ಮೋದಿ ರಾಷ್ಟ್ರಪಿತ ಎಂದ ಫಡ್ನವೀಸ್ ಪತ್ನಿ: ಟ್ವಿಟ್ಟರ್ ರಿಯಾಕ್ಷನ್'ಗೆ ಚಟ್ನಿ!
ಮೋದಿ ರಾಷ್ಟ್ರಪೀತ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ| ಮೋದಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಲು ಹೋಗಿ ಅಮೃತಾ ಫಡ್ನವೀಸ್ ಯಡವಟ್ಟು| ಪ್ರಧಾನಿ ಮೋದಿ ಅವರನ್ನು ರಾಷ್ಟ್ರಪಿತ ಎಂದು ಕರೆದ ಅಮೃತಾ ಫಡ್ನವೀಸ್| ಮೋದಿ ಯಾವಾಗ ಮತ್ತು ಹೇಗೆ ರಾಷ್ಟ್ರಪಿತ ಆದರು ಎಂದು ಕೇಳಿದ ನೆಟಿಜನ್ಸ್| 'ನಿರುದ್ಯೋಗ, ಆರ್ಥಿಕ ಕುಸಿತದ ದಿನಗಳಿರುವಾಗ ಸಮಾಜ ನಿರ್ಮಾಣ ಹೇಗೆ ಸಾಧ್ಯ'| ಅಮೃತಾ ಫಡ್ನವೀಸ್ ಹೇಳಿಕೆ ಖಂಡಿಸಿದ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ|
ಮುಂಬೈ(ಸೆ.18): ಪ್ರಧಾನಿ ಮೋದಿ ಅವರನ್ನು ಅವರ ಅಭಿಮಾನಿಗಳು ಗೌರವಪೂರ್ವಕವಾಗಿ ವಿವಿಧ ರೀತಿಯಲ್ಲಿ ಸಂಭೋಧಿಸುವುದುಂಟು. ಕೆಲವರು ಮೋದಿ ಅವರನ್ನು ಶತಮಾನದ ಮಹಾನ್ ನಾಯಕ ಎಂದು ಕರೆದರೆ, ಮತ್ತೆ ಕೆಲವರು ಪ್ರಧಾನಿ ಅವರನ್ನು ವಿಶ್ವ ನಾಯಕ ಎಂದು ಹಾಡಿ ಹೊಗಳುವುದು ರೂಢಿ.
ಆದರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಟ್ವಿಟ್ಟರ್‌ನಲ್ಲಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ರಾಷ್ಟ್ರಪಿತ ಎಂದು ಕರೆಯುವ ಮೂಲಕ ಅಮೃತಾ ಫಡ್ನವೀಸ್, ಇದೀಗ ಹೊಸ ವಿವಾದ ಸೃಷ್ಟಿಸಿದ್ದಾರೆ.
ಮೋದಿ ಹುಟ್ಟುಹಬ್ಬದ ಅಂಗವಾಗಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದ ಅಮೃತಾ ಫಡ್ನವೀಸ್, ರಾಷ್ಟ್ರಪಿತ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಹೇಳಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಹಗಲಿರುಳು ದುಡಿಯಲು ಪ್ರಧಾನಿ ಮೋದಿ ನಮಗೆಲ್ಲ ಸ್ಪೂರ್ತಿ ಎಂದು ಅಮೃತಾ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.
ಸಾಮಾಜಿಕ ಜಾಲತಾಣಧಲ್ಲಿ ಅಮೃತಾ ಟ್ವೀಟ್'ನ್ನು ಟೀಕಿಸಿರುವ ಹಲವರು, ನಮ್ಮ ದೇಶಕ್ಕೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮೋದಿ ಯಾವಾಗ ಮತ್ತು ಹೇಗೆ ಈ ದೇಶದ ರಾಷ್ಟ್ರಪಿತ ಆದರು ಎಂದು ಹಲವರು ಕೇಳಿದ್ದು, ನಿರುದ್ಯೋಗ, ಆರ್ಥಿಕ ಕುಸಿತದ ಕರಾಳ ದಿನಗಳು ಕಣ್ಣು ಮುಂದಿರುವಾಗ ಸಮಾಜದ ಏಳಿಗೆ ಹೇಗೆ ಸಾಧ್ಯ ಎಂದು ಹರಿಹಾಯ್ದಿದ್ದಾರೆ.
ಇದೇ ವೇಳೆ ಅಮೃತಾ ಫಡ್ನವೀಸ್ ಹೇಳಿಕೆ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ, ದೇಶಕ್ಕೆ ಒಬ್ಬರೇ ರಾಷ್ಟ್ರಪಿತ ಅದು ಮಹಾತ್ಮಾ ಗಾಂಧಿಜೀ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಮೋದಿ ಅವರನ್ನು ಮೆಚ್ಚಿಸಲು, ಪ್ರಚಾರ ಪಡೆಯಲು ಅಮೃತಾ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದಿರುವ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರಪಿತ ಎಂದು ಬಿಜೆಪಿಯವರು ಭಾವಿಸುವುದಾದರೆ ಹಾಗೆಯೇ ಕರೆದುಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.