತೀಚೆಗಷ್ಟೇ ಮದುವೆಯಾಗಿದ್ದ ಜೋಡಿಯ ಜೀವನವೂ ದುರಂತದಲ್ಲಿ ಅಂತ್ಯವಾಗಿದೆ. ಇಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ.

ಬರೇಲಿ: ಇತ್ತೀಚೆಗೆ ಮದುವೆಯಾದ ಕೆಲವೇ ದಿನಗಳಲ್ಲಿ ಗಂಡ ಹೆಂಡತಿಯನ್ನು/ಹೆಂಡತಿ ಗಂಡನನ್ನು ಕೊಲೆ ಮಾಡುವಂತಹ ಹಲವು ಘಟನೆಗಳು ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಹೀಗಾಗಿ ಯುವ ಸಮೂಹ ಮದುವೆಯಾಗುವುದಕ್ಕೆ ಭಯ ಪಡುತ್ತಿದ್ದಾರೆ. ಮದುವೆ ಆದರೆ ಪರಿಚಿತರನ್ನೇ ಮದುವೆ ಆಗಬೇಕು ಅಪರಿಚಿತರನ್ನು ಮದುವೆ ಆಗಬಾರದು ಎಂದು ಅನೇಕರು ಹೇಳುತ್ತಾರೆ. ಆದರೆ ಇಲ್ಲೊಂದು ಕಡೆ ಬರೋಬ್ಬರಿ 9 ವರ್ಷಗಳ ಕಾಲ ಪ್ರೀತಿಸಿ ಇತ್ತೀಚೆಗಷ್ಟೇ ಮದುವೆಯಾಗಿದ್ದ ಜೋಡಿಯ ಜೀವನವೂ ದುರಂತದಲ್ಲಿ ಅಂತ್ಯವಾಗಿದೆ. ಇಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ್ದಾಳೆ. ಹೀಗಿರುವಾಗ ನಂಬುವುದಾದರು ಯಾರನ್ನೂ ಅನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.

9 ವರ್ಷ ಪ್ರೀತಿಸಿ ಮದುವೆ 2 ತಿಂಗಳಿಗೆ ಗಂಡನ ಕೊಲೆ

ಹೌದು ಅವರಿಬ್ಬರು 9 ವರ್ಷಗಳ ಕಾಲ ಪ್ರೀತಿಸಿ ಪೋಷಕರನ್ನೆಲ್ಲಾ ಒಪ್ಪಿಸಿ ಮದುವೆಯಾಗಿದ್ದರು. ಆದರೆ ಮದುವೆಯಾಗುವವರೆಗೆ ಇಬ್ಬರ ಜೊತೆಗೆ ಇದ್ದ ಅನೋನ್ಯತೆ ಖುಷಿ ಮದುವೆಯಾಗುತ್ತಿದ್ದಂತೆ ಮಾಯವಾಗಿತ್ತು. ಇಲ್ಲಿ ಬರೀ ಸಂತೋಷವಷ್ಟೇ ಮಾಯವಾಗಿಲ್ಲ, ಇಲ್ಲಿ ಗಂಡನ ಕೊಲೆಯೇ ನಡೆದಿದೆ. ಹೌದು, ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಜ್ಯೋತಿಯೇ ಗಂಡನನ್ನು ಯಮಪುರಿಗೆ ಅಟ್ಟಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬರೇಲಿಯ ಇಜ್ಜತ್‌ನಗರ ಪ್ರದೇಶದ ಬಾಡಿಗೆ ಮನೆಯಲ್ಲಿ. ಮದುವೆಯಾದ ಎರಡು ತಿಂಗಳ ನಂತರ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ 33 ವರ್ಷದ ಜಿತೇಂದ್ರ ಕುಮಾರ್ ಯಾದವ್ ನೇಣು ಬಿಗಿ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಆರಂಭದಲ್ಲಿ ಈ ಸಾವಿನ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ, ಎಲ್ಲರೂ ಜಿತೇಂದ್ರ ಸಾವಿಗೆ ಶರಣಾಗಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅವರದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ವರದಿ ಬಂದಾಗ ಜಿತೇಂದ್ರ ಕುಟುಂಬದವರು ಬೆಚ್ಚಿ ಬಿದ್ದಿದ್ದರು. ಜಿತೇಂದ್ರ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿಯನ್ನು ವೈದ್ಯರು ಪೊಲೀಸರಿಗೆ ನೀಡಿದರು. ನೆರೆಹೊರೆಯವರಿಗೆ ಜಿತೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ವರದಿಯ ನಂತರ ತನಿಖೆ ನಡೆಸಿದ ಪೊಲೀಸರಿಗೆ ಅವರ ಪತ್ನಿಯೇ ತನ್ನ ಅಪ್ಪ ಅಮ್ಮ ಹಾಗೂ ಸೋದರನ ಸಹಾಯದಿಂದ ಆತನ ಕತೆ ಮುಗಿಸಿದ್ದಾಳೆ ಎಂಬುದು ತಿಳಿದು ಬಂದು ಜಿತೇಂದ್ರ ಅವರನ್ನು ಆತನ ಅತ್ತೆ ಮಾವ ಭಾವ ಹಿಡಿದುಕೊಂಡಿದ್ದಾರೆ ಪತ್ನಿ ಆತನ ಕತ್ತನ್ನು ಹಿಸುಕಿದ್ದಳು. ಈ ಕೊಲೆಯ ನಂತರ ಆತ ಸಾವಿಗೆ ಶರಣಾಗಿದ್ದಾನೆ ಎಂದು ಹೊರ ಜಗತ್ತಿಗೆ ಕಾಣುವಂತೆ ಮಾಡಲು ಇವರು ಆತನ ಮಫ್ಲರ್ ಬಳಸಿ ಶವವನ್ನು ಕಿಟಕಿಯ ಗ್ರಿಲ್‌ಗೆ ನೇತು ಹಾಕಿದ್ದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಪತ್ನಿಯ ಸೋದರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಾಲೇಜು ದಿನಗಳಲ್ಲಿ ಶುರುವಾಗಿತ್ತು ಪ್ರೀತಿ

