Asianet Suvarna News Asianet Suvarna News

ಇಹಲೋಕದ ಯಾತ್ರೆ ಮುಗಿಸಿದ ಶತಮಾನದ ಸಂತ

'ನಡೆದಾಡುವ ದೇವರು' ಆದರ್ಶಗಳ ಮೂಟೆಯನ್ನು ನಮ್ಮ ಮುಂದಿಟ್ಟು ದೇವರತ್ತ ನಡೆದಿದ್ದಾರೆ. ಅವರ ನಿಸ್ವಾರ್ಥ ಸೇವೆ ಎಂಬ ಪಾಠ ಶಾಲೆಗೆ ನಾವೆಲ್ಲರೂ ದಾಖಲಾಗಬೇಕಿದೆ. ಇನ್ನು ಮುಂದೆ ಸ್ವಾಮೀಜಿ ಗದ್ದುಗೆಯಿಂದಲೇ ಭಕ್ತರಿಗೆ ಸದಾ ಆಶೀರ್ವದಿಸಲಿದ್ದಾರೆ.

Tumakur Siddaganga swamiji Laid to rest lakhs of devotees pay homage
Author
Bengaluru, First Published Jan 22, 2019, 8:30 PM IST

ತುಮಕೂರು [ಜ.22]  ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕಾಯಕಯೋಗಿ, ಕರ್ನಾಟಕ ರತ್ನ, ನಿಷ್ಕಾಮಯೋಗಿ, ಲೋಕ ಜಂಗಮ, ಸಂತ ಶರಣ  ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಹಲೋಕದ ಯಾತ್ರೆ ಮುಗಿಸಿ, ಕೈಲಾಸದತ್ತ ಹೆಜ್ಜೆ ಹಾಕಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಆಧುನಿಕ ಬಸವಣ್ಣನನ್ನು ಭಕ್ತಿ ಹಾಗೂ ಭಾರವಾದ ಹೃದಯದೊಂದಿಗೆ, ಶಾಂತ ಚಿತ್ತರಾಗಿಯೇ ಕರುನಾಡ ಜನತೆ ಬೀಳ್ಕೊಟ್ಟರು. 

ಜನವರಿ 21, ಸೋಮವಾರದಂದು ಬೆಳಗ್ಗೆ 11.44ಕ್ಕೆ ಶಿವಕುಮಾರ ಸ್ವಾಮೀಜಿ ಅವರು ಭೌತಿಕವಾಗಿ ಈ ಜಗತ್ತನ್ನು ತೊರೆದರು. ಮಧ್ಯಾಹ್ನ 1.56ಕ್ಕೆ ಸ್ವಾಮೀಜಿಯವರ ಅಗಲಿಕೆ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. 

ಸಿದ್ಧಗಂಗಾ ಶ್ರೀಗಳ ಜೊತೆ 41 ವರ್ಷ ಸೇವೆ ಸಲ್ಲಿಸಿದ ಕಾರು ಚಾಲಕನ ಮಾತನ್ನು ಕೇಳಿ

ಲಕ್ಷಾಂತರ ಭಕ್ತರಿಂದ ದರ್ಶನ:ಸೋಮವಾರ ಮಧ್ಯಾಹ್ನದಿಂದಲೇ ಸ್ವಾಮೀಜಿಗಳ ದರ್ಶನಕ್ಕೆ ಎಲ್ಲೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸತೊಡಗಿದರು. ರಾಜ್ಯದ ಮೂಲೆ ಮೂಲೆಗಳಿಂದಲೂ ತುಮಕೂರು ಸಿದ್ಧಗಂಗಾ ಮಠಕ್ಕೆ ಆಗಮಿಸಿದ ಭಕ್ತರು, ಲೋಕ ಜಂಗಮನ ಅಂತಿಮ ದರ್ಶನ ಪಡೆದರು. 

ಆರು ಅಡಿ ಎತ್ತರದ  ರುದ್ರಾಕ್ಷಿ ಪಲ್ಲಕ್ಕಿಯಲ್ಲಿ ಶ್ರೀಗಳ ಮೆರವಣಿಗೆ ಮಾಡಲಾಯಿತು.  ಭಕ್ತ ಕೋಟಿಯ ಜಯಘೋಷದ ನಡುವೆ, ರಾಜ್ಯದ ಸಚಿವರು ಹಾಗೂ ಇತರೆ ಗಣ್ಯರ ಸಮ್ಮುಖದಲ್ಲಿ ಸರ್ಕಾರಿ ಗೌರವ ಸಲ್ಲಿಸಲಾಯಿತು.

ಶ್ರೀಗಳ ಇಚ್ಛೆಯಂತೆ 3 ತಿಂಗಳ ಮೊದಲೇ ಸಜ್ಜಾಗಿದ್ದ ಸಿದ್ಧಗಂಗೆ

ತಮ್ಮ ಜೀವನವನ್ನೇ ಪಾಠಶಾಲೆಯನ್ನಾಗಿಸಿದ್ದ, ಬದುಕನ್ನೇ ಪುಸ್ತಕವನ್ನಾಗಿಸಿದ್ದ, ಸರಳ ಜೀವನದಲ್ಲೇ ಪ್ರತಿಯೊಬ್ಬರಿಗೂ ಆದರ್ಶಪ್ರಾಯರಾಗಿದ್ದು ಸ್ವಾಮೀಜಿ  ಕ್ರಿಯಾ ಸಮಾಧಿಯಲ್ಲಿ ಲೀನವಾಗಿದ್ದಾರೆ. ತಮ್ಮಿಚ್ಛೆಯಂತೆ ಲೋಕ ಕಲ್ಯಾಣಕ್ಕಾಗಿ ಬದುಕಿ, ಸಾರ್ಥಕ ಜೀವನ ಸವೆಸಿದ ಈ ಶತಮಾನದ ಸಂತ ಈ ಗದ್ದುಗೆಯಿಂದಲೇ ಇನ್ನು ಮುಂದೆ ಎಲ್ಲರನ್ನೂ ಆಶೀರ್ವದಿಸಲಿದ್ದಾರೆ. 

ಬಾಳೆ ಎಲೆ ಹಾಸಿ,  ಬಾಳೆ ಎಲೆ ಮೇಲೆ ಉಪ್ಪು ಹಾಕಿ ಗದ್ದುಗೆ ಒಳಗೆ ನಿರ್ಮಿಸಿರುವ ಮೂರು ಮೆಟ್ಟಲುಗಳಲ್ಲಿ ಶ್ರೀಗಳಿಗೆ ಅಭಿಷೇಕ ಮಾಡಲಾಯಿತು. ಬಳಿಕ ಗದ್ದುಗೆಯಲ್ಲಿ ಪದ್ಮಾಸನ ಸ್ಥಿತಿಯಲ್ಲಿ ಶ್ರೀಗಳನ್ನು ಕುಳ್ಳರಿಸಿ, ಶ್ರೀಗಳಿಗೆ ರುದ್ರಾಭಿಷೇಕ ನಡೆಸಲಾಯಿತು. ಶ್ರೀಗಳ ಬಳಿ ಇದ್ದ ಆತ್ಮ ಲಿಂಗಕ್ಕೂ ರುದ್ರಾಭಿಷೇಕ ನಡೆಸಲಾಯಿತು. ಬಳಿಕ ವಿಭೂತಿ, ಬಿಲ್ವ ಪತ್ರೆಯೊಂದಿಗೆ ಬುದ್ಧನ ಕಾರುಣ್ಯವಿದ್ದ ಸಂತ ಕ್ರಿಯಾ ಸಮಾಧಿ ಸೇರಿದರು.

ಶ್ರೀಗಳು ಐಕ್ಯರಾಗುವ ಗದ್ದುಗೆ ವಿಶೇಷತೆ ಏನು..?

ಗಣ್ಯರ ಉಪಸ್ಥಿತಿ: ಮುಖ್ಯಮಂತ್ರಿ ಕುಮಾರಸ್ವಾಮಿ, ರಾಜ್ಯಪಾಲ ವಿ.ಆರ್‌.ವಾಲಾ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಬಿ.ಎಸ್‌. ಯಡಿಯೂರಪ್ಪ, ಸಿದ್ದರಾಮಯ್ಯ, ಸೋಮಣ್ಣ ಸೇರಿ ಹಲವು ಗಣ್ಯರು ಶ್ರೀಗಳು ಲಿಂಗೈಕ್ಯರಾಗುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. 

ಕನ್ನಡಿಗರ ಸಹನೆಗೆ ನಮೋ ನಮಃ: ಶ್ರೀಗಳ ಅಂತಿಮ ಯಾತ್ರೆಯಲ್ಲಿ ಶಾಂತಿಯಿಂದ ವರ್ತಿಸಿದ ಮಹಾ ಜನತೆಗೂ ಧನ್ಯವಾದ ಹೇಳಲೇಬೇಕಿದೆ. ಅಂತಿಮ ದರ್ಶನಕ್ಕೆ ಆಗಮಿಸಿದ ಪ್ರತಿಯೊಬ್ಬರೂ ಶಾಂತ ಚಿತ್ತರಾಗಿ, ಸಹನೆಯಿಂದ ವರ್ತಿಸಿ, ಭಕ್ತಿ ಪೂರ್ವಕ ನಮನ ಸಲ್ಲಿಸಿ, ಶ್ರೀಗಳ ಕೃಪೆಗೆ ಪಾತ್ರರಾದರು.

ಧರೆಯಲ್ಲಿ ಅಳಿಯದ ಇತಿಹಾಸ ಬರೆದ ಸಿದ್ಧಗಂಗಾ ಶ್ರೀಗಳು

ನಡೆದಾಡುವ ದೇವರು ಇನ್ನೊಂದು  ಲೋಕಕ್ಕೆ ಬೆಳಕು ನೀಡಲು ತೆರಳಿದ್ದಾರೆ.  ಅವರ ಬದುಕಿನ 111 ವರ್ಷಗಳ ಪುಸ್ತಕದ ಕೊನೆ ಪುಟ ಉಪಸಂಹಾರ ಆಗಿದೆ. ಹೊಸದಾಗಿ ಮತ್ತೆ ಪುಸ್ತಕ ಓದಲು ಪ್ರತಿಯೊಬ್ಬರೂ ಆರಂಭಿಸಬೇಕಿದೆ. ಅವರ ಆದರ್ಶಗಳು ಮಾತ್ರ ಎಂದೆಂದಿಗೂ ಪ್ರಸ್ತುತ.

Follow Us:
Download App:
  • android
  • ios