ನವೆಂಬರ್ : ಉತ್ತರ ಪ್ರದೇಶ ಸರ್ಕಾರ ಒಟ್ಟು 221 ಮೀಟರ್ ಎತ್ತರದ ರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಿದೆ.  ರಾಮನ ಪ್ರತಿಮೆ  151 ಮೀಟರ್ ಇದ್ದು ಅದರ ಮೇಲಿನ ಛತ್ರಿಯ ಎತ್ತರ 20 ಮೀಟರ್ ಇರಲಿದೆ  ಅಲ್ಲಿನ ಸರ್ಕಾರದ ಮುಖ್ಯಕಾರ್ಯದರ್ಶಿ ಅವನೀಶ್ ಅವಸ್ಥಿ ಹೇಳಿದ್ದಾರೆ. 

ಅಲ್ಲದೇ ರಾಮನ ಮೂರ್ತಿಯ ಪೀಠದ ಎತ್ತರವು  50 ಅಡಿಯಷ್ಟು ಇರಲಿದೆ. ಅಲ್ಲದೇ ಇದೇ ಪ್ರದೇಶದಲ್ಲಿ ಮ್ಯೂಸಿಯಂ ಕೂಡ ಸ್ಥಾಪನೆ ಮಾಡಲಾಗುತ್ತದೆ ಎಂದು ಅವಸ್ಥಿ ತಿಳಿಸಿದ್ದಾರೆ. 

ಇನ್ನು ಪ್ರತಿಮೆಯನ್ನು ನಿರ್ಮಾಣ ಮಾಡಲು 5 ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಲಾಗುತ್ತಿದ್ದು ಈ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿಳಿಸಲಾಗುತ್ತದೆ. 

ಕಳೆದ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಸರ್ದಾರ್  ವಲ್ಲಭ ಬಾಯ್ ಪಟೇಲ್ ಅವರ 182 ಅಡಿ ಮೀಟರ್ ಎತ್ತರದ ವಿಗ್ರಹವನ್ನು ಉದ್ಘಾಟಿಸಿದ್ದರು. 

ಇದೀಗ ಉತ್ತರ ಪ್ರದೇಶ ಸರ್ಕಾರ  221 ಅಡಿ ಎತ್ತರದ ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ತಯಾರಿ ನಡೆಸಿದೆ. 

ಸದ್ಯ ಅಯೊಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ರಾಮಮಂದಿರ ವಿಚಾರವನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸುತ್ತಿವೆ. 

ಇತ್ತ ಶಿವಸೇನೆ ಮುಖಂಡ ಉದ್ದವ್ ಠಾಕ್ರೆ ಕೂಡ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿ, ಸರ್ಕಾರ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕಿದೆ ಎಂದಿದ್ದಾರೆ.