'ಒಬ್ಬರ ಆಡಂಬರದ ಹುಟ್ಟುಹಬ್ಬಕ್ಕಾಗಿ ಸಾವಿರಾರು ಜನ ಅಳುವಂತಾಯಿತು'!
'ಪ್ರಧಾನಿ ಮೋದಿ ಹುಟ್ಟುಹಬ್ಬದಿಂದ ಸಂಕಷ್ಟಕ್ಕೆ ಸಿಲುಕಿದ ಸಾವಿರಾರು ಜನ'| ನಿನ್ನೆ(ಸೆ.17)ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬ ಆಚರಣೆ| ಸರ್ದಾರ್ ಸರೋವರದ ಡ್ಯಾಂನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಪ್ರಧಾನಿ ಮೋದಿ| ಮೋದಿ ಹುಟ್ಟುಹಬ್ಬಕ್ಕಾಗಿ ಡ್ಯಾಂನ ನೀರಿನ ಮಟ್ಟ ಏರಿಸಿದ್ದ ಗುಜರಾತ್ ಸರ್ಕಾರ| 'ಮಧ್ಯಪ್ರದೇಶದ 3 ಜಿಲ್ಲೆಗಳ 193ಕ್ಕೂ ಹೆಚ್ಚು ಗ್ರಾಮಗಳು ಸಂಕಷ್ಟದಲ್ಲಿ'| ಸಾಮಾಜಿಕ ಕಾರ್ಯಕರ್ತೆ, ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್ ಆರೋಪ| 'ನಿಗದಿತ ದಿನಾಂಕಕ್ಕೂ ಮೊದಲೇ ನೀರು ಬಿಟ್ಟ ಪರಿಣಾಮ ಸಾವಿರಾರು ಜನರಿಗೆ ಸಂಕಷ್ಟ'|
ಭೋಪಾಲ್(ಸೆ.18): ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆಯ ಪರಿಯನ್ನು ಸಾಮಾಜಿಕ ಕಾರ್ಯಕರ್ತೆ, ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ ಮೇಧಾ ಪಾಟ್ಕರ್ ಟೀಕಿಸಿದ್ದಾರೆ.
ನಿನ್ನೆ(ಸೆ.17) ಪ್ರಧಾನಿ ಮೋದಿ 69ನೇ ವಸಂತಕ್ಕೆ ಕಾಲಿಟ್ಟಿದ್ದು, ಸ್ವರಾಜ್ಯ ಗುಜರಾತ್‌ನಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಮೋದಿ ಸರ್ದಾರ್ ಸರೋವರಕ್ಕೆ ಭೇಟಿ ನೀಡಿ ವಿಶೇಷ ಪೀಜೆ ಸಲ್ಲಿಸಿದ್ದರು.
ಆದರೆ ಮೋದಿಗೆ ಹುಟ್ಟುಹಬ್ಬಕ್ಕೆಂದು ಗುಜರಾತ್ ಸರ್ಕಾರ ಸರ್ದಾರ್ ಡ್ಯಾಂನ ನೀರಿನ ಮಟ್ಟವನ್ನು 138.68 ಮೀಟರ್‌ಗೆ ಹೆಚ್ಚಳ ಮಾಡಿತ್ತು. ಇದರಿಂದ ಮಧ್ಯಪ್ರದೇಶದ 3 ಜಿಲ್ಲೆಗಳ 193ಕ್ಕೂ ಹೆಚ್ಚು ಗ್ರಾಮಗಳು ಸಂಕಷ್ಟ ಅನುಭವಿಸುವಂತಾಯಿತು.
ಡ್ಯಾಂನ ನೀರಿನ ಮಟ್ಟವನ್ನು 138.68 ಮೀಟರ್ ಏರಿಸಿದ ಪರಿಣಾಮ ಮಧ್ಯಪ್ರದೇಶದ ಧಾರ್, ಬರ್ವಾನಿ, ಅಲಿರಾಜ್'ಪುರ್ ಜಿಲ್ಲೆಗಳ 193ಕ್ಕೂ ಹೆಚ್ಚು ಗ್ರಾಮಗಳಿಗೆ ಹೆಚ್ಚುವರಿ ನೀರು ನುಗ್ಗಿತ್ತು. ಈ ಹಿಂದೆ ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಸರ್ದಾರ್ ಡ್ಯಾಂನ್ನು ಎತ್ತರಿಸುವ ನಿರ್ಣಯ ಕೈಗೊಂಡ ಬಳಿಕ, ಸಂತ್ರಸ್ತ ಕುಟುಂಬಗಳಿಗೆ ಇದುವರೆಗೂ ಪುನರ್ವಸತಿ ಕಲ್ಪಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅದರಂತೆ ಮೋದಿ ಹುಟ್ಟುಹಬ್ಬದ ಪರಿ ಟೀಕಿಸಿರುವ ಮೇಧಾ ಪಾಟ್ಕರ್, ಪ್ರಧಾನಿ ಅವರನ್ನು ಸಂತೋಷಗೊಳಿಸಲು ಸಾವಿರಾರು ಜನರನ್ನು ಸಂಕಷ್ಟಕ್ಕೆ ಗುರಿಪಡಿಸಲಾಗಿದೆ ಎಂದು ಹರಿಹಾಯ್ದರು. ಅಲ್ಲದೇ ಮೋದಿ ಹುಟ್ಟುಹಬ್ಬದ ನೆಪದಲ್ಲಿ ನಿಗದಿತ ದಿನಾಂಕಕ್ಕೂ ಮೊದಲೇ ನೀರಿನ ಮಟ್ಟ ಏರಿಸಿ ಸಾವಿರಾರು ಜನರಿಗೆ ತೊಂದರೆ ನೀಡಲಾಯಿತು ಎಂದೂ ಮೇಧಾ ಪಾಟ್ಕರ್ ಹರಿಹಾಯ್ದಿದ್ದಾರೆ.
ಈ ಮೊದಲು ಗುಜರಾತ್ ರೂಪಾನಿ ಸರ್ಕಾರ ಅಕ್ಟೋಬರ್ 15ರಂದು ಡ್ಯಾಂ ಪೂರ್ಣವಾಗಿ ತುಂಬಲಿದೆ ಎಂದು ಹೇಳಿತ್ತು. ನಂತರ ಸೆ.30ರ ದಿನಾಂಕ ನೀಡಲಾಯಿತು. ಇದೀಗ ಏಕಾಏಕಿ ಮೋದಿ ಹುಟ್ಟುಹಬ್ಬದ ನೆಪದಲ್ಲಿ ಸೆ.17ರಂದೇ ನೀರು ಬಿಡಲಾಗಿದೆ ಎಂದು ಮೇಧಾ ಪಾಟ್ಕರ್ ಗಂಭೀರ ಆರೋಪ ಮಾಡಿದ್ದಾರೆ.