ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ, ಹಣದ ಆಸೆಗಾಗಿ ಅಕ್ಷಯ್ ಎಂಬ ಯುವಕ ತನ್ನ ತಂದೆ, ತಾಯಿ ಮತ್ತು ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಶವಗಳನ್ನು ಮನೆಯಲ್ಲೇ ಹೂತುಹಾಕಿ, ಬೆಂಗಳೂರಿನಲ್ಲಿ ಸುಳ್ಳು ದೂರು ನೀಡಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾನೆ.
ಕೊಟ್ಟೂರು (ಜ.31): ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದ ಬೆಚ್ಚಿಬೀಳಿಸುವ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಮಾಹಿತಿ ಬಯಲಾಗಿದೆ. ಹಣದ ಆಸೆಗೆ ಅಕ್ಷಯ್ ಎಂಬ ಪಾಪಿ ಮಗನೊಬ್ಬ ತನ್ನನ್ನು ಸಾಕಿ ಸಲಹಿದ ತಂದೆ , ತಾಯಿ ಜಯಲಕ್ಷ್ಮಿ, ಪ್ರೀತಿಯ ತಂಗಿ ಅಮೃತಾಳನ್ನೂ ಬಿಡದೆ ಬರ್ಬರವಾಗಿ ಹತ್ಯೆಗೈದಿದ್ದಾನೆ. ಜನವರಿ 26 ರಂದು ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ, ಇತ್ತ ಅಕ್ಷಯ್ ತನ್ನ ಮನೆಯಲ್ಲಿ ರಕ್ತದೋಕುಳಿ ಆಡಿದ್ದಾನೆ.
'ಗಿಫ್ಟ್ ತಂದಿದ್ದೀನಿ ಬಾ' ಎಂದು ಕರೆದು ತಂಗಿಯ ಕೊಲೆ!
ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿರುವ ಮಾಹಿತಿ ಕೇಳಿದರೆ ಎಂತಹವರಿಗೂ ಮೈ ನಡುಗುತ್ತದೆ. ಮೊದಲು ತಾಯಿ ಬಳಿ ಹಣ ಕೇಳಿದ್ದ ಅಕ್ಷಯ್, ಆಕೆ ಹಣ ಕೊಡಲು ನಿರಾಕರಿಸಿದಾಗ ತಂದೆ ಮತ್ತು ತಂಗಿ ಮನೆಯಿಂದ ಹೊರಗೆ ಹೋಗಿದ್ದ ಸಮಯ ನೋಡಿ ತಾಯಿಯ ಕತ್ತು ಸೀಳಿದ್ದಾನೆ. ಬಳಿಕ ತಂಗಿ ಅಮೃತಾಗೆ ಫೋನ್ ಮಾಡಿ, 'ನಿನಗೆ ಸರ್ಪ್ರೈಸ್ ಗಿಫ್ಟ್ ತಂದಿದ್ದೇನೆ, ಬೇಗ ಮನೆಗೆ ಬಾ' ಎಂದು ನಂಬಿಸಿ ಕರೆಸಿಕೊಂಡಿದ್ದಾನೆ. ಮನೆಗೆ ಬಂದ ತಂಗಿಯನ್ನೂ ಅದೇ ರೀತಿ ಕ್ರೂರವಾಗಿ ಕೊಲೆ ಮಾಡಿ, ಇಬ್ಬರ ಶವಗಳನ್ನು ಕೊಠಡಿಯಲ್ಲಿ ಬಚ್ಚಿಟ್ಟಿದ್ದಾನೆ.
ತಂದೆಯ ಕಾಲು ಕತ್ತರಿಸಿ ಗುಂಡಿಗೆ ತುಂಬಿದ ವಿಕೃತ ಹಂತಕ!
ಕೊನೆಯದಾಗಿ ಮನೆಗೆ ಬಂದ ತಂದೆಯನ್ನ ಕತ್ತು ಸೀಳಿ ಹತ್ಯೆ ಮಾಡಿದ ಅಕ್ಷಯ್, ಬಳಿಕ ಸಾಕ್ಷ್ಯ ನಾಶಪಡಿಸಲು ಮನೆಯ ಹಾಲ್‌ನಲ್ಲೇ ಗುಂಡಿ ತೋಡಿದ್ದಾನೆ. ಮೂರು ಶವಗಳನ್ನು ಒಂದೇ ಗುಂಡಿಯಲ್ಲಿ ಮುಚ್ಚಲು ಯತ್ನಿಸಿದಾಗ ತಂದೆಯ ದೇಹ ಗುಂಡಿಯಲ್ಲಿ ಕೂರದಿದ್ದಕ್ಕೆ, ತಂದೆಯ ಕಾಲುಗಳನ್ನೇ ಕತ್ತರಿಸಿದ ವಿಕೃತಿ ಮೆರೆದಿದ್ದಾನೆ. ಬಳಿಕ ಆ ಗುಂಡಿಯನ್ನು ಮುಚ್ಚಿ ಏನೂ ತಿಳಿಯದವನಂತೆ ಬೆಂಗಳೂರಿಗೆ ಪರಾರಿಯಾಗಿದ್ದಾನೆ.
ಬೆಂಗಳೂರಿಗೆ ಬಂದು ಎಂತಾ ಕಥೆ ಕಟ್ಟಿದ್ದ ಗೊತ್ತಾ ಅಕ್ಷಯ್..!
ಕೊಲೆ ಮಾಡಿ ಬೆಂಗಳೂರಿಗೆ ಬಂದ ಅಕ್ಷಯ್, ಜ.29ರಂದು ತಿಲಕನಗರ ಪೊಲೀಸ್ ಠಾಣೆಗೆ ಹೋಗಿ ದೊಡ್ಡ ನಾಟಕವಾಡಿದ್ದಾನೆ. 'ನನ್ನ ತಂದೆಗೆ ಹೃದಯ ಸಂಬಂಧಿ ಕಾಯಿಲೆ ಇತ್ತು, ಜಯದೇವ ಆಸ್ಪತ್ರೆಗೆ ಚಿಕಿತ್ಸೆಗೆ ಬಂದವರು ನಾಪತ್ತೆಯಾಗಿದ್ದಾರೆ. ಅವರ ಬಳಿ 4 ಲಕ್ಷ ಹಣವಿತ್ತು' ಎಂದು ಸುಳ್ಳು ಕಥೆ ಕಟ್ಟಿದ್ದಾನೆ. ಪೊಲೀಸರಿಗೆ ನಂಬಿಕೆ ಬರಲಿ ಎಂದು ಆಸ್ಪತ್ರೆಯ ಪಿಲ್ಲರ್ ಫೋಟೋಗಳನ್ನು ತೋರಿಸಿ ದೂರು ದಾಖಲಿಸಿದ್ದ. ಇವನ ಮಾತು ನಂಬಿದ ಪೊಲೀಸರು ರಾತ್ರಿಯಿಡೀ ಆಸ್ಪತ್ರೆಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ.
ಪೊಲೀಸ್ 'ಸ್ಟೈಲ್' ವಿಚಾರಣೆಯಲ್ಲಿ ಬಯಲಾಯ್ತು ರಹಸ್ಯ!
ಜ.30ರಂದು ಎಸಿಪಿ ವಾಸುದೇವ್ ನೇತೃತ್ವದಲ್ಲಿ ಅಕ್ಷಯ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಸತ್ಯ ಹೊರಬಂದಿದೆ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಆರಂಭಿಸುತ್ತಿದ್ದಂತೆ ಪತರುಗುಟ್ಟಿದ ಅಕ್ಷಯ್, ತಾನೇ ಹೆತ್ತವರನ್ನು ಕೊಂದು ಮನೆಯಲ್ಲೇ ಹೂತು ಹಾಕಿದ್ದನ್ನು ಒಪ್ಪಿಕೊಂಡಿದ್ದಾನೆ. ಮಗನ ಮಾತನ್ನು ಕೇಳಿ ಖುದ್ದು ಪೊಲೀಸರೇ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ.


