Asianet Suvarna News Asianet Suvarna News

ವರದಿಯಲ್ಲೇ ಕಳೆದುಹೋದ ಕನ್ನಡಿಗರ ಉದ್ಯೋಗ!, 33 ವರ್ಷವಾದ್ರೂ ಶಿಫಾರಸು ಅನುಷ್ಠಾನವಿಲ್ಲ!

ವರದಿಯಲ್ಲೇ ಕಳೆದುಹೋದ ಕನ್ನಡಿಗರ ಉದ್ಯೋಗ!| ಸರೋಜಿನಿ ಮಹಿಷಿ ವರದಿ ಸಲ್ಲಿಕೆಯಾಗಿ 33 ವರ್ಷ| 1990ರಿಂದ ಪ್ರಯತ್ನ ಆರಂಭವಾದರೂ ಒಂದೂ ಶಿಫಾರಸು ಅನುಷ್ಠಾನವಿಲ್ಲ

Employment Reservation To kannadigas Is Limited In Reports
Author
Bangalore, First Published Aug 10, 2019, 8:09 AM IST

ಲಿಂಗರಾಜು ಕೋರಾ

ಬೆಂಗಳೂರು[ಆ.10]: ರಾಜ್ಯದಲ್ಲಿ ಸ್ಥಳೀಯರಿಗೆ ಅರ್ಥಾತ್‌ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ‘ಡಾ.ಸರೋಜಿನಿ ಮಹಿಷಿ ವರದಿ’ಯಲ್ಲಿನ 45 ಐತಿಹಾಸಿಕ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಮೋದಿಸಿ 1990ರಲ್ಲೇ ಅನುಷ್ಠಾನ ಪ್ರಯತ್ನ ಆರಂಭಿಸಿದರೂ ಇಲ್ಲಿಯವರೆಗೆ ಒಂದೆ ಒಂದು ಶಿಫಾರಸೂ ಅನುಷ್ಠಾನಗೊಂಡಿಲ್ಲ!

ಇದಕ್ಕೆ ಕಾರಣ, ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಸರ್ಕಾರ ಕೇವಲ ಅಂಗೀಕರಿಸಿ ಅನುಮೋದಿಸಿತೇ ಹೊರತು, ಅದರ ಶಿಫಾರಸನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಿಲ್ಲ. 33 ವರ್ಷಗಳಿಂದ ಹತ್ತಾರು ಸಮಿತಿ ರಚನೆ, ಅವುಗಳ ಶಿಫಾರಸುಗಳ ಪರಿಶೀಲನೆ, ಅಂಗೀಕಾರ, ಅನುಮೋದನೆ, ಟಿಪ್ಪಣಿ, ನಡಾವಳಿಗಳ ಆದೇಶ ಮಾಡಿಕೊಂಡು ಬರಲಾಗಿದೆ. ವರದಿಯಲ್ಲಿನ ಯಾವ ಶಿಫಾರಸಿನ ಅನುಷ್ಠಾನಕ್ಕೂ ಅಧಿಸೂಚನೆ ಹೊರಡಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸುವ ದಿಸೆಯಲ್ಲಿ ಯಾವ ಹೆಜ್ಜೆಯನ್ನೂ ಇಟ್ಟಿಲ್ಲ.

ತನ್ಮೂಲಕ ಕರ್ನಾಟದಲ್ಲಿ ಮೂರು ದಶಕಗಳ ಹಿಂದೆಯೇ ಆರಂಭವಾದ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಹೋರಾಟ, ಆಗ್ರಹ, ಹಕ್ಕೊತ್ತಾಯಗಳನ್ನು ಈಡೇರಿಸುವ ವಿಚಾರದಲ್ಲಿ ಆಡಳಿತ ನಡೆಸಿದ ಸರ್ಕಾರಗಳೆಲ್ಲವೂ ‘ಹಾವೂ ಸಾಯಬಾರದು ಕೋಲೂ ಮುರಿಯಬಾರದು’ ಎನ್ನುವ ಧೋರಣೆ ಅನುಸರಿಸಿಕೊಂಡು ಬಂದಿವೆ.

ಸ್ಥಳೀಯರ ಉದ್ಯೋಗಗಳು ಹೊರಗಿನವರ ಪಾಲಾಗುತ್ತಿರುವುದುನ್ನು ತಡೆಯಲು ಈಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಾದರೂ ಸರೋಜಿನಿ ಮಹಿಷಿ ವರದಿಯನ್ನು ಈಗಿನ ಕಾಲಕ್ಕೆ ತಕ್ಕಂತೆ ಕೆಲ ಮಾರ್ಪಾಡು ಮಾಡಿಕೊಂಡು, ಶಿಫಾರಸುಗಳಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ಇಚ್ಛಾಶಕ್ತಿ ತೋರಬೇಕು ಎನ್ನುವುದು ಕನ್ನಡಪ್ರಭದ ಹಕ್ಕೊತ್ತಾಯ.

ಪ್ರಯತ್ನ ನೆಪದಲ್ಲಿ ಸರ್ಕಾರಿ ಸರ್ಕಸ್‌:

ಸುಮಾರು 80ರ ದಶಕದ ಸಮಯದಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿದ್ದ ಬಹುತೇಕ ಉದ್ದಿಮೆಗಳಲ್ಲಿ ಹೊರ ರಾಜ್ಯದವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅಸಮಾಧಾನದ ಹೊಗೆಯೇಳಲು ಶುರುವಾಗಿತ್ತು. ಹಾಗಾಗಿ ಕನ್ನಡ ನಾಡಿನಲ್ಲಿರುವ ಕೇಂದ್ರ, ರಾಜ್ಯ ಸರ್ಕಾರದ ಉದ್ದಿಮೆಗಳು, ಬ್ಯಾಂಕುಗಳು ಮತ್ತು ಖಾಸಗಿ ಸಂಸ್ಥೆಗಳು ಹೀಗೆ ಎಲ್ಲಾ ಕಡೆಗಳಲ್ಲಿ ಇರುವ ಕೆಲಸಗಳಲ್ಲಿ ಕನ್ನಡಿಗರ ಸಂಖ್ಯೆ, ಅವರ ಸಮಸ್ಯೆಗಳು ಮತ್ತು ಕೊರತೆಗಳನ್ನು ಅಧ್ಯಯನ ಮಾಡಿ ಅದಕ್ಕೆ ತಕ್ಕ ಪರಿಹಾರಗಳ ಶಿಫಾರಸುಗಳನ್ನು ಸೂಚಿಸಿ ವರದಿ ನೀಡಲು 1983ರಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಕೇಂದ್ರದ ಮಾಜಿ ಸಚಿವೆ, ಕನ್ನಡ ಕಟ್ಟಾಳು ಡಾ.ಸರೋಜಿನಿ ಮಹಿಷಿ ಅವರ ಮುಂದಾಳ್ತನದಲ್ಲಿ ಸಮಿತಿಯೊಂದನ್ನು ರಚಿಸಿತು. ನಂತರ ಸತತ ಮೂರು ವರ್ಷಗಳ ಕಾಲ ರಾಜ್ಯಾದ್ಯಂತ ಅಧ್ಯಯನ ನಡೆಸಿದ ಸರೋಜಿನಿ ಮಹಿಷಿ ಸಮಿತಿ 1986ರಲ್ಲಿ 59 ಐತಿಹಾಸಿಕ ಶಿಫಾರಸುಗಳನ್ನೊಳಗೊಂಡ ವರದಿ ಸಲ್ಲಿಸಿತ್ತು.

1986ರಲ್ಲಿ ಸಲ್ಲಿಕೆಯಾದ ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳ ಪರಿಶೀಲನೆಗೆ ಸರ್ಕಾರ 1988ರಲ್ಲಿ ಡಾ.ವೆಂಕಟೇಶ ಕನ್ನಡಿಗರ ಉದ್ಯೋಗ ಸಮಿತಿ ರಚನೆ ಮಾಡಿತು. ನಂತರ 1990ರಲ್ಲಿ ರಚಿಸಿದ ಸಚಿವ ಸಂಪುಟಗಳ ಉಪ ಸಮಿತಿ ಸರೋಜಿನಿ ಮಹಿಷಿ ವರದಿ ಮತ್ತು ಡಾ.ವೆಂಕಟೇಶ ಕನ್ನಡಿಗರ ಉದ್ಯೋಗ ಸಮಿತಿಗಳಲ್ಲಿನ ಒಟ್ಟು 45 ಶಿಫಾರಸುಗಳಿಗೆ ಒಪ್ಪಿಗೆ ನೀಡಿತು. ಈ 45 ಶಿಫಾರಸುಗಳನ್ನು 1990ರ ನವೆಂಬರ್‌ 23ರಂದು ಅಂಗೀಕರಿಸಿ ಮತ್ತು ಅನುಮೋದಿಸಿ ಆದೇಶ ಹೊರಡಿಸಿದ ಸರ್ಕಾರ, ಅವುಗಳನ್ನು ಅನುಷ್ಠಾನಗೊಳಿಸುವಂತೆ ಸರ್ಕಾರದ ವಿವಿಧ ಏಳು ಇಲಾಖೆಗಳಿಗೆ ಟಿಪ್ಪಣಿ ಹೊರಡಿಸಿತು. ಈ ಇಲಾಖೆಗಳು ಅನುಷ್ಠಾನಕ್ಕೆ ಕ್ರಮ ಕೈಗೊಂಡು ಪ್ರತಿ ತಿಂಗಳೂ ಸಚಿವ ಸಂಪುಟಕ್ಕೆ ವರದಿ ನೀಡಬೇಕು ಎಂದು ಸೂಚಿಸಿದೆ. ನಂತರ ಅದೇ ವರ್ಷ ಡಿಸೆಂಬರ್‌ 13ರಂದು ಅನುಮೋದಿತ ಶಿಫಾರಸುಗಳನ್ನು ಜಾರಿಗೊಳಿಸುವುದನ್ನು ನೋಡಿಕೊಳ್ಳಲು ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದ ಏಳು ಉನ್ನತ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಈ ಸಮಿತಿಯು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರಿ ಶಿಫಾರಸುಗಳ ಅನುಷ್ಠಾನ ಪುನರವಲೋಕಿಸುತ್ತಿರಬೇಕು ಎಂದು ಸೂಚಿಸಿದೆ.

ಸಿಎಂ ನೇತೃತ್ವದ ಸಮಿತಿ:

ಇಷ್ಟೇ ಅಲ್ಲ, ಸರೋಜಿನಿ ಮಹಿಷಿ ವರದಿ ಶಿಫಾರಸುಗಳನ್ನು ಜಾರಿಗೊಳಿಸುವುದನ್ನು ನೋಡಿಕೊಳ್ಳಲು 1991ರಲ್ಲಿ ಸ್ವತಃ ಮುಖ್ಯಮಂತ್ರಿ ನೇತೃತ್ವದಲ್ಲಿ ವಿವಿಧ ಇಲಾಖಾ ಸಚಿವರನ್ನೊಳಗೊಂಡ ಸಂಪುಟದ ಕಾಯಂ ಉಪ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಶಿಫಾರಸುಗಳ ಜಾರಿ ಕುರಿತು ಪುನರವಲೋಕಿಸಬೇಕು ಎಂದು ಸೂಚನೆ ನೀಡಲಾಗಿದೆ. ಅಷ್ಟೇ ಹೊರತು ಈ ವರದಿಯನ್ನು ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ಯಾವ ಸರ್ಕಾರಗಳೂ ತೋರಿಲ್ಲ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ನೀಡಬೇಕೆಂಬ ಆಶಯದ ಬಗ್ಗೆ ಕಳೆದ ಹಲವು ಸರ್ಕಾರಗಳ ಅವಧಿಯಲ್ಲಿ ಆಗಾಗ ಪ್ರಸ್ತಾಪ, ಪ್ರಯತ್ನಗಳಾಗುತ್ತಿದ್ದರೂ ಸಾಕಾರವಾಗುತ್ತಿಲ್ಲ. ಬಜೆಟ್‌ನಲ್ಲಿ ಘೋಷಣೆ ಮತ್ತು ಸಚಿವ ಸಂಪುಟದ ನಿರ್ಣಯದ ಬಳಿಕವೂ ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ನೀಡಬೇಕೆಂಬ ಆಶಯ ಕಾಗದದಲ್ಲೆ ಉಳಿದುಹೋಗಿದೆ.

ಕಾಗದದಲ್ಲೇ ಉಳಿದ ಅನುಷ್ಠಾನ

ಹಿಂದಿನ ಯಾವ ಸರ್ಕಾರಗಳ ಆಡಳಿತದಲ್ಲೂ ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಗಂಭೀರ ಪ್ರಯತ್ನಗಳಾಗಲಿಲ್ಲ. ಕಳೆದ ಮೈತ್ರಿ ಸರ್ಕಾರ, ಅದರ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಆದ ಪ್ರಯತ್ನಗಳು ಅನುಷ್ಠಾನಗೊಂಡಿಲ್ಲ. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಕೈಗಾರಿಕಾ ನೀತಿ ಅನುಸಾರ ಖಾಸಗಿ ವಲಯದಲ್ಲಿ ಶೇ.70ರಷ್ಟುಉದ್ಯೋಗವನ್ನು ಸ್ಥಳೀಯರಿಗೆ ನೀಡುವಂತೆ ಕಡ್ಡಾಯ ಆದೇಶ ಮಾಡಿತ್ತು. ಆದರೆ, ಅದರ ಅನುಷ್ಠಾನವಾಗಲಿಲ್ಲ. ಇನ್ನು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ 2019 ಫೆಬ್ರವರಿಯಲ್ಲಿ ಕಣ್ಣೊರೆಸುವ ತಂತ್ರವಾಗಿ ರಾಜ್ಯದ ಖಾಸಗಿ ಕಂಪನಿಗಳ ಸಿ ಮತ್ತು ಡಿ ಗ್ರೂಪ್‌ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.100ರಷ್ಟುಮೀಸಲಾತಿಗೆ ಆದ್ಯತೆ ಕಲ್ಪಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಇದು ಆದ್ಯತೆಯೇ ಹೊರತು, ಕಡ್ಡಾಯವೇನೂ ಅಲ್ಲ. ಅಲ್ಲದೆ, ಇದರಿಂದ ಐಟಿ ಬಿಟಿ ಇಲಾಖೆಗಳು ಹೊರಗುಳಿಯಲಿವೆ. ಹಾಗಾಗಿ ಇದರಿಂದ ಯಾವ ಲಾಭವೂ ಆಗುವುದಿಲ್ಲ ಎಂದು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರೆಯಬೇಕೆಂಬ ಶಿಫಾರಸುಗಳುಳ್ಳ ಸರೋಜಿನಿ ಮಹಿಷಿ ವರದಿ ಸಲ್ಲಿಕೆಯಾಗಿ 33 ವರ್ಷ ಕಳೆದರೂ ಅನುಷ್ಠಾನವಾಗಿಲ್ಲ. ಇದೀಗ ಅದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪರಿಷ್ಕರಿಸಿ ಕೊಟ್ಟಿದ್ದು, ಆ ವರದಿ ಅನುಷ್ಠಾನಕ್ಕೂ ಹಲವು ಬಾರಿ ಒತ್ತಾಯಿಸಿದ್ದೇವೆ. ಹೊಸ ಸರ್ಕಾರವಾದರೂ ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಿ.

- ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಸರೋಜಿನಿ ಮಹಿಷಿ ವರದಿಯ ಪ್ರಮುಖ ಶಿಫಾರಸುಗಳೇನು?

* ರಾಜ್ಯದಲ್ಲಿನ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಗ್ರೂಪ್‌ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಶೇ.100ರಷ್ಟುಮತ್ತು ಗ್ರೂಪ್‌ ‘ಬಿ’ ಹುದ್ದೆಗಳಿಗೆ ಶೇ.65ರಷ್ಟುಕನ್ನಡಿಗರನ್ನು ನೇಮಿಸಿಕೊಳ್ಳಬೇಕು. ಈ ಸಂಬಂಧ ರಾಜ್ಯ ಸರ್ಕಾರವು, ಕೇಂದ್ರ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ನೆಲ, ಜಲ, ವಿದ್ಯುಚ್ಛಕ್ತಿ ನೀಡುವಾಗ ಪೂರ್ವ ಷರತ್ತು ಹಾಕಬೇಕು.

* ರಾಜ್ಯ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಎಲ್ಲಾ ಹಂತಗಳಲ್ಲಿ ಶೇ.100ರಷ್ಟುಕನ್ನಡಿಗರನ್ನು ನೇಮಿಸಿಕೊಳ್ಳಬೇಕು. ವಿಶೇಷ ಪರಿಣತಿ ಬೇಕಿರುವ ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ನೇಮಕಾತಿಯಲ್ಲಿ ರಾಜ್ಯ ಸರ್ಕಾರದ ಅನುಮತಿ ಬಳಿಕ ಈ ನಿರ್ಬಂಧಗಳಿಗೆ ವಿನಾಯಿತಿ ನೀಡಬಹುದು.

* ರಾಜ್ಯದ ಖಾಸಗಿ ಉದ್ದಿಮೆಗಳಲ್ಲಿನ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಖಾಸಗಿ ಉದ್ದಿಮೆಗಳಿಗೆ ರಾಜ್ಯ ಸರ್ಕಾರ ಕೆಎಸ್‌ಐಡಿಸಿ, ಕೆಎಸ್‌ಎಫ್‌ಸಿ, ಕೆಇಬಿ, ನಗರಪಾಲಿಕೆ, ನೀರು ಮತ್ತು ಒಳಚರಂಡಿ ಮುಂತಾದ ಸಂಸ್ಥೆಗಳು ಸೇವೆ ಸೌಲಭ್ಯ ಒದಗಿಸುವಾಗ ಈ ಪೂರ್ಣ ಷರತ್ತುಗಳನ್ನು ಹಾಕಬೇಕು.

* ದಿ ಎಂಪ್ಲಾಯ್‌ಮೆಂಟ್‌ ಎಕ್ಸ್‌ಚೇಂಜಸ್‌ ಆಕ್ಟ್ 1956 ಈ ಅಧಿನಿಯಮ 4ನೇ ಅನುಚ್ಛೇದವನ್ನು ತಿದ್ದುಪಡಿ ಮಾಡಿ ಖಾಲಿ ಹುದ್ದೆಗಳನ್ನು ಅವಶ್ಯಕವಾಗಿ ಉದ್ಯೋಗ ವಿನಿಯಮ ಕೇಂದ್ರಗಳಿಗೆ ತಿಳಿಸಿದ ಮೇಲೆ ಹೆಸರು ನೋಂದಾಯಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕ ಮಾಡುವುದು ಕಡ್ಡಾಯ ಮಾಡಬೇಕು. ರಾಜ್ಯದ ಯಾವುದೇ ಕೇಂದ್ರದಲ್ಲಿ ಅರ್ಹತೆಯುಳ್ಳ ಅಭ್ಯರ್ಥಿಗಳು ದೊರೆಯದೆ ಇದ್ದಲ್ಲಿ ಮಾತ್ರ ಇತರ ಮೂಲಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ಇರಬೇಕು.

* ಉದ್ಯೋಗ ವಿನಿಮಯ ಕೇಂದ್ರಗಳಲ್ಲಿನ ಹೆಸರು ನೋಂದಾಯಿಸುವ ಮೊದಲು ಅಭ್ಯರ್ಥಿಗಳು 15 ವರ್ಷ ಕಾಲ ರಾಜ್ಯದಲ್ಲಿ ವಾಸವಾಗಿದ್ದರೆಂಬುದನ್ನು ರುಜುವಾತುಪಡಿಸಲು ನೋಂದಣಿಗೆ ಮುನ್ನ ಅಧಿಕಾರಿಗಳು ಶಾಲಾ ಪ್ರಮಾಣ ಪತ್ರ (ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್‌), ಪಡಿತರ ಚೀಟಿ, ಮತದಾರರ ಪಟ್ಟಿ, ಜನ್ಮ ದಾಖಲೆ ಪರಿಶೀಲಿಸಬೇಕು.

* ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಅಥವಾ ಪದವಿ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಮಾತ್ರ ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೇಮಕಾತಿಗೆ ಅರ್ಹರು ಎಂದು ಪರಿಗಣಿಸುವಂತೆ ಬ್ಯಾಂಕ್‌ ನೇಮಕಾತಿ ಮಂಡಳಿಗಳಿಗೆ ಸೂಚಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷಾ ಜ್ಞಾನವನ್ನು ಕುರಿತು ಒಂದು ಪ್ರಶ್ನೆ ಪತ್ರಿಕೆ ಸೇರಿಸುವಂತೆ ಸಲಹೆ ನೀಡಬೇಕು.

* ರಾಜ್ಯದ ಎಲ್ಲ ಬ್ಯಾಂಕುಗಳಲ್ಲಿ ಕನ್ನಡ ಬಳಕೆಯ ನಾಗರಿಕರ ಅನುಕೂಲಕ್ಕಾಗಿ ಹಾಗೂ ಕನ್ನಡಿಗರ ನೇಮಕದ ದೃಷ್ಟಿಯಿಂದ ಕನ್ನಡದಲ್ಲಿಯೇ ವ್ಯವಹರಿಸುವಂತೆ ಒತ್ತಾಯಿಸುವುದು. ರಾಜ್ಯದ ಬ್ಯಾಂಕುಗಳ ನೇಮಕಾತಿ ಮಂಡಳಿಗೆ ಬಹು ಸಂಖ್ಯೆಯಲ್ಲಿ ಕನ್ನಡಿಗರನ್ನು ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಸಿಬೇಕು.

* ಕೈಗಾರಿಕಾ ಬಂಡವಾಳ ಹೂಡಿಕೆಗೆ ಆಕರ್ಷಣೆಯಾಗಿ ಪರಿಷ್ಕೃತ ಪ್ರೋತ್ಸಾಹ ಹಾಗೂ ರಿಯಾಯಿತಿ ಕೊಡುವಾಗ ಕನ್ನಡಿಗರಿಗೆ ಆದ್ಯತೆ ಕೊಡುವಂತೆ ಆದೇಶಿಸಬೇಕು ಮತ್ತು ಸರ್ಕಾರದ ನೆರವು ಪಡೆದು ಸ್ಥಾಪಿಸಲಾಗುವ ಕೈಗಾರಿಕೆಗಳು ಕನ್ನಡಿಗರಿಗೇ ಉದ್ಯೋಗಾವಕಾಶವನ್ನು ಕೊಡಬೇಕೆಂದು ಕರಾರು ಹಾಕಬೇಕು.

* ನೂರಕ್ಕಿಂತ ಹೆಚ್ಚು ಸಂಖ್ಯೆಯ ನೌಕರರು ಇರುವ ಖಾಸಗಿ ಉದ್ಯಮಗಳ ನೇಮಕಾತಿ ಸಮಿತಿಗಳಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯನ್ನು ಸೇರಿಸುವಂತೆ ಉದ್ಯಮಗಳನ್ನು ಒತ್ತಾಯಿಸಬೇಕು.

* ಮಹಾರಾಷ್ಟ್ರ ಪದ್ಧತಿಯಂತೆ ಉದ್ಯಮಗಳಿಂದ ಕನ್ನಡಿಗರಿಗೆ ನಿಗದಿ ಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಒದಗಿಸುವ ಬಗ್ಗೆ ಪ್ರತಿ ವರ್ಷ ಘೋಷಣೆ ಪ್ರಪತ್ರವನ್ನು ಪಡೆಯಬೇಕು. ಅದನ್ನು ಪರಿಶೀಲಿಸಲು ಸೂಚಿತ ಘಟಕಕ್ಕೆ ವಹಿಸಬೇಕು.

* 1983ರ ಆದೇಶದಲ್ಲಿ ಸಂದರ್ಶನ ಕಾಲದಲ್ಲಿ ಅಭ್ಯರ್ಥಿಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಕನ್ನಡದಲ್ಲಿಯೇ ಪ್ರಶ್ನಿಸಿ ಉತ್ತರವನ್ನು ಪಡೆಯಬೇಕೆಂದಿರುವುದರಿಂದ ಅದನ್ನು ತಿದ್ದುಪಡಿ ಮಾಡಿ ಕನ್ನಡದಲ್ಲಿಯೇ ಪ್ರಶ್ನಿಸಿ ಉತ್ತರ ಪಡೆಯುವ ವ್ಯವಸ್ಥೆ ಮಾಡಬೇಕು.

* ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಕರ್ನಾಟಕದ ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡುವ ವ್ಯವಸ್ಥೆ ಮಾಡಬೇಕು. ಮಂಡಳಿಯು ನಡೆಸುವ ನೇಮಕಾತಿಯಲ್ಲಿ ಕನ್ನಡ ಭಾಷಾ ಜ್ಞಾನ ಅವಶ್ಯವೆಂದು ಪರಿಗಣಿಸಿ ಪರೀಕ್ಷಿಸಬೇಕು.

* ಸರ್ಕಾರವು ಕನ್ನಡಿಗರಿಗೆ ಶೇ.80ರಷ್ಟುಉದ್ಯೋಗಾವಕಾಶವನ್ನು ನಿಗದಿತ ಕಾಲಮಿತಿಯೊಳಗೆ ಸಾಧಿಸುವ ದೃಢ ಸಂಕಲ್ಪ ಮಾಡುವುದಲ್ಲದೆ, ಈ ಬಗ್ಗೆ ಅನವಶ್ಯಕ ಪ್ರಚಾರವನ್ನು ಬಿಟ್ಟು ಇದನ್ನು ಕೃತಿಯಲ್ಲಿಯೇ ತರಬೇಕು. ಈ ವಿಷಯದಲ್ಲಿ ಧೈರ್ಯ ಮಾಡಿ ಎಂಬ ಕಿವಿ ಮಾತನ್ನು ಸರ್ಕಾರಕ್ಕೆ ತಿಳಿಸಲು ಸಮಿತಿ ಬಯಸುವುದು.

* ಕರ್ನಾಟಕದ ರೈತರ ಸಹಾಯಕ್ಕಾಗಿ ರಾಜ್ಯದ ನಬಾರ್ಡ್‌ ಶಾಖೆಗೆ ನೇಮಕಾತಿ ಮಾಡುವಾಗ ಬೆಂಗಳೂರಿನಲ್ಲಿಯೇ ಒಂದು ನೇಮಕಾತಿ ಸಮಿತಿ ರಚಿಸುವಂತೆ ಒತ್ತಾಯಿಸುವುದು.

Follow Us:
Download App:
  • android
  • ios