ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ: ಭಾರೀ ಭದ್ರತೆ ನಿಯೋಜನೆಗೆ ಅನುಮೋದನೆ!
ಇದೇ ನವಂಬರ್'ನಲ್ಲಿ ಅರ್ಯೋಧ್ಯೆ ತೀರ್ಪು ಪ್ರಕಟಿಸಲಿರುವ ಸುಪ್ರೀಂಕೋರ್ಟ್| ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್'ಗೆ ಆದೇಶ| ದಸರಾ ಹಬ್ಬದ ಪ್ರಯುಕ್ತ ಭದ್ರತೆ ಹೆಚ್ಚಳಕ್ಕೆ ಮುಂದಾದ ಉತ್ತರಪ್ರದೇಶ ಸರ್ಕಾರ| ದುರ್ಗಾ ಪೂಜೆ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋಣ್ ಕಣ್ಗಾವಲು| ಹೋಟೆಲ್, ಅತಿಥಿ ಗೃಹ, ವಸತಿ ಗೃಹಗಳನ್ನು ಪರಿಶೀಲಿಸುವಂತೆ ಪೊಲೀಸರಿಗೆ ಆದೇಶ|
ನವದೆಹಲಿ(ಅ.06): ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ಕ್ಷಣಗಣನೆ ಶುರುವಾಗಿದ್ದು, ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸುಪ್ರೀಂಕೋರ್ಟ್ ತೀರ್ಪು ಹಾಗೂ ದಸರಾ ಹಬ್ಬದ ಪ್ರಯುಕ್ತ ಭದ್ರತೆ ಹೆಚ್ಚಳಕ್ಕೆ ಉತ್ತರಪ್ರದೇಶ ಸರ್ಕಾರ ಆದೇಶ ನೀಡಿದೆ ಎನ್ನಲಾಗಿದ್ದು, ಸಂಪೂರ್ಣ ಅಯೋಧ್ಯೆ ಇದೀಗ ಖಾಕಿ ಸರ್ಪಗಾವಲಿನಲ್ಲಿದೆ.
ದುರ್ಗಾ ಪೂಜೆ ಹಾಗೂ ದಸರಾ ಮೆರವಣಿಗೆ ವೇಳೆ ಡ್ರೋಣ್ ಕಣ್ಗಾವಲು ಇಡಲು ನಿರ್ಧರಿಸಿದ್ದು, ದೀಪಾವಳಿಗೂ ಮೊದಲು ರಾಜ್ಯ ಸರ್ಕಾರ ಆಯೋಜಿಸುವ ಮೂರು ದಿನಗಳ ದಿಪೋತ್ಸವ ಕಾರ್ಯಕ್ರಮದವರೆಗೂ ಹೆಚ್ಚಿನ ಭದ್ರತೆ ಮುಂದುವರೆಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ಹೋಟೆಲ್, ಅತಿಥಿ ಗೃಹ, ವಸತಿ ಗೃಹಗಳನ್ನು ಪರಿಶೀಲಿಸುವಂತೆ ಜಿಲ್ಲಾ ಪೊಲೀಸರಿಗೆ ಹಾಗೂ ಗುಪ್ತಚರ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದೇ ನವೆಂಬರ್‌ನಲ್ಲಿ ಸುಪ್ರೀಂಕೋರ್ಟ್ ದೀರ್ಘಕಾಲದ ಅಯೋಧ್ಯೆ ವಿವಾದದ ತೀರ್ಪನ್ನು ಪ್ರಕಟಿಸಲಿದೆ.