ಕಾಶ್ಮೀರಿ ಮಕ್ಕಳು ಶಾಲೆಗೆ ಹೋಗಲಿ ಎಂದ ಮಲಾಲ: ಶೋಭಾ ಸವಾಲಿಗೆ ವಿಲವಿಲ!
‘ಜಮ್ಮು- ಕಾಶ್ಮೀರದಲ್ಲಿನ ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಹೋಗಬೇಕು’|ಪಾಕಿಸ್ತಾನದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸಫ್ ಝಾಯಿ ಒತ್ತಾಸೆ| ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಮರಳುವಂತೆ ವಿಶ್ವಸಂಸ್ಥೆ ನೆರವಾಗಬೇಕು ಎಂದ ಮಲಾಲ| ‘ಜಮ್ಮು ಮತ್ತು ಕಾಶ್ಮೀರದಲ್ಲಿ ದೀರ್ಘ ಕಾಲದವರೆಗೆ ಶಾಲಾ-ಕಾಲೇಜುಗಳು ಮುಚ್ಚಿವೆ’| ವಿಶ್ವಸಂಸ್ಥೆ ಕಾಶ್ಮೀರಿಗಳ ಧ್ವನಿ ಕೇಳಬೇಕಿದೆ ಎಂದ ಮಲಾಲ| ಮಲಾಲ ಪಾಕ್’ನ ಅಲ್ಪಸಂಖ್ಯಾತ ಮಕ್ಕಳ ಕುರಿತು ಚಿಂತಿಸಲಿ ಎಂದ ಶೋಭಾ ಕರಂದ್ಲಾಜೆ|
ಇಸ್ಲಾಬಾಮಾದ್(ಸೆ.15): ಜಮ್ಮು- ಕಾಶ್ಮೀರದಲ್ಲಿನ ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಮರಳಲು ವಿಶ್ವಸಂಸ್ಥೆ ನೆರವಾಗಬೇಕು ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಹಾಗೂ ಪಾಕಿಸ್ತಾನಿ ಶಿಕ್ಷಣ ಹಕ್ಕುಗಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಒತ್ತಾಯಿಸಿದ್ದಾರೆ.
ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಳೆದ ಆಗಸ್ಟ್ 5 ರಿಂದಲೂ ಅಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಶಾಲಾ, ಕಾಲೇಜುಗಳು ಮುಚ್ಚಲ್ಪಟ್ಟಿವೆ ಎಂದು ಮಲಾಲ ಖೇದ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರಿಗಳ ಧ್ವನಿಗಳನ್ನು ಕೇಳಬೇಕಾಗಿದ್ದು, ಅಲ್ಲಿನ ಮಕ್ಕಳು ಸುರಕ್ಷಿತವಾಗಿ ಮರಳಿ ಶಾಲೆಗೆ ಹೋಗುವಂತಾಗಬೇಕು ಎಂದು ಮಲಾಲ ವಿಶ್ವಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ಮಲಾಲ ಟ್ವೀಟ್’ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಮಲಾಲ ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಮಕ್ಕಳ ಕುರಿತು ಇದೇ ಕಾಳಜಿ ವಹಿಸಲಿ ಎಂದು ಸವಾಲೆಸೆದಿದ್ದಾರೆ.