ಶ್ರೀಕಾಂತ್‌ ಎನ್‌. ಗೌಡಸಂದ್ರ

 ಬೆಂಗಳೂರು [ಆ.09]: ಕರುನಾಡ ವಾಸಿಗಳು ಪ್ರತಿ ಬಾರಿ ಉದ್ಯೋಗ ಹಕ್ಕಿಗಾಗಿ ದನಿ ಎತ್ತಿದಾಗ ಮೂಗಿಗೆ ತುಪ್ಪ ಸವರುವ ಪ್ರಯತ್ನಕ್ಕೆ ಕೈ ಹಾಕುವ ರಾಜ್ಯ ಸರ್ಕಾರ, ‘ಸಿ’ ಹಾಗೂ ‘ಡಿ’ ದರ್ಜೆಯ ಖಾಸಗಿ ಉದ್ಯೋಗಗಳಲ್ಲಿ ಮಾತ್ರ ಶೇ.100ರಷ್ಟುಕಡ್ಡಾಯ ಆದ್ಯತೆ ಕಲ್ಪಿಸುವುದಾಗಿ ಸಚಿವ ಸಂಪುಟ ನಿರ್ಣಯ ಕೈಗೊಂಡು ಮತ್ತದೇ ನುಣುಚಿಕೊಳ್ಳುವ ತಂತ್ರಕ್ಕೆ ಮುಂದಾಗಿದೆ.

ತನ್ನ ರಾಜ್ಯದಲ್ಲಿರುವ ಖಾಸಗಿ ಕಾರ್ಖಾನೆಗಳು, ಉದ್ಯಮಗಳು, ಪಿಪಿಪಿ ಯೋಜನೆಗಳಲ್ಲಿನ ಉದ್ಯೋಗಗಳಲ್ಲಿ ಶೇ.75ರಷ್ಟುಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲು ಆಂಧ್ರಪ್ರದೇಶ ಸರ್ಕಾರ ಎರಡು ವಾರಗಳ ಹಿಂದಷ್ಟೇ ‘ಉದ್ಯಮ/ ಕಾರ್ಖಾನೆಗಳ ಮಸೂದೆ-2019’ ಅಂಗೀಕರಿಸಿದೆ.

ಅಲ್ಲದೆ, ಕೌಶಲ್ಯ ಕೊರತೆ ನೆಪ ನೀಡಿ ಕಂಪನಿಗಳು ಉದ್ಯೋಗ ನಿರಾಕರಿಸುವಂತಿಲ್ಲ. ಕಾರ್ಖಾನೆಗಳಿಗೆ ಯಾವ ರೀತಿಯ ಕೌಶಲ್ಯದ ಕಾರ್ಮಿಕರು ಬೇಕೋ ಅಂತಹ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರವೇ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಳ್ಳುತ್ತದೆ. ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ಕಾರ್ಖಾನೆಗಳ ಜಂಟಿ ಸಹಯೋಗದಲ್ಲೇ ತರಬೇತಿ ನೀಡಲಾಗುತ್ತದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಘೋಷಿಸಿದ್ದಾರೆ.

ಆದರೆ, ರಾಜ್ಯದಲ್ಲಿ ಮಾತ್ರ 33 ವರ್ಷಗಳ ಕನ್ನಡಿಗರ ಹೋರಾಟಕ್ಕೆ ಕಣ್ಣೊರೆಸುವ ತಂತ್ರವಾಗಿ 2019ರ ಫೆಬ್ರವರಿಯಲ್ಲಿ ಕೇವಲ ‘ಸಿ’ ಹಾಗೂ ‘ಡಿ’ ದರ್ಜೆಯ ಹುದ್ದೆಗಳಲ್ಲಿ ಮಾತ್ರ ಕನ್ನಡಿಗರಿಗೆ ಶೇ.100ರಷ್ಟುಕಡ್ಡಾಯ ಆದ್ಯತೆ ಕಲ್ಪಿಸಲು ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ. ಅಲ್ಲೂ ಕೂಡ ‘ಮೀಸಲಾತಿ’ ಎಂಬ ಪದ ಬಳಕೆ ಮಾಡದೆ ‘ಆದ್ಯತೆ’ ಪದ ಬಳಿಸಿ ಐತಿಹಾಸಿಕ ಡಾ. ಸರೋಜಿನಿ ಮಹಿಷಿ ವರದಿಯ ಪ್ರಮುಖ ಶಿಫಾರಸಿಗೆ ಎಳ್ಳು- ನೀರು ಬಿಟ್ಟು ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ.

ನಾಮ್‌ಕೆವಾಸ್ತೆ ಸೌಲಭ್ಯ:

ಫೆಬ್ರುವರಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟ ಕೈಗೊಂಡಿರುವ ನಿರ್ಣಯದಿಂದಾಗಿ ‘ಎ’ ಹಾಗೂ ‘ಬಿ’ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಅಥವಾ ಮೀಸಲಾತಿಯ ಯಾವುದೇ ಅವಕಾಶವಿಲ್ಲ. ಸರ್ಕಾರದಿಂದ ರಿಯಾಯಿತಿ ಹಾಗೂ ಸೌಲಭ್ಯ ಪಡೆಯುತ್ತಿರುವ ಉದ್ಯಮಗಳು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಹೇಳಲಾಗಿದೆ. ಉಳಿದವರ ಮೇಲೆ ಯಾವ ಕ್ರಮ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಜತೆಗೆ ‘ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ-1961’ಕ್ಕೆ ತಿದ್ದುಪಡಿ ತಂದು ಈ ನಾಮ್‌ಕೆವಾಸ್ತೆ ಸೌಲಭ್ಯ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇದರಿಂದ ರಾಜ್ಯದ ಐಟಿ-ಬಿಟಿ ಉದ್ಯಮವು ಈ ಕಾಯ್ದೆಯಡಿ ಬಾರದೆ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಹೊಣೆಯಿಂದ ವಿನಾಯಿತಿ ಪಡೆದಂತಾಗಿದೆ. ನೂತನ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಅವರಾದರೂ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಬಲವಾದ ಕಾನೂನು ರೂಪಿಸುತ್ತಾರೆಯೇ ಎಂಬ ನಿರೀಕ್ಷೆಯಲ್ಲಿ ಕನ್ನಡಿಗರು ಇದ್ದಾರೆ. ಯಡಿಯೂರಪ್ಪನವರೇ, ಸ್ಥಳೀಯರಿಗೆ ನೀವಾದರೂ ನ್ಯಾಯ ದೊರಕಿಸಿಕೊಡುವಿರಾ?

ಹಿಂದಿನ ಸರ್ಕಾರದಲ್ಲಿ ಸಚಿವ ಸಂಪುಟದ ಒಪ್ಪಿಗೆ ಪಡೆದಿರುವ ಸಿ ಹಾಗೂ ಡಿ ಗ್ರೂಪ್‌ ಹುದ್ದೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ಕುರಿತ ನಿರ್ಣಯದ ಬಗ್ಗೆ ಇನ್ನೂ ರಾಜ್ಯ ಸರ್ಕಾರ ಆದೇಶ ಹೊರಡಿಸಿಲ್ಲ. ಆಕ್ಷೇಪಣೆಗಳನ್ನು ಆಲಿಸುವ ಹಂತದಲ್ಲೇ ಅದು ಇನ್ನೂ ಇದ್ದು, ಕೂಡಲೇ ಎಚ್ಚೆತ್ತು ಸೂಕ್ತ ತಿದ್ದುಪಡಿಗಳ ಮೂಲಕ ಬಲವಾದ ಕಾನೂನು ರೂಪಿಸುವ ಹೊಣೆ ಮುಖ್ಯಮಂತ್ರಿಗಳ ಮೇಲಿದೆ.

ಪ್ರಮುಖ ಶಿಫಾರಸುಗಳಿಗೆ ಎಳ್ಳು ನೀರು:

ಕರುನಾಡ ವಾಸಿಗಳು ದಶಕಗಳ ಕಾಲದಿಂದ ಹೋರಾಟ ಮಾಡುತ್ತಿರುವ ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್‌.ಜಿ. ಸಿದ್ದರಾಮಯ್ಯ ನೇತೃತ್ವದ ಐದು ಮಂದಿ ಸದಸ್ಯರ ಸಮಿತಿಯು 2017ರ ಫೆಬ್ರುವರಿ 3 ರಂದು ಸರ್ಕಾರಕ್ಕೆ ಸಲ್ಲಿಸಿತ್ತು.

15 ವರ್ಷದಿಂದ ರಾಜ್ಯದಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಗಳು, ರಾಜ್ಯ ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಸಿ ಹಾಗೂ ಡಿ ದರ್ಜೆಯ ಉದ್ಯೋಗಗಳಲ್ಲಿ (ಬ್ಲ್ಯೂ ಕಾಲರ್‌) ಶೇ.100 ರಷ್ಟುಮೀಸಲಾತಿ ಕಲ್ಪಿಸಬೇಕು. ತಾಂತ್ರಿಕ ಹಾಗೂ ಕೌಶಲ್ಯದಂತಹ ತೀರಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ತುಸು ಮಟ್ಟಿಗೆ ಸಡಿಲಿಕೆ ತೋರಿಸಬೇಕು. ಕ್ಲರಿಕಲ್‌ ಹುದ್ದೆಗಳಲ್ಲಿ (ಬಿ ದರ್ಜೆ) ಶೇ.80ರಷ್ಟುಮೀಸಲಾತಿ, ಅತ್ಯುನ್ನತ ಕೌಶಲ್ಯ ಬೇಡುವ ಅಥವಾ ಎ ದರ್ಜೆ ಉದ್ಯೋಗಗಳಲ್ಲಿ ಶೇ.65 ರಷ್ಟುಮೀಸಲಾತಿ ಕಲ್ಪಿಸಬೇಕು. ಅಲ್ಲದೆ, 3 ದಶಕಗಳ ಹಿಂದೆ ಡಾ. ಸರೋಜಿನಿ ಮಹಿಷಿ ಅವರು ವರದಿ ಸಿದ್ಧಪಡಿಸುವಾಗ ಐಟಿ-ಬಿಟಿ ಕಂಪನಿಗಳ ಅಸ್ತಿತ್ವ ಇರಲಿಲ್ಲ. ಪ್ರಸ್ತುತ ಇದರ ಪ್ರಾಮುಖ್ಯತೆ ಹೆಚ್ಚಾಗಿದ್ದು, ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನೂ ಅನುಭವಿಸುತ್ತಿವೆ. ಹೀಗಾಗಿ ಐಟಿ-ಬಿಟಿ ಇಲಾಖೆ ಉದ್ಯೋಗಗಳನ್ನು ಸೇರ್ಪಡೆ ಮಾಡಲು ಅಗತ್ಯ ಕಾನೂನು ರೂಪಿಸಬೇಕು ಎಂದು ಶಿಫಾರಸು ಮಾಡಿತ್ತು.

ಜತೆಗೆ ಬಹುತೇಕ ಕಂಪನಿಗಳು ಕೃಷಿ ಭೂಮಿಯಲ್ಲೇ ತಲೆ ಎತ್ತಿವೆ. ಹೀಗಾಗಿ ಜಮೀನು ಒದಗಿಸಿರುವ ಮಾಲೀಕರು ಅಥವಾ ಕುಟುಂಬದ ಸದಸ್ಯರಿಗೆ ವಿದ್ಯಾರ್ಹತೆ ಆಧಾರದ ಮೇಲೆ ಸೂಕ್ತ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿತ್ತು.

ಆದರೆ, ರಾಜ್ಯ ಸರ್ಕಾರವು ಕೇವಲ ಸಿ ಹಾಗೂ ಡಿ ದರ್ಜೆಯ ಹುದ್ದೆಗಳಿಗೆ ಮಾತ್ರ ಶೇ.100 ರಷ್ಟುಆದ್ಯತೆ ಕಲ್ಪಿಸುವುದಾಗಿ ಹೇಳಿದೆ. ಜತೆಗೆ ಐಟಿ-ಬಿಟಿ ಇಲಾಖೆಗೆ ವಿನಾಯಿತಿ ನೀಡಿದೆ. ಖಾಸಗಿ ಕಂಪನಿಗಳ ಸಿ ಹಾಗೂ ಡಿ ದರ್ಜೆಯ ಆರು ಮಾದರಿ ಹುದ್ದೆಗಳಿಗೆ ಕಡ್ಡಾಯ ಆದ್ಯತೆ ನಿಯಮ ಅನ್ವಯಿಸುವಂತೆ ಮಾಡಿದೆ. ಕಾಯಂ ಉದ್ಯೋಗ, ಪ್ರೊಬೆಷನರಿ, ಬಾಲ್ಡಿಶ್‌, ತಾತ್ಕಾಲಿಕ, ಕ್ಯಾಷುಯಲ್‌, ಅಪ್ರೆಂಟಿಸ್‌ (ಕಲಿಕಾ ಉದ್ಯೋಗಿ), ಅಲ್ಲದೆ, ಶೇ.5 ರಷ್ಟುಅಂಗವಿಕಲರಿಗೂ ಆದ್ಯತೆ ಕಲ್ಪಿಸುವುದಾಗಿ ಹೇಳಲಾಗಿದೆ. ಇದಕ್ಕಾಗಿ ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ-1961’ಕ್ಕೆ ತಿದ್ದುಪಡಿ ತರಲೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮೂಗಿಗೆ ತುಪ್ಪ ಸವರುತ್ತಲೇ ಬಂದ ಸರ್ಕಾರಗಳು:

ಸರೋಜಿನಿ ಮಹಿಷಿ ವರದಿ ಮಂಡನೆಯಾದ ಮೂರು ದಶಕಗಳ ಕಾಲ ಕನ್ನಡಿಗರು ಹೋರಾಟ ನಡೆಸಿದರೂ ಸರ್ಕಾರಗಳು ಸ್ಪಂದಿಸಲಿರಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 2014-19ರ ರಾಜ್ಯ ಕೈಗಾರಿಕಾ ನೀತಿಯಲ್ಲಿ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.70ರಷ್ಟುಮೀಸಲಾತಿ ಕಲ್ಪಿಸುವುದು ಕಡ್ಡಾಯ ಎಂದು ಆದೇಶ ಮಾಡಿತ್ತು. ಈ ನಿಯಮ ಪಾಲಿಸದವರಿಗೆ ಕೈಗಾರಿಕಾ ನೀತಿಯಡಿ ದೊರೆಯುವ ಸಬ್ಸಿಡಿಗಳು ದೊರೆಯುವುದಿಲ್ಲ ಎಂದು ಹೇಳಿತ್ತು.

ಇದರ ಬೆನ್ನಲ್ಲೇ 2016-17ರ ಬಜೆಟ್‌ನಲ್ಲಿ ಡಾ. ಸರೋಜಿನಿ ಮಹಿಷಿ ವರದಿ ಆಧರಿಸಿ ಸ್ಥಳೀಯರಿಗೆ ಶೇ.100ರಷ್ಟುಮೀಸಲಾತಿ ಕಲ್ಪಿಸುವುದಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಿಸಿತ್ತು.

ಇದರಂತೆ ಅಂದಿನ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯು 2016ರ ಡಿಸೆಂಬರ್‌ನಲ್ಲಿ ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಸಿ ಹಾಗೂ ಡಿ ಗ್ರೂಪ್‌ಗಳಲ್ಲಿ ಶೇ.100 ರಷ್ಟುಮೀಸಲಾತಿ ಕಲ್ಪಿಸುವಂತೆ ಶಿಫಾರಸು ನೀಡಿದ್ದರು. ಅಲ್ಲದೆ, ಸರೋಜಿನಿ ಮಹಿಷಿ ವರದಿಯಲ್ಲಿ ತಪ್ಪಿ ಹೋಗಿರುವ ಐಟಿ-ಬಿಟಿ ಇಲಾಖೆಗಳನ್ನೂ ಸೇರ್ಪಡೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಎಲ್ಲಾ ಹಂತಗಳಲ್ಲೂ ಸರ್ಕಾರಗಳು ಕನ್ನಡಿಗರ ಮೂಗಿಗೆ ತುಪ್ಪ ಸವರುತ್ತಲೇ ಬಂದಿವೆ.

ಸ್ಥಳೀಯರ ಆಕ್ರೋಶ:

ಕೇವಲ ಸಿ ಹಾಗೂ ಡಿ ದರ್ಜೆ ಖಾಸಗಿ ಉದ್ಯೋಗಗಳಿಗೆ ಮಾತ್ರ ಮೀಸಲಾತಿ ಕಲ್ಪಿಸುವ ಮೂಲಕ ಸರೋಜಿನಿ ಮಹಿಷಿ ವರದಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಮುಖ ಶಿಫಾರಸುಗಳಿಗೆ ಎಳ್ಳು-ನೀರು ಬಿಡಲಾಗಿದೆ. ಸಂಪುಟ ಅಸ್ತು ನೀಡಿರುವುದು ನಾಮ್‌ಕೆವಾಸ್ತೆ ಮೀಸಲಾತಿ. ಇದರಿಂದ ಕನ್ನಡಿಗರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

‘ಕನ್ನಡಿಗರು’ ಎಂದರೆ ಯಾರು?

ಡಾ. ಸರೋಜಿನಿ ಮಹಿಷಿ ವರದಿ ಪ್ರಕಾರ, ಕನ್ನಡಿಗರು ಅರ್ಥಾತ್‌ ಸ್ಥಳೀಯರು ಎಂದು ಕರೆಸಿಕೊಳ್ಳಲು ರಾಜ್ಯದಲ್ಲಿ ಕಡ್ಡಾಯವಾಗಿ 15 ವರ್ಷ ವಾಸವಿರಬೇಕು ಹಾಗೂ ಕನ್ನಡ ಕಲಿತಿರಬೇಕು. ಇದಕ್ಕಾಗಿ ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ, ವಾಸಸ್ಥಳ ದೃಢೀಕರಣ ಪತ್ರ ಸಲ್ಲಿಸಬೇಕು. ಅನಕ್ಷರಸ್ಥರಾಗಿದ್ದರೆ ವಾಸಸ್ಥಳ ಪ್ರಮಾಣಪತ್ರ ಸಲ್ಲಿಸಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಉದ್ಯೋಗಕ್ಕೆ ಬೇಕಾದ ಕನಿಷ್ಠ ವಿದ್ಯಾರ್ಹತೆ ಪಡೆದಿರಬೇಕು.

ಡಾ. ಸರೋಜಿನಿ ಮಹಿಷಿ ವರದಿ ಆಧರಿಸಿ ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆಗಳು, ಸರ್ಕಾರಿ ಹಾಗೂ ಖಾಸಗಿ ಸೇವೆಗಳಲ್ಲಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆದರೆ ಸಚಿವ ಸಂಪುಟದಲ್ಲಿ ಕೇವಲ ಖಾಸಗಿ ಉದ್ಯೋಗಗಳಲ್ಲಿನ ಸಿ ಹಾಗೂ ಡಿ ದರ್ಜೆ ಉದ್ಯೋಗಗಳಿಗೆ ಮಾತ್ರ ಮೀಸಲಾತಿ ಕಲ್ಪಿಸಲಾಗಿದೆ. ಶಿಫಾರಸುಗಳನ್ನು ಅಂಗೀಕರಿಸಿದರೆ ಖಾಸಗಿ ಉದ್ಯೋಗದ ಎಲ್ಲಾ ದರ್ಜೆ ಉದ್ಯೋಗ, ಸರ್ಕಾರಿ ಉದ್ಯೋಗಗಳಲ್ಲೂ ಮೀಸಲಾತಿ ಕಲ್ಪಿಸಬೇಕಾಗುತ್ತದೆ.

- ಎಸ್‌.ಜಿ. ಸಿದ್ದರಾಮಯ್ಯ, ನಿಕಟಪೂರ್ವ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