ಈ ಜಿತೇಂದ್ರ ಕುಮಾರ್ ಯಾದವ್ ಹಾಗೂ ಜ್ಯೋತಿ ಅವರ ಪ್ರೀತಿ ಕಾಲೇಜು ದಿನಗಳಿಂದಲೇ ಆರಂಭವಾಗಿತ್ತು. 9 ವರ್ಷ ಪ್ರೀತಿ ಮಾಡಿದ ಜೋಡಿ ಕಳೆದ ವರ್ಷ ನವಂಬರ್‌ನಲ್ಲಿ ಪೋಷಕರನ್ನೆಲ್ಲಾ ಒಪ್ಪಿಸಿ ಮದುವೆಯಾಗಿದ್ದರು. ಎರಡು ಕುಟುಂಬಗಳ ಒಪ್ಪಿಗೆಯೊಂದಿಗೆ ಈ ಮದುವೆ ನಡೆದಿತ್ತು. ಪೊಲೀಸರ ಪ್ರಕಾರ, ಮದುವೆಯಾದ ವಾರದಿಂದಲೇ ಇವರ ಸಂಬಂಧ ಹಳಸಲಾರಂಭಿಸಿತು, ಮುಖ್ಯವಾಗಿ ಹಣದ ವಿಷಯಕ್ಕೆ ಇವರಿಬ್ಬರ ಮಧ್ಯೆ ಜಗಳ ಶುರುವಾಗಿತ್ತು. ಜಿತೇಂದ್ರ ಜ್ಯೋತಿಯ ಬ್ಯಾಂಕ್ ಖಾತೆಯಿಂದ 20,000 ರೂ.ಗಳನ್ನು ತೆಗೆದುಕೊಂಡು ಆನ್‌ಲೈನ್ ಜೂಜಾಟದಲ್ಲಿ ಆ ಹಣವನ್ನು ಕಳೆದ ನಂತರ ಈ ಜಗಳ ಶುರುವಾಯ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಮುಂದೆ ದಿನಾ ಜಗಳವಾಡುವುದಕ್ಕೆ ಕಾರಣವಾಗಿತ್ತು. ತನ್ನ ಹಣದ ಬಗ್ಗೆ ಜ್ಯೋತಿ ಪ್ರಶ್ನಿಸಿದಾಗ ವಾಗ್ವಾದ ಉಲ್ಬಣಗೊಂಡು ಹೊಡೆದಾಟಕ್ಕೂ ಕಾರಣವಾಗಿತ್ತು. ತಮ್ಮಿಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಜ್ಯೋತಿ ತನ್ನ ಮನೆಯವರನ್ನು ಕರೆಸಿಕೊಂಡಿದ್ದಾಳೆ. ಈ ಮನೆ ಇಜ್ಜತ್‌ನಗರ ಪ್ರದೇಶದ ಗಿರ್ಜಾ ಶಂಕರ್ ಕಾಲೋನಿಯಲ್ಲಿತ್ತು. ಜಿತೇಂದ್ರ ಮತ್ತು ಜ್ಯೋತಿ ಮದುವೆಯಾದಾಗಿನಿಂದ ಅಲ್ಲಿ ವಾಸಿಸುತ್ತಿದ್ದರು. ಅವರಿಬ್ಬರು ಮೂಲತಃ ಇಟಾವಾ ಜಿಲ್ಲೆಯ ಭೌಪೋರಾ ಗ್ರಾಮದವರಾಗಿದ್ದರು.

