ವಾಷಿಂಗ್ಟನ್‌: ನೊಬೆಲ್‌ ಶಾಂತಿ ಪುರಸ್ಕೃತ ಪಾಕ್‌ ಮೂಲದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಪಾಕಿಸ್ತಾನದ ಮಲಾಲಾ ಯೂಸುಫ್‌ ಝೈ ಮೇಲೆ 2012ರಲ್ಲಿ ಗುಂಡಿನ ದಾಳಿ ಪ್ರಕರಣ ರೂವಾರಿ ತೆಹ್ರೀಕ್‌ ಎ ತಾಲಿಬಾನ್‌ ಉಗ್ರ ನಾಯಕ ಮೌಲಾನಾ ಫಜ್ಲುಲ್ಲಾ ಸೇರಿದಂತೆ ಮೂವರು ಉಗ್ರರ ಕುರಿತು ಮಾಹಿತಿ ನೀಡಿದವರಿಗೆ ಅಮೆರಿಕ ಸರ್ಕಾರ 70 ಕೋಟಿ ರು. ಭರ್ಜರಿ ಬಹುಮಾನ ಘೋಷಿಸಿದೆ.

ಮಲಾಲಾ ಮೇಲೆ ದಾಳಿ ನಡೆಸಿದ್ದ ಫಜ್ಲುಲ್ಲಾ ಇತರೆ ಹಲವು ಉಗ್ರ ದಾಳಿಗಳ ಹೊಣೆಯನ್ನೂ ಹೊತ್ತುಕೊಂಡಿದ್ದ. ಈತನ ಸುಳಿವು ಅಥವಾ ಈತ ಇರುವ ಜಾಗದ ಸುಳಿವು ಕೊಟ್ಟವರಿಗೆ ಅಮೆರಿಕ ಸರ್ಕಾರ 30 ಕೋಟಿ ರು.(5 ದಶಲಕ್ಷ ಡಾಲರ್‌) ಬಹುಮಾನ ಘೋಷಿಸಿದೆ. ಇನ್ನು ಜಮಾತ್‌ ಉಲ್‌ ಅಹ್ರರ್‌ ಸಂಘಟನೆಯ ಅಬ್ದುಲ್‌ ವಾಲಿ ಮತ್ತು ಲಷ್ಕರ್‌ ಎ ಇಸ್ಲಾಮ್‌ ಸಂಘಟನೆಯ ಮಂಗಲ್‌ ಭಾಗ್‌ಗೆ ಮಾಹಿತಿ ಕೊಟ್ಟವರಿಗೆ ತಲಾ 20 ಕೋಟಿ ರು. ಬಹುಮಾನ ನೀಡುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದೆ.

ಈ ಮೂವರನ್ನೂ ಈಗಾಗಲೇ ಅಮೆರಿಕ ಸರ್ಕಾರ ಜಾಗತಿಕ ಉಗ್ರರು ಎಂದು ಘೋಷಿಸಿದೆ.’