ಶ್ರೀನಗರ(ಸೆ.14): ಗಡಿಯಲ್ಲಿ ಪದೇ ಪದೇ ಭಾರತೀಯ ಸೈನಿಕರನ್ನು ಕೆಣಕುವ ದುಸ್ಸಾಹಸ ಮಾಡುವ ಪಾಕ್ ಸೈನಿಕರು, ಕೊನೆಗೆ ಸೇರುವುದು ಯಮನ ಪಾದವನ್ನೇ. ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪೋಸ್ಟ್ ಮೇಲೆ ದಾಳಿ ಮಾಡಲೆತ್ನಿಸಿದ ಪಾಕ್ ಸೈನಿಕರನ್ನು ಭಾರತೀಯ ಸೇನೆ ಸದೆ ಬಡೆದಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಬಳಿ ಇರುವ ಹಾಜಿಪುರ್ ಸೆಕ್ಟರ್ ಬಳಿ, ಭಾರತೀಯ ಪೋಸ್ಟ್ ಮೇಲೆ ದಾಳಿ ಮಾಡಲೆತ್ನಿಸಿದ ಪಾಕ್ ಸೈನಿಕರನ್ನು ಭಾರತೀಯ ಸೇನೆ ಕೊಂದು ಹಾಕಿದೆ. ಭಾರತೀಯ ಸೈನಿಕರ ಆರ್ಭಟಕ್ಕೆ ಬಿಲ ಸೇರಿದ ಪಾಕ್ ಸೈನಿಕರು, ದಾಳಿಯಲ್ಲಿ ಸತ್ತ ತಮ್ಮ ಸಹೋದ್ಯೋಗಿಗಳ ಶವ ಕೊಂಡೊಯ್ಯಲು ಬಿಳಿ ಧ್ವಜ ತೋರಿಸಿದ ಘಟನೆ ನಡೆದಿದೆ.

ದಾಳಿಯಲ್ಲಿ ಹತನಾದ ಪಾಕ್ ಸೈನಿಕ ಗುಲಾಂ ರಸೂಲ್ ಅವರ ಪಾರ್ಥೀವ ಶರೀರವನ್ನು ವಾಪಸ್ ಪಡೆಯಲು ಪಾಕಿಸ್ತಾನಿ ಸೇನಾಧಿಕಾರಿಗಳು ಬಿಳಿ ಧ್ವಜ ಪ್ರದರ್ಶಿಸಿ, ಶವ ಕೊಂಡೊಯ್ಯುವವರೆಗೂ ದಾಳಿ ಮಾಡದಂತೆ ಭಾರತೀಯ ಸೈನಿಕರಲ್ಲಿ ಮನವಿ ಮಾಡಿದ್ದಾರೆ. 

ಕಳೆದ ಜುಲೈ 30-31ರಂದು ಕೆರಾನ್ ಸೆಕ್ಟರ್'ನಲ್ಲಿ ನಡೆದ ಕದನ ವಿರಾಮ ಉಲ್ಲಂಘನೆ ವೇಳೆ, ಪಾಕಿಸ್ತಾನದ ಏಳು ಸೈನಿಕರನ್ನು ಭಾರತೀಯ ಸೇನೆ ಹತ್ಯೆಗೈದಿದ್ದನ್ನು ಇಲ್ಲಿ ಸ್ಮರಿಸಬಹುದು.