ಇದನ್ನೂ ಓದಿ: ಬಾಲಕನ ಮೊಮೊಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್ಷ ಮೌಲ್ಯದ ಬಂಗಾರ ಮಾಯ

ಪೊಲೀಸರ ಪ್ರಕಾರ, ಜ್ಯೋತಿಯ ತಂದೆ ಕಾಳಿಚರಣ್, ತಾಯಿ ಚಮೇಲಿ ಮತ್ತು ಸಹೋದರ ದೀಪಕ್ ಆಕೆಯ ಕರೆಯ ಮೇರೆಗೆ ಮನೆಗೆ ಬಂದಿದ್ದಾರೆ. ನಂತರ ನಡೆದ ಗಲಾಟೆಯಲ್ಲಿ ಪೋಷಕರು ಮತ್ತು ಸಹೋದರ ಜಿತೇಂದ್ರನನ್ನು ತಡೆದು, ಅವನ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ಜ್ಯೋತಿ ಆತನ ಕತ್ತು ಹಿಸುಕಿ ಕೊಂದರು ಎಂದು ಪೊಲೀಸರು ಹೇಳಿದ್ದಾರೆ. ಜಿತೇಂದ್ರ ಉಸಿರುಬಿಟ್ಟ ನಂತರ ಜ್ಯೋತಿ ಹಾಗೂ ಆಕೆಯ ಪೋಷಕರು ಕೊಲೆಯ ಸಾಕ್ಷ್ಯವನ್ನು ಅಳಿಸಲು ಆರಂಭಿಸಿದ್ದಾರೆ. ಕಿಟಕಿಯ ಗ್ರಿಲ್‌ಗೆ ಆತನನ್ನು ನೇತು ಹಾಕಿ ಆತ ಸಾವಿಗೆ ಶರಣಾಗಿದ್ದಾನೆ ಎಂದು ಅಕ್ಕಪಕ್ಕದ ಮನೆಗಳಿಗೆ ಹೇಳಿದ್ದಾರೆ.

ಜನವರಿ 26 ರಂದು ಪೊಲೀಸರು ಸ್ಥಳಕ್ಕೆ ತಲುಪಿದಾಗ, ಆರಂಭದಲ್ಲಿ ಸಾವನ್ನು ಆತ್ಮ*ಹತ್ಯೆ ಎಂದೇ ಪರಿಗಣಿಸಲಾಗಿತ್ತು. ಜಿತೇಂದ್ರ ಅವರ ದೇಹವು ಬಾಡಿಗೆ ವಸತಿಗೃಹದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆ ಹೇಳಿಕೆಗೆ ವಿರುದ್ಧವಾಗಿ ಅಲ್ಲಿ ಯಾವುದೇ ತಕ್ಷಣದ ಚಿಹ್ನೆಗಳು ಇರಲಿಲ್ಲ. ಆದರೆ ಜಿತೇಂದ್ರ ಅವರ ಸಹೋದರ ಅಜಯ್ ಕುಮಾರ್ ದೂರು ದಾಖಲಿಸಿದ ನಂತರ ಪೊಲೀಸರು ಜ್ಯೋತಿ ಮತ್ತು ಇತರ ಮೂವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆಗೆ ಆದೇಶಿಸಿದಾಗ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.

ಇದನ್ನೂ ಓದಿ: ಪಕ್ಕದಲ್ಲಿ ಬೋರ್ ಕೊರೆಸುತ್ತಿದ್ದಾಗ ನೆರೆಮನೆಯ ಒಳಗೆ ನೆಲ ಸೀಳಿ ಚಿಮ್ಮಿದ ನೀರು: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಈ ಪ್ರಕರಣದಲ್ಲಿ ಜ್ಯೋತಿಯ ಸಹೋದರ ದೀಪಕ್ ಅವರನ್ನೂ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಆತನನ್ನು ಪತ್ತೆಹಚ್ಚಿ ಬಂಧಿಸಲು ಪ್ರಯತ್ನಗಳು ಮುಂದುವರೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಜ್ಯೋತಿ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಮತ್ತು ತನ್ನ ಪತಿಯ ಸಾವಿಗೆ ಕಾರಣವಾದ ಘಟನೆಗಳ ವಿವರಗಳನ್ನು ನೀಡಿದ್ದಾಳೆ. ತಾನು ಮತ್ತು ಜಿತೇಂದ್ರ ತಮ್ಮ ವಿದ್ಯಾರ್ಥಿ ದಿನಗಳಿಂದಲೂ ಪರಸ್ಪರ ಪರಿಚಿತರು ಎಂದು ಆಕೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಜಿತೇಂದ್ರ ಬರೇಲಿಯಲ್ಲಿರುವ ಪ್ರಮುಖ ಸರ್ಕಾರಿ ಸಂಶೋಧನಾ ಸಂಸ್ಥೆಯಾದ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ (IVRI)ಗುತ್ತಿಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದನು. ಜ್ಯೋತಿ, ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮದಲ್ಲಿ ಗುತ್ತಿಗೆ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.