ನವದೆಹಲಿ(ಅ.01): ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅಬ್ ಬಾರ್ ಟ್ರಂಪ್ ಸರ್ಕಾರ್ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿರುವ ಜೈಶಂಕರ್ ಕಾಲೆಳೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅಸಮರ್ಥತೆಯನ್ನು ಸಮರ್ಥಿಸುವ ಕೆಲಸ ತುಂಬ ಚೆನ್ನಾಗಿ ಮಾಡುತ್ತಿದ್ದೀರಾ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರ ಅಸಮರ್ಥತೆಯನ್ನು ಮರೆಮಾಚಿದ್ದಕ್ಕೆ ಧನ್ಯವಾದಗಳು ಜೈಶಂಕರ್ ಎಂದು ಕುಹುಕವಾಡಿದ್ದಾರೆ.  ಪ್ರಜಾಪ್ರಭುತ್ವಕ್ಕೆ ಗಂಭೀರ ಸಮಸ್ಯೆ ತಂದೊಡ್ಡುವ ಮೋದಿ ಹೇಳಿಕೆಗಳು ಜೈಶಂಕರ್ ಮಧ್ಯಪ್ರವೇಶದಿಂದ ಮರೆಮಾಚುತ್ತವೆ ಎಂದು  ರಾಹುಲ್ ಹೇಳಿದ್ದಾರೆ.

ಆದರೆ ಸದಾ ಮೋದಿ ಅವರ ತಪ್ಪು ಹೇಳಿಕೆಗಳನ್ನು ಮರೆಮಾಚುವ ಬದಲು, ಅವರಿಗೆ ರಾಜತಾಂತ್ರಿಕತೆಯ ಬಗ್ಗೆ ಪಾಠ ಮಾಡಿದರೆ ಒಳಿತು ಎಂದು ಜೈಶಂಕರ್ ಅವರಿಗೆ ರಾಹುಲ್ ಸಲಹೆ ನೀಡಿದ್ದಾರೆ. 

ಹ್ಯೂಸ್ಟನ್’ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ‘ಅಬ್ ಕಿ ಬಾರ್ ಟ್ರಂಪ್ ಸರ್ಕರ್’ ಘೋಷಣೆ ಬಳಿಸಿದ್ದರು. 2020ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.