ನವದೆಹಲಿ[ನ.26]: ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಸುಂದರ ಮಂದಿರ ನಿರ್ಮಾಣದ ಕುರಿತು ಡಿ.11ರ ಬಳಿಕ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಮುಂದಿನ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದಲ್ಲಿ ರಾಮಮಂದಿರ ನಿರ್ಮಾಣದ ದಿನಾಂಕ ಪ್ರಕಟಗೊಳ್ಳಲಿದೆ ಎಂದು ಭಾನುವಾರ ಇಲ್ಲಿ ಸಭೆ ಸೇರಿದ್ದ ವಿವಿಧ ಹಿಂದೂ ಸಂಘಟನೆಗಳ ನಾಯಕರು ಘೋಷಿಸಿದ್ದಾರೆ. ಇದರೊಂದಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಮತ್ತೊಂದು ಮಜಲು ತಲುಪಿದೆ.

ರಾಮಮಂದಿರ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಾಯ ಹೇರುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್‌ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಧರ್ಮ ಸಭೆಯಲ್ಲಿ 3 ಲಕ್ಷಕ್ಕೂ ಹೆಚ್ಚು ರಾಮಭಕ್ತರು ಸೇರಿದ್ದರು. ಜೊತೆಗೆ ವಿವಿಧ ಭಾಗಗಳಿಂದ ಬಂದಿದ್ದ 50ಕ್ಕೂ ಹೆಚ್ಚು ಧರ್ಮಗುರುಗಳು ಕೂಡಾ ಭಾಗಿಯಾಗಿ ರಾಮಮಂದಿರಕ್ಕಾಗಿ ತಮ್ಮ ಆಗ್ರಹವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಹಿಂದುಗಳು ಎದ್ದೇಳಲ್ಲ, ಒಮ್ಮೆ ಎದ್ರೆ ಕೆಟ್ಟ ಶಕ್ತಿಗಳು ಉಳಿಯಲ್ಲ'

ಈ ವೇಳೆ ಧಾರ್ಮಿಕ ಮುಖಂಡ ರಾಮ ಭದ್ರಾಚಾರ್ಯ ಮಾತನಾಡಿ, ‘ಡಿ.11ರಂದು ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಅಂತ್ಯವಾಗಲಿದೆ. ಆ ಬಳಿಕ ಪ್ರಧಾನ ಮಂತ್ರಿಗಳು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಕುಳಿತು ಮಂದಿರ ನಿರ್ಮಾಣದ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ನ.23ರಂದು ಕೇಂದ್ರ ಸಚಿವರೊಬ್ಬರನ್ನು ನಾನು ಭೇಟಿಯಾದಾಗ ಅವರಿಂದ ಈ ಭರವಸೆ ಬಂದಿತು’ ಎಂದು ಹೇಳಿದರು. ‘ರಾಮಭಕ್ತರಿಗೆ ನಾವು ಮೋಸ ಮಾಡಲ್ಲ ಎಂಬ ಭರವಸೆಯೂ ಕೇಂದ್ರ ಸಚಿವರಿಂದ ಬಂತು. ನ್ಯಾಯಾಲಯದಿಂದ ನಮಗೆ ನಿರಾಶೆಯಾಗಿದೆ. ಆದರೆ ಸುಗ್ರೀವಾಜ್ಞೆಯ ಆಶಾಭಾವನೆ ಇದೆ. ಜನತಾ ನ್ಯಾಯಾಲಯದಿಂದ ನಿರಾಶೆಯಾಗದು. ಮಂದಿರ ಒಂದೊಮ್ಮೆ ನಿರ್ಮಾಣವಾಯಿತೆಂದರೆ ಭಾರತವು ‘ಘೋಷಿತ ಹಿಂದೂ ರಾಷ್ಟ್ರ’ವಾಗಲಿದೆ ಎಂದು ಸಾರಿದರು.

ಇದನ್ನೂ ಓದಿ: ಅಯೋಧ್ಯೆ ಧರ್ಮಸಭಾ ಅಂತ್ಯ: ಮಂದಿರಕ್ಕಾಗಿ ಬಿಗಿಪಟ್ಟು!

ಸಭೆಯಲ್ಲಿ ಮಾತನಾಡಿದ ನಿರ್ಮೋಹಿ ಆಖಾಡಾದ ರಾಮಜೀ ದಾಸ್‌ ಅವರು, ‘ರಾಮಮಂದಿರ ನಿರ್ಮಾಣ ತಡವಾಗಲು ಇನ್ನು ಬಿಡುವುದಿಲ್ಲ. ಅಲಹಾಬಾದ್‌ (ಪ್ರಯಾಗರಾಜ್‌) ನಗರದಲ್ಲಿ ಮುಂದಿನ ವರ್ಷಾರಂಭಕ್ಕೆ ನಡೆಯಲಿರುವ ಕುಂಭಮೇಳದಲ್ಲಿ ಮಂದಿರ ನಿರ್ಮಾಣ ದಿನಾಂಕ ಘೋಷಿಸಲಾಗುತ್ತದೆ. ಅಲ್ಲಿಯವರೆಗೆ ಎಲ್ಲರೂ ತಾಳ್ಮೆಯಿಂದ ಇರಬೇಕು. ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಕೈಗೂಡಲಿದೆ’ ಎಂದು ಮನವಿ ಮಾಡಿದರು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿದೆ 221 ಅಡಿ ಎತ್ತರದ ರಾಮನ ಪ್ರತಿಮೆ

ರಾಮಜನ್ಮಭೂಮಿ ನ್ಯಾಸ್‌ನ ಅಧ್ಯಕ್ಷ ನೃತ್ಯ ಗೋಪಾಲದಾಸ್‌ ಮಾತನಾಡಿ, ‘ಇಷ್ಟೊಂದು ಜನ ಈ ಸಭೆಯಲ್ಲಿ ಪಾಲ್ಗೊಂಡಿರುವುದು, ರಾಮಮಂದಿರದ ಜತೆ ಹೇಗೆ ಜನ ಭಾವನಾತ್ಮಕವಾಗಿ ಬೆಸೆದಿದ್ದಾರೆ ಎಂಬುದನ್ನು ತೋರಿಸುತ್ತದೆ. ನ್ಯಾಯಾಲಯದ ಬಗ್ಗೆ ನಮಗೆ ನಂಬಿಕೆಯಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಗ್ಗೆ ನಮಗೆ ಗೌರವವಿದೆ. ಮಂದಿರ ನಿರ್ಮಾಣಕ್ಕೆ ಆದಿತ್ಯನಾಥ್‌ ದಾರಿ ಮಾಡಿಕೊಡಬೇಕು.

ಇದನ್ನೂ ಓದಿ: ಮೊದಲು ಮಂದಿರ, ನಂತರ ಸರ್ಕಾರ: ಅಯೋಧ್ಯೆ ಕೇಸರಿಮಯ!

ಇನ್ನೊಬ್ಬ ಮುಖಂಡ ಚಂಪತ್‌ ರೈ ಮಾತನಾಡಿ, ‘ಮಂದಿರದ ವಿವಾದಿತ ಜಮೀನನ್ನು ಭಾಗ ಮಾಡಲು ನಾವು ಒಪ್ಪಲ್ಲ. ಇಡೀ ವಿವಾದಿತ ಜಮೀನು ರಾಮಮಂದಿರಕ್ಕೇ ಸೇರಬೇಕು’ ಎಂದು ಹೇಳಿದರು.