ಯುದ್ಧದಲ್ಲಿ ನಾವು ಸೋಲ್ತೀವಿ: ಇಮ್ರಾನ್ ಹೇಳಿಕೆ ನಾವೂ ಮೆಚ್ತೀವಿ!
ಭಾರತ-ಪಾಕ್ ಯುದ್ಧವಾದರೆ ನಾವು ಸೋಲುತ್ತೇವೆ ಎಂದ ಇಮ್ರಾನ್| ಯುದ್ಧದ ಪರಿಣಾಮದ ಸತ್ಯ ಒಪ್ಪಿಕೊಂಡ ಪಾಕಿಸ್ತಾನ ಪ್ರಧಾನಿ| ಯುದ್ಧದ ಘೋರ ಪರಿಣಾಮ ಎರಡೂ ರಾಷ್ಟ್ರಗಳೂ ಉಣ್ಣಬೇಕು ಎಂದ ಇಮ್ರಾನ್| ಭಾರತದೊಂದಿಗೆ ಪರಮಾಣು ಯುದ್ಧದ ನಿರೀಕ್ಷೆ ಕ್ಷೀಣ ಎಂದ ಇಮ್ರಾನ್ ಖಾನ್| ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದಿಂದ ದೌರ್ಜನ್ಯ ಎಂದು ಆರೋಪಿಸಿದ ಪಾಕ್ ಪ್ರಧಾನಿ| ಕಾಶ್ಮೀರದ ಸ್ವಾತಂತ್ರ್ಯ ಪ್ರತಿಯೊಬ್ಬ ಭಾರತೀಯನ ಕನಸು ಎಂದ ಇಮ್ರಾನ್|
ಇಸ್ಲಾಮಾಬಾದ್(ಸೆ.15): ಒಂದು ವೇಳೆ ಭಾರತ-ಪಾಕಿಸ್ತಾನ ನಡುವೆ ಯುದ್ಧವಾದರೆ ನಮಗೆ ಸೋಲಾಗಲಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸತ್ಯ ಒಪ್ಪಿಕೊಂಡಿದ್ದಾರೆ.
ಅಲ್ ಜಜೀರಾ ಸುದ್ದಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಇಮ್ರಾನ್ ಖಾನ್, ಭಾರತದೊಂದಿಗಿನ ಯುದ್ಧದಲ್ಲಿ ನಮಗೆ ಸೋಲಾದರೂ ಅದರ ಘೋರ ಪರಿಣಾಮ ಮಾತ್ರ ಎರಡೂ ರಾಷ್ಟ್ರಗಳು ಉಣ್ಣಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನಾವು ಯುದ್ಧದಲ್ಲಿ ಸೋತರೂ ಯುದ್ಧದಿಂದಾಗುವ ಘೋರ ಪರಿಣಾಮವನ್ನೂ ಭಾರತವೂ ಎದುರಿಸಬೇಕಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಭಾರತದೊಂದಿಗೆ ಪರಮಾಣು ಯುದ್ಧದ ನಿರೀಕ್ಷೆ ಕ್ಷೀಣ ಎಂದಿರುವ ಇಮ್ರಾನ್, ಒಂದು ವೇಳೆ ಯುದ್ಧವೊಂದೇ ಪರಿಹಾರವಾದರೆ ನಾವು ನಮ್ಮ ಘನತೆಗಾಗಿ, ಸ್ವಾತಂತ್ರ್ಯಕ್ಕಾಗಿ ಕೊನೆವರೆಗೂ ಹೋರಾಡುತ್ತೇವೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರವನ್ನು ಭಾರತ ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಅದರ ಸ್ವಾತಂತ್ರ್ಯ ಪ್ರತಿಯೊಬ್ಬ ಪಾಕಿಸ್ತಾನಿಯ ಕನಸು ಎಂದು ಪಾಕ್ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯದ ಬಾಗಿಲು ಬಡಿಯುವುದೊಂದೇ ತಮ್ಮ ಮುಂದಿರುವ ಮಾರ್ಗ ಎಂದು ಇಮ್ರಾನ್ ತಿಳಿಸಿದ್ದಾರೆ.