ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಖಾಸಗಿ ಫ್ಲಾಟ್‌ವೊಂದರಲ್ಲಿ ಬೋರ್‌ವೆಲ್ ಕೊರೆಯುತ್ತಿದ್ದಾಗ, ಒತ್ತಡ ಹೆಚ್ಚಾಗಿ ಪಕ್ಕದ ಮನೆಯ ಟೈಲ್ಸ್ ಹಾಕಿದ್ದ ನೆಲವೇ ಒಡೆದು ನೀರು ಮಹಡಿಯತ್ತರಕ್ಕೆ ಚಿಮ್ಮಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಬೋರ್ ಕೊರೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಒಪನ್ ಆಯ್ತು ಪಕ್ಕದ ಮನೆಯ ನೆಲಹಾಸು

ಬೋರ್ ಕೊರೆಯುತ್ತಿದ್ದಾಗ ನೀರು ಬಾನೆತ್ತರಕ್ಕೆ ಚಿಮ್ಮುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಕಡೆ ಪಕ್ಕದಲ್ಲಿ ಬೋರು ಕೊರೆಸುತ್ತಿದ್ದ ವೇಳೆ ನೆರೆಮನೆಯ ಟೇಲ್ಸ್ ಹಾಕಿದ್ದ ನೆಲವೇ ತೆರೆದುಕೊಂಡು ಮಹಡಿಯೆತ್ತರಕ್ಕೆ ನೀರು ಚಿಮ್ಮಿದ ಘಟನೆ ನಡೆದಿದ. ಈ ವಿಚಿತ್ರ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಈ ಘಟನೆ ನಡೆದಿದೆ. ಬಿಲಾಸ್‌ಪುರದ ಖಾಸಗಿ ಫ್ಲಾಟ್‌ವೊಂದರಲ್ಲಿ ನೀರಿಗಾಗಿ ಬೋರ್ ತೆಗೆಯುವ ಕೆಲಸ ನಡೆಯುತ್ತಿತ್ತು. ಭಾರೀ ಯಂತ್ರಗಳು ಕೊರೆಯುವ ಕೆಲಸ ಮಾಡುತ್ತಿದ್ದಾಗ, ನೆಲದ ಕೆಳಗೆ ಹೆಚ್ಚಿದ ಒತ್ತಡದಿಂದಾಗಿ ಪಕ್ಕದ ಬೋರ್ ಪೈಪ್ ಒಡೆದಿದೆ ಎಂದು ವರದಿಯಾಗಿದೆ. ಪರಿಣಾಮ ಟೇಲ್ಸ್ ಹಾಕಿದ್ದ ನೆಲವನ್ನೇ ಒಡೆದುಕೊಂಡು ನೀರು ಹೊರಗೆ ಚಿಮ್ಮಿದ್ದು, ಮಹಡಿಯತ್ತರಕ್ಕೆ ಕೆಸರು ನೀರು ಚಿಮ್ಮಿದೆ. ಜನವರಿ 31ರಂದು ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಈ ಘಟನೆಯಲ್ಲಿ ಅಚಾನಕ್ ಆಗಿ ಅನಾಹುತದಿಂದ ಪಾರಾಗಿದ್ದಾರೆ.

ಮಹಡಿಯೆತ್ತರಕ್ಕೆ ಚಿಮ್ಮಿದ ಕೆಸರು ನೀರು:

ಘಟನೆಯ ವೀಡಿಯೋ ಮನೆಗೆ ಹಾಕಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಮನೆಯಿಂದ ಹೊರಗೆ ಹೋಗುವುದಕ್ಕೆ ಎಂದು ಬ್ಯಾಗ್ ಹಿಡಿದು ಹೊರಗೆ ಬಂದು ನೋಡುವಾಗ ಗೇಟ್ ಪಕ್ಕದಲ್ಲಿ ನೀರು ಉಕ್ಕುತ್ತಿರುವುದು ಕಾಣಿಸಿದೆ. ಕೆಲ ನಿಮಿಷದಲ್ಲಿ ಅವರ ಪಕ್ಕದಲ್ಲಿಯೇ ಭೂಮಿ ಬಾಯ್ದೆರೆದುಕೊಂಡಿದ್ದು, ನೆಲಕ್ಕೆ ಹಾಕಿದ ಟೇಲ್ಸ್ ಒಡೆದು ಒಮ್ಮೆಲೇ ಕೆಸರು ನೀರು ಮೇಲೆ ಚಿಮ್ಮುವುದಕ್ಕೆ ಶುರುವಾಗಿದೆ. 

ಇದನ್ನೂ ಓದಿ: 

ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ಡೆಲಿವರಿ ಬಾಯ್‌ಗೆ ಟಿಪ್ಸ್‌ ನೀಡಿ ಶಾಕ್ ಕೊಟ್ಟ ಭಿಕ್ಷುಕ: : ವಿಡಿಯೋ ವೈರಲ್

ಕೂಡಲೇ ಅವರು ಮನೆಯೊಳಗೆ ಓಡಿ ಹೋಗಿದ್ದರಿಂದ ಪ್ರಾಣ ಉಳಿದಿದೆ. ಅವರ ಮನೆಯ ಸಮೀಪದಲ್ಲೇ ಬೇರೆಯವರು ಬೋರ್ ಕೊರೆಸುತ್ತಿದ್ದಾಗ ಒತ್ತಡ ಉಂಟಾಗಿ ಈ ಘಟನೆ ಸಂಭವಿಸಿದೆ. ಬಿಲಾಸ್‌ಪುರದ ಸ್ಯಾಟಲೈಟ್ ನಗರವಾದ ಉಲ್ಲಾಸ್‌ಪುರ ಸಮೀಪದ ಗೋಕುಲ್‌ಧಾಮ್ ಬಳಿ ಘಟನೆ ನಡೆದಿದೆ. ವರದಿಯ ಪ್ರಕಾರ, ಬೋರ್‌ವೆಲ್ ಕೊರೆಯುವಾಗ, ನೆಲದಡಿಯಲ್ಲಿ ಹೆಚ್ಚುವರಿ ಒತ್ತಡವು ನಿರ್ಮಾಣವಾಗುತ್ತದೆ ಮತ್ತು ಬೋರ್‌ವೆಲ್‌ಗಳ ಪರಸ್ಪರ ಸಂಪರ್ಕದ ಸ್ವಭಾವದಿಂದಾಗಿ, ಒತ್ತಡವು ಬದಲಾಗುತ್ತದೆ. ಪೈಪ್ ಒಡೆದ ನಂತರ, ಕೆಲವೇ ಸೆಕೆಂಡುಗಳಲ್ಲಿ, ಇಡೀ ಮನೆ ನೀರಿನಿಂದ ತುಂಬಿ ತುಳುಕುತ್ತಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಡ್ರೈವಿಂಗ್ ಹೇಳಿಕೊಡ್ತಿದ್ದ ಗಂಡ: ಬ್ರೇಕ್ ಬದಲು ಆಕ್ಸಿಲರೇಟ್ ಮೇಲೆ ಕಾಲಿಟ್ಟ ಪತ್ನಿ: ದೇಗುಲದ ಕೆರೆಗೆ ಬಿದ್ದ ಕಾರು

View post on Instagram