ತುಮ​ಕೂರು :  ‘ನಡೆದಾಡುವ ದೇವರು’ ಶಿವಕುಮಾರ ಸ್ವಾಮೀಜಿ ಅವರು ತಮ್ಮ ದಿವ್ಯ ಹೆಜ್ಜೆಗಳಿಂದಲೇ ಅಳತೆ ಸೂಚಿಸಿ, ಅಡಿಗಲ್ಲು ಹಾಕಿದ್ದ ಐಕ್ಯಸ್ಥಳವಾದ ಗದ್ದುಗೆ ಇದೀಗ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಹಳೆಯ ಮಠಕ್ಕೆ ಅಂಟಿಕೊಂಡಂತೆ ಗದ್ದುಗೆ ನಿರ್ಮಾಣಗೊಂಡಿದ್ದು, ಶ್ರೀಗಳು ಇದೇ ಸ್ಥಳದಲ್ಲಿ ಲಿಂಗೈಕ್ಯವಾಗಿ ಲಿಂಗದ ರೂಪದಲ್ಲಿ ದರ್ಶನ ನೀಡಲಿದ್ದಾರೆ.

ದ್ವಾರದಲ್ಲಿ ಸಿದ್ಧಗಂಗಾ ಕ್ಷೇತ್ರಕ್ಕೆ ಭಕ್ತಿಯ ಭಸ್ಮ ಲೇಪಿಸಿದ ಶ್ರೀ ಅಟವಿ ಸ್ವಾಮೀಜಿಗಳು, ಸಿದ್ಧಿಯ ಪುಷ್ಪ ಮುಡಿಸಿದ ಶಿವಕುಮಾರ ಸ್ವಾಮೀಜಿ ಅವರ ಗುರುಗಳೂ ಆದ ಉದ್ಧಾನ ಶಿವಯೋಗಿಗಳ ಮೂರ್ತಿಗಳ ಪ್ರತಿಷ್ಠಾಪನೆಯಾಗಲಿದ್ದು, ಗರ್ಭಗುಡಿಯೊಳಗೆ ಶ್ರೀಗಳು ಲಿಂಗೈಕ್ಯರಾಗಲಿದ್ದಾರೆ.

ಶ್ರೀಗಳೇ ಸೂಚಿಸಿದ್ದರು:

70 ದಶಕದಲ್ಲಿ ಎಪ್ಪತ್ತನೇ ವರ್ಷದಲ್ಲಿದ್ದಾಗಲೇ ಶ್ರೀಗಳು ತಾವು ಐಕ್ಯವಾಗುವ ಸ್ಥಳವನ್ನು ಸೂಚಿಸಿದ್ದರು. ಸ್ವಾಮೀಜಿಗಳು ಐಕ್ಯವಾಗಲು ಸ್ಥಳ ಹುಡುಕುತ್ತಿದ್ದಾಗ ಅವರ ಹಿರಿಯ ಗುರುಗಳು ನೀರೆರೆದು ಪೋಷಿಸಿದ್ದ ಬೃಹತ್‌ ಆಲದ ಮರ ರಾತ್ರೋರಾತ್ರಿ ನೆಲಕ್ಕುರುಳಿತ್ತು. ಇದೇ ಸ್ಥಳ ಆಯ್ದುಕೊಂಡು 39 ವರ್ಷಗಳ ಹಿಂದೆ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗುವ ಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಕಾರಣಾಂತರಗಳಿಂದ ನಡುವೆ ನಿಧಾನಗತಿಯಲ್ಲಿ ಸಾಗಿದ್ದ ಕಾಮಗಾರಿ ಇತ್ತೀಚೆಗೆ ವೇಗ ಪಡೆದಿದ್ದು ಶ್ರೀಗಳು ಲಿಂಗೈಕ್ಯರಾಗುವ ವೇಳೆಗೆ.

ಇಪ್ಪತ್ತಾರು ದೇವರು ಬಾಗಿಲ ಕಾಯ್ಪರು:

ಶ್ರೀಗಳು ಲಿಂಗೈಕ್ಯರಾಗಲಿರುವ ಗದ್ದುಗೆಯ ಗರ್ಭಗುಡಿ ಶಿಲಾಬಾಗಿಲ ಮೇಲೆ ಇಪ್ಪತ್ತಾರು ದೇವರು, ದೇವ ಸಮಾನರ ಮೂರ್ತಿಗಳನ್ನು ಕೆತ್ತಲಾಗಿದೆ. ಬಾಗಿಲ ಶಿರಸ್ಥಾನದಲ್ಲಿ ಶ್ರೀಗಳ ಮೂರ್ತಿ ಕೆತ್ತಲಾಗಿದೆ. ಬಾಗಿಲ ಎಡ, ಬಲ ಭಾಗದಲ್ಲಿ ಅಷ್ಟದಿಕ್ಪಾಲಕರು, ಸಿದ್ಧಗಂಗಾ ಮಠದ ಆರಾಧ್ಯ ದೈವ ಸಿದ್ಧಲಿಂಗೇಶ್ವರ ಸ್ವಾಮೀಜಿ, ಜಗಜ್ಯೋತಿ ಬಸವಣ್ಣ, ಲಿಂಗೈಕ್ಯ ಗೋಸಲ ಸಿದ್ದೇಶ್ವರ, ಯಡಿಯೂರು ಸಿದ್ದಲಿಂಗೇಶ್ವರ, ಉದ್ಧಾನ ಶಿವಯೋಗಿ, ಅಟವಿ ಶಿವಯೋಗಿ, ಬೇಡರ ಕಣ್ಣಪ್ಪ, ಅಕ್ಕ ಮಹಾದೇವಿ, ಸಿದ್ಧಗಂಗಾ ಮಾತೆ ಸೇರಿದಂತೆ ಇಪ್ಪತ್ತಾರು ಮೂರ್ತಿಗಳನ್ನು ಕೆತ್ತಲಾಗಿದೆ.

ಹವಾನಿಯಂತ್ರಿತ ಗರ್ಭಗುಡಿ

ಶ್ರೀಗಳು ಲಿಂಗೈಕ್ಯರಾಗಲಿರುವ ಗರ್ಭಗುಡಿಯಲ್ಲಿ ಹನ್ನೆರಡು ಅಡಿ ಆಳದ ಸಮಾಧಿ ಗುಂಡಿ ತೆಗೆಯಲಾಗಿದೆ. ಸಮಾಧಿಯ ಸುತ್ತಳತೆಯನ್ನು ಶ್ರೀಗಳೇ ತಮ್ಮ ಹೆಜ್ಜೆಗಳಿಂದ ಅಳತೆ ಮಾಡಿ ನೀಡಿದ್ದರು. ಸಮಾಧಿ ಗುಂಡಿಗಿಳಿಯಲು ಮೂರು ಮೆಟ್ಟಿಲು ಮಾಡಿದ್ದು, ಮಂಗಳವಾರ ಸಂಜೆ ಶ್ರೀಗಳು ಇಲ್ಲಿ ವಿಭೂತಿಯಲ್ಲಿ ಸಮಾಧಿಯಾಗಲಿದ್ದಾರೆ. ಬಳಿಕ ಶ್ರೀಗಳ ಹೆಸರಿನಲ್ಲಿ ಗದ್ದುಗೆ ಪ್ರತಿಷ್ಠಾಪಿಸಿ, ಲಿಂಗ ಸ್ಥಾಪನೆ ಮಾಡಲಾಗುತ್ತದೆ. ಈ ಗರ್ಭಗುಡಿಗೆ ಎರಡು ಎ.ಸಿ. ಅಳವಡಿಕೆ ಮಾಡಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳು ಐಕ್ಯರಾಗುವ ಮಂದಿರವನ್ನು ಶ್ವೇತವರ್ಣದ ಕಲ್ಲುಗಳಿಂದ ಸುಂದರವಾಗಿ ನಿರ್ಮಿಸಲಾಗಿದ್ದು, ಇದೇ ಆವರಣ ಇನ್ನು ಮುಂದೆ ಭಕ್ತಾದಿಗಳಿಗೆ ಸತ್ಕಾರ್ಯಗಳಿಗೆ ಪ್ರೇರಣೆಯಾಗಲಿದೆ ಎನ್ನುತ್ತಾರೆ ಸಿದ್ಧಗಂಗಾ ಟಿಸಿಎಚ್‌ ಕಾಲೇಜು ನಿವೃತ್ತ ಪ್ರಾಂಶುಪಾಲ ಎಂ.ಎನ್‌.ಚಂದ್ರಶೇಖರಯ್ಯ.

ವರದಿ :  ಶ್ರೀಕಾಂತ ಎನ್‌.ಗೌಡಸಂದ್ರ