ಲಿಂಗರಾಜು ಕೋರಾ

ಬೆಂಗಳೂರು [ಆ.12]:  ನೆರೆಯ ಆಂಧ್ರಪ್ರದೇಶ ಸರ್ಕಾರ ಖಾಸಗಿ ಉದ್ಯಮ ಕ್ಷೇತ್ರದಲ್ಲಿ ಸ್ಥಳೀಯರಿಗೆ ಶೇ.75ರಷ್ಟುಉದ್ಯೋಗ ಮೀಸಲಾತಿ ಕಲ್ಪಿಸುವ ಕಾಯ್ದೆ ಅನುಮೋದಿಸಿದ ಬೆನ್ನಲ್ಲೇ ಇದೀಗ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರ ಹಾಗೂ ಸಾರ್ವಜನಿಕ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂದು ಒತ್ತಾಯಿಸುತ್ತಿದ್ದ ಕೂಗು ಮತ್ತಷ್ಟುಗಟ್ಟಿಯಾಗತೊಡಗಿದೆ.

ಈಗಾಗಲೇ ಮೀಸಲಾತಿ ಇರುವ ಮಹಾರಾಷ್ಟ್ರ, ಹಿಮಾಚಲ ಪ್ರದೇಶದಂತಹ ಕೆಲ ರಾಜ್ಯಗಳು ಮೀಸಲಾತಿ ಪ್ರಮಾಣವನ್ನು ಮತ್ತಷ್ಟುಹೆಚ್ಚಿಸುವ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿವೆ. ಗುಜರಾತ್‌, ಮಧ್ಯಪ್ರದೇಶ, ಗೋವಾ ಸರ್ಕಾರಗಳು ಖಾಸಗಿ ವಲಯದಲ್ಲಿ ಸ್ಥಳೀಯರಿಗೆ ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವುದಾಗಿ ಘೋಷಿಸಿವೆ. ಮಧ್ಯಪ್ರದೇಶ ಸರ್ಕಾರ ಶೇ.70ರಷ್ಟು, ಗೋವಾ ಶೇ.80ರಷ್ಟು, ಮಹಾರಾಷ್ಟ್ರ ಸರ್ಕಾರ ಶೇ.80ರಷ್ಟುಉದ್ಯೋಗ ಮೀಸಲಾತಿಯನ್ನು ತನ್ನ ರಾಜ್ಯದ ಖಾಸಗಿ ಉದ್ಯಮ ವಲಯದಲ್ಲಿ ಸ್ಥಳೀಯರಿಗೆ ನೀಡಲು ಕಾನೂನು ರೂಪಿಸುವುದಾಗಿ ಪ್ರಕಟಿಸಿವೆ.

ಒಡಿಶಾ, ಹಿಮಾಚಲ ಪ್ರದೇಶ, ಸಿಕ್ಕಿಂ, ಉತ್ತರಾಖಂಡ, ಅಸ್ಸಾಂ, ಬಿಹಾರ ಮತ್ತಿತರ ರಾಜ್ಯಗಳಲ್ಲೂ ಈಗಿರುವ ಕಾನೂನಿನಿಂದ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ದೊರೆಯುತ್ತಿಲ್ಲ. ಕಟ್ಟುನಿಟ್ಟಾಗಿ ಮೀಸಲಾತಿ ಅನುಷ್ಠಾನಕ್ಕೆ ತರಲು ಕಾನೂನು ಮಾರ್ಪಾಡು ಮಾಡಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಕಳೆದ ಜು.23ರಂದು ಸ್ಥಳೀಯರಿಗೆ ಶೇ.75ರಷ್ಟುಮೀಸಲಾತಿ ನೀಡುವ ಕಾಯ್ದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆಯುವ ಮೂಲಕ ಇಂತಹ ಮಹತ್ವದ ಕಾಯ್ದೆ ಅಂಗೀಕರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಆಂಧ್ರಪ್ರದೇಶಕ್ಕೆ ಕೊಡಿಸಿದರು.

ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ 2008ರಲ್ಲೇ ಜಾರಿಗೆ ತಂದಿರುವ ಶೇ.80ರವರೆಗಿನ ಮೀಸಲಾತಿ ನೀತಿಯ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಕಾನೂನು ರೂಪಿಸುವುದಾಗಿ ಮಹಾರಾಷ್ಟ್ರ ಸರ್ಕಾರದ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಹೇಳಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ತಮ್ಮ ಸರ್ಕಾರ ರಾಜ್ಯದ ಜನತೆಗೆ ಖಾಸಗಿ ಉದ್ಯೋಗಗಳಲ್ಲಿ ಶೇ.80ರಷ್ಟುಮೀಸಲಾತಿ ಕಲ್ಪಿಸಲಿದೆ ಎಂದು ತಿಳಿಸಿದ್ದಾರೆ. ಗುಜರಾತ್‌ ಸರ್ಕಾರ ಕೂಡ ತಮ್ಮ ರಾಜ್ಯದಲ್ಲಿ ಈಗಾಗಲೇ ಶೇ.75ರಷ್ಟುಉದ್ಯೋಗ ಮೀಸಲಾತಿ ಕಾನೂನು ಇದ್ದರೂ ಸಮರ್ಪಕವಾಗಿ ಜಾರಿಯಾಗಿಲ್ಲ, ವಿವಿಧ ಕ್ಷೇತ್ರಗಳ ಉದ್ಯೋಗಗಳಲ್ಲಿ ಹೊರಗಿನವರೇ ಹೆಚ್ಚಾಗಿದ್ದಾರೆ. ಹಾಗಾಗಿ ಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಕಾನೂನು ಬಲಗೊಳಿಸುವುದಾಗಿ ಹೇಳಿದೆ.

ವಿವಿಧ ರಾಜ್ಯಗಳಲ್ಲಿನ ಮೀಸಲು

ಮಹಾರಾಷ್ಟ್ರ

ಮಹಾರಾಷ್ಟ್ರ ಸರ್ಕಾರ 1968ರ ವರದಿ ಆಧರಿಸಿ 2008ರಲ್ಲೇ ಸ್ಥಳೀಯರಿಗೆ ಖಾಸಗಿ ಉದ್ಯೋಗಗಳಲ್ಲಿ ಶೇ.50ರಷ್ಟುಸೂಪರ್‌ವೈಸರಿ ಹುದ್ದೆ ಹಾಗೂ ಶೇ.80ರಷ್ಟುಸೂಪರ್‌ವೈಸರಿಯೇತರ ಹುದ್ದೆಗಳ ಮೀಸಲಾತಿಗೆ ನಿಯಮ ಜಾರಿಗೊಳಿಸಿದೆ. ಮೀಸಲಾತಿಯನ್ನು ಸಮರ್ಪಕವಾಗಿ ಅನುಸರಿಸುವ ಕೈಗಾರಿಕೆಗಳಿಗೆ ತೆರಿಗೆ ಸಬ್ಸಿಡಿ ಮತ್ತು ಇತರೆ ಪ್ರೋತ್ಸಾಹ ಸೌಲಭ್ಯಗಳನ್ನು ನೀಡುವುದಾಗಿ ಪ್ರಕಟಿಸಿದೆ. ಆದರೆ, ಕೆಲ ಉದ್ಯಮಗಳು ಸರ್ಕಾರದ ಸೌಲಭ್ಯಗಳನ್ನೇ ಪಡೆಯದೆ ಮೀಸಲಾತಿ ನಿಯಮ ಅನುಸರಿಸುತ್ತಿಲ್ಲ. ಹಾಗಾಗಿ ಉದ್ಯೋಗ ಮೀಸಲು ಕಡ್ಡಾಯ ಅನುಷ್ಠಾನಕ್ಕೆ ಕಾನೂನು ರೂಪ ಕೊಡಲು ಮುಂದಾಗಿದೆ. 2018ರಲ್ಲಿ ರಾಜ್ಯದ ಕೈಗಾರಿಕೆಗಳು 3035 ಕೋಟಿ ರು. ಜಿಎಸ್‌ಟಿ ರಿಯಾಯಿತಿ ಸೌಲಭ್ಯ ಪಡೆದಿವೆ. ಹಾಗಾಗಿ ಕೈಗಾರಿಕೆಗಳು ರಾಜ್ಯದಲ್ಲಿ ಹೂಡಿಕೆ ಮಾಡುವಾಗಲೇ ಮೀಸಲಾತಿ ನಿಯಮ ಪಾಲಿಸುವಂತೆ ಒಪ್ಪಂದದಲ್ಲಿ ಅಂಶ ಸೇರಿಸುವ ಮೂಲಕ ಅನುಷ್ಠಾನಕ್ಕೆ ಪ್ರತ್ಯೇಕ ಕಾನೂನನ್ನೂ ರೂಪಿಸಲಾಗುವುದು ಎಂದು ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ್‌ ದೇಸಾಯಿ ಘೋಷಿಸಿದ್ದಾರೆ.

ಹಿಮಾಚಲ ಪ್ರದೇಶ

ಫಾರ್ಮಸಿ ಹಬ್‌ ಎಂದೇ ಖ್ಯಾತಿ ಪಡೆದಿರುವ ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಶೇ.70ರಷ್ಟುಮೀಸಲಾತಿಯನ್ನು ಸ್ಥಳೀಯರಿಗೆ ನೀಡಲಾಗಿದೆ. ಇದನ್ನು ಶೇ.80ಕ್ಕೆ ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಶೇ.70ರಷ್ಟುಉದ್ಯೋಗ ಮೀಸಲಿದ್ದರೂ ಸ್ಥಳೀಯರಿಗೆ ಅದು ಸಾಲುತ್ತಿಲ್ಲ. ಹಾಗಾಗಿ ಅದನ್ನು ಇನ್ನಷ್ಟುಹೆಚ್ಚಳ ಮಾಡಬೇಕೆಂಬ ಸ್ಥಳೀಯ ಆಗ್ರಹದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಮೀಸಲಾತಿ ಪ್ರಮಾಣವನ್ನು ಶೇ.80ಕ್ಕೆ ಹೆಚ್ಚಿಸುವ ಪ್ರಸ್ತಾಪ ಮಾಡಿದ್ದಾರೆ.

ತಮಿಳುನಾಡು

ರಾಜ್ಯದಲ್ಲಿ ಸದ್ಯ ಖಾಸಗಿ ಉದ್ಯಮಗಳ ಉದ್ಯೋಗದಲ್ಲಿ ಶೇ.50ರಷ್ಟನ್ನು ಸ್ಥಳೀಯರಿಗೆ ಆದ್ಯತೆ ಮೇಲೆ ನೀಡಬೇಕೆಂಬ ನಿಯಮ ಇದೆ. ಖಾಸಗಿಯವರು ಕೈಗಾರಿಕೆಗಳನ್ನು ಆರಂಭಿಸುವಾಗ ಅವರ ಜೊತೆ ಈ ಬಗ್ಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗುತ್ತಿದೆ. ಆದರೆ, ಇದು ಸಂಪೂರ್ಣ ಅನುಷ್ಠಾನವಾಗಿಲ್ಲ. ಹಾಗಾಗಿ ಖಾಸಗಿ ಉದ್ಯೋಗಗಳಲ್ಲಿ ಶೇ.80ರಷ್ಟನ್ನು ಸ್ಥಳೀಯರಿಗೆ ನೀಡಲು ಕಾನೂನು ರೂಪಿಸಿ ಜಾರಿಗೆ ತರುವಂತೆ ಪಿಎಂಕೆ ಸೇರಿದಂತೆ ಪ್ರತಿಪಕ್ಷಗಳ ಕೆಲ ಸದಸ್ಯರು ಒತ್ತಾಯಿಸಿದ್ದಾರೆ. ಸರ್ಕಾರ ಕೂಡ ಆ ನಿಟ್ಟಿನಲ್ಲಿ ಪ್ರಯತ್ನ ನಡೆಸುವ ಭರವಸೆ ನೀಡಿದೆ.

ಒಡಿಶಾ

ಒಡಿಶಾ ಸರ್ಕಾರವು 2010ರಲ್ಲಿ ನಿರ್ವಹಣೆ (ಮ್ಯಾನೇಜ್‌ಮೆಂಟ್‌) ಹಂತದಲ್ಲಿ ಶೇ.30, ಕುಶಲ ಉದ್ಯೋಗಗಳಲ್ಲಿ ಶೇ.60, ಕೌಶಲ್ಯರಹಿತ ಹಾಗೂ ಅರೆ ಕೌಶಲ್ಯ ಬೇಡುವ ಉದ್ಯೋಗದಲ್ಲಿ ಶೇ.90ರಷ್ಟುಮೀಸಲನ್ನು ಸ್ಥಳೀಯರಿಗೆ ಕಲ್ಪಿಸಿದೆ. ಆದರೆ, ಈ ಅಂಶ ಖಾಸಗಿ ಉದ್ಯಮಗಳೊಂದಿಗೆ ಸರ್ಕಾರ ಮಾಡಿಕೊಳ್ಳುವ ಒಪ್ಪಂದದಲ್ಲಿ ಈವರೆಗೆ ಸೇರಿಸಲಾಗುತ್ತಿರಲಿಲ್ಲ. ಇನ್ನು ಮುಂದೆ ಹೊಸ ಕೈಗಾರಿಕೆಗಳ ಸ್ಥಾಪನೆ ಮತ್ತು ನವೀಕರಣದ ವೇಳೆ ಒಪ್ಪಂದದಲ್ಲೇ ಮೀಸಲಾತಿಗೆ ಕಡ್ಡಾಯ ಷರತ್ತು ಸೇರ್ಪಡೆಗೊಳಿಸುವ ಉದ್ದೇಶ ಹೊಂದಿದೆ.

ಗೋವಾ

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಇತ್ತೀಚೆಗಷ್ಟೇ ತಮ್ಮ ರಾಜ್ಯದ ಖಾಸಗಿ ಉದ್ಯೋಗಗಳಲ್ಲಿ ಶೇ.80ರಷ್ಟನ್ನು ಸ್ಥಳೀಯರಿಗೆ ಮೀಸಲಿಡುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ಈ ಶೇ.80 ಮೀಸಲು ಉದ್ಯೋಗದಲ್ಲಿ ಶೇ.60ರಷ್ಟುಉದ್ಯೋಗಿಗಳನ್ನು ಕಾಯಂ ಆಧಾರದ ಮೇಲೆ ನೇಮಿಸುವುದಾಗಿ ಪ್ರಕಟಿಸಿದ್ದಾರೆ. ಈ ಸಂಬಂಧ ಇನ್ನು ಆರು ತಿಂಗಳಲ್ಲಿ ನೂತನ ಕಾರ್ಮಿಕ ಮತ್ತು ಉದ್ಯೋಗ ನೀತಿ ಜಾರಿಗೆ ತರಲಾಗುವುದು. ಬಳಿಕ ಎಲ್ಲ ಕೈಗಾರಿಕೆಗಳಿಂದ ಒಟ್ಟು ಉದ್ಯೋಗ ಮತ್ತು ಅವುಗಳಲ್ಲಿ ಸ್ಥಳೀಯರಿಗೆ ನೀಡಿರುವ ಮೀಸಲಾತಿ ಪರಿಶೀಲಿಸಿ ಶೇ.80ರಷ್ಟುಉದ್ಯೋಗ ಮೀಸಲು ಅನುಷ್ಠಾನಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.

ಮಧ್ಯಪ್ರದೇಶ

ಮುಖ್ಯಮಂತ್ರಿ ಕಮಲ್‌ನಾಥ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಕೂಡ ಈ ವರ್ಷ ಅಧಿಕಾರಕ್ಕೆ ಬಂದಕೂಡಲೇ ಉದ್ಯಮಗಳಲ್ಲಿ ಶೇ.70ರಷ್ಟುಉದ್ಯೋಗಾವಕಾಶಗಳನ್ನು ಸ್ಥಳೀಯರಿಗೆ ಮೀಸಲಿಡುವ ಘೋಷಣೆ ಮಾಡಿದೆ. 15 ವರ್ಷ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಖಾಸಗಿ ವಲಯದ ಶೇ.50ರಷ್ಟುಉದ್ಯೋಗ ಸ್ಥಳೀಯರಿಗೆ ನೀಡಬೇಕೆಂದು ಸೂಚನೆ ನೀಡಿತ್ತು. ಆದರೆ, ಹೂಡಿಕೆ ಕಡಿಮೆಯಾಗಬಹುದೆಂಬ ಕಾರಣಕ್ಕೆ ಕಡ್ಡಾಯ ಅನುಷ್ಠಾನಕ್ಕೆ ಕೈಗಾರಿಕೆಗಳ ಮೇಲೆ ಒತ್ತಡ ತಂದಿರಲಿಲ್ಲ.

ಗುಜರಾತ್‌

ಗುಜರಾತ್‌ನಲ್ಲಿ 1995ರಿಂದಲೇ ಸ್ಥಳೀಯರಿಗೆ ಶೇ.85ರಷ್ಟುಉದ್ಯೋಗ ಮೀಸಲಾತಿ ನಿಯಮ ಜಾರಿಯಲ್ಲಿದೆ. ಆದರೆ ಅದು ಸಮರ್ಪಕ ಅನುಷ್ಠಾನವಾಗಿಲ್ಲ ಎಂಬುದು ಸ್ಥಳೀಯರ ಆರೋಪ. ಜವಳಿ, ಕಟ್ಟಡ ನಿರ್ಮಾಣ, ಸೇವಾ ಕ್ಷೇತ್ರ ಸೇರಿದಂತೆ ಖಾಸಗಿ ವಲಯದ ವಿವಿಧ ಉದ್ಯೋಗಗಳಲ್ಲಿ ಅನ್ಯ ರಾಜ್ಯಗಳ ಜನರೇ ಇದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ. ಹಾಗಾಗಿ ಮೀಸಲಾತಿ ಸಮರ್ಪಕ ಅನುಷ್ಠಾನಕ್ಕೆ ಕಾನೂನು ಬಲಗೊಳಿಸುವುದಾಗಿ ಸರ್ಕಾರ ಹೇಳಿದೆ.

ಸಿಕ್ಕಿಂ

ಸಿಕ್ಕಿಂ ರಾಜ್ಯ ತನ್ನ ಉದ್ದಿಮೆಗಳಲ್ಲಿನ ಖಾಸಗಿ ಹುದ್ದೆಗಳಲ್ಲಿ ಶೇ.90ರಷ್ಟುಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿರಿಸಿ 2010ರಲ್ಲೇ ಅಧಿಸೂಚನೆ ಹೊರಡಿಸಿದೆ. ಆದರೆ, ಇದನ್ನು ಕೈಗಾರಿಕೆಗಳು ಅನುಸರಿಸಿರಲಿಲ್ಲ. ಅಲ್ಲದೆ, ಈ ಅಧಿಸೂಚನೆಗೆ ಶಾಸಕಾಂಗದ ಬಲ ಇಲ್ಲದಿರುವುದರಿಂದ ಹಾಗೂ ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು ಎನ್ನಲಾಗಿದೆ. ಬಳಿಕ ‘ಸೇವ್‌ ಸಿಕ್ಕಿಂ ರೂಲ್ಸ್‌’ ಸಂಘಟನೆ ಹಾಗೂ ಗೂರ್ಖಾ ಅಫೆಕ್ಸ್‌ ಸಮಿತಿಗಳು ಸ್ಥಳೀಯರಿಗೆ ಖಾಸಗಿ ಉದ್ಯೋಗ ಮೀಸಲಾತಿ ಸೌಲಭ್ಯವನ್ನು ವಿಧಾನಸಭೆಯಲ್ಲಿ ಕಾಯ್ದೆ ಅಂಗೀಕರಿಸಿ ಕಾನೂನು ರೂಪದಲ್ಲಿ ಜಾರಿಗೆ ತರಬೇಕು ಎಂದು ಆಗ್ರಹಿಸಿವೆ.

ಜಾರ್ಖಂಡ್‌

ಜಾರ್ಖಂಡ್‌ನಲ್ಲಿ ಸಿ ಮತ್ತು ಡಿ ದರ್ಜೆ ಸರ್ಕಾರಿ ಹುದ್ದೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವ ಪ್ರಯತ್ನ ನಡೆಸಿದ್ದು, ಮೀಸಲಾತಿ ಜಾರಿಯಲ್ಲಿರುವ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲಿಸಿ, ರಾಜ್ಯದಲ್ಲಿ ಅನುಷ್ಠಾನದಿಂದ ಉಂಟಾಗುವ ಸಾಧಕ ಬಾಧಕಗಳನ್ನು ಪರಿಶೀಲಿಸಲು ರಚಿಸಿದ್ದ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆ ವರದಿ ಪರಿಶೀಲನೆಯ ಹಂತದಲ್ಲಿದೆ.

ಕರ್ನಾಟಕದಲ್ಲಿ ಏರುತ್ತಿದೆ ಉದ್ಯೋಗ ಮೀಸಲು ಕೂಗು

ರಾಜ್ಯದಲ್ಲಿನ ಉದ್ಯೋಗಗಳು ಕನ್ನಡಿಗರಿಗೇ ದೊರೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಣಧೀರ ಪಡೆ ಸೇರಿದಂತೆ ಕೆಲ ಕನ್ನಡಪರ ಯುವ ಸಂಘಟನೆಗಳು ಆ.14ರ ಬೆಳಗ್ಗೆ 10ರಿಂದ ಆ.15ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಸಮಯದವರೆಗೆ 24 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿವೆ.

ಈ ಸತ್ಯಾಗ್ರಹಕ್ಕೆ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಸಾಹಿತಿಗಳಾದ ದೇವನೂರು ಮಹಾದೇವ, ಎಸ್‌.ಜಿ.ಸಿದ್ದರಾಮಯ್ಯ, ಕೆ.ಮರುಳಸಿದ್ದಪ್ಪ, ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ಚಂಪಾ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ನಾಡಿನ ಸಾಹಿತಿಗಳು, ರಂಗಕರ್ಮಿಗಳು, ಬುದ್ಧಿಜೀವಿಗಳು ಬೆಂಬಲ ನೀಡಿದ್ದಾರೆ. ಬರುವ ಸೆಪ್ಟೆಂಬರ್‌ ತಿಂಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಬೃಹತ್‌ ರಾರ‍ಯಲಿ ಆಯೋಜಿಸಲು ನಿರ್ಧರಿಸಿದೆ